ಚಿಂತಾಮಣಿ: ಅದು 1936ರ ಮೇ 31. ಚಿಂತಾಮಣಿ ಪಟ್ಟಣದಲ್ಲಿ ಸಂಭ್ರಮ. ಸ್ವಾತಂತ್ರ್ಯದ ಹುರುಪು. ಹಳ್ಳಿಹಳ್ಳಿಗಳಿಂದಲೂ ಬಂದು ಸೇರಿದ್ದ ಜನರು. ಹೀಗೆ ನಗರವೇ ಸಂಭ್ರಮದಲ್ಲಿ ಮಿಂದಿತ್ತು.
ಇದಕ್ಕೆ ಕಾರಣ ಮೇ 31 ರಂದು ಚಿಂತಾಮಣಿಗೆ ಮಹಾತ್ಮ ಗಾಂಧೀಜಿ ಬಂದಿದ್ದರು. ಆಗ ಪುರಸಭೆಯ ಪರವಾಗಿ ಸನ್ಮಾನ ಪತ್ರವನ್ನು ಅರ್ಪಿಸಲಾಯಿತು. ಅಂದಿನ ಸರ್ಕಾರಿ ಪ್ರೌಢಶಾಲೆಯ (ಮಹಾತ್ಮ ಗಾಂಧಿ ಸರ್ಕಾರಿ ಪ್ರೌಢಶಾಲೆ) ಆವರಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪುರಸಭೆಯಿಂದ ಬಿನ್ನವತ್ತಳೆ ಸ್ವೀಕರಿಸಿದರು.
ಸನ್ಮಾನ ಸ್ವೀಕರಿಸಿ, ಹರಿಜನೋದ್ಧಾರ ಮತ್ತು ಹಿಂದಿ ವಿಷಯದ ಕುರಿತು ಮಾತನಾಡಿದರು. ಹಿಂದಿ ಭಾಷೆಯು ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲ ಭಾಷೆಗಳನ್ನು ತುಳಿಯುತ್ತದೆ ಎಂಬ ತಪ್ಪ ಅಭಿಪ್ರಾಯ ನೆಲೆಸಿದೆ. ಹಿಂದಿಯು ಕನ್ನಡ ಸೇರಿದಂತೆ ಯಾವುದೇ ಭಾಷೆಯನ್ನು ತುಳಿಯುವುದಿಲ್ಲ. ಈ ರೀತಿ ಭಾವಿಸುವುದು ಮೂರ್ಖತನ. ಹಿಂದಿಯಿಂದ ಪ್ರಾಂತೀಯ ಭಾಷೆಗಳಿಗೂ ಸಹಾಯವಾಗುತ್ತದೆ ಎಂದು ಗಾಂಧಿ ಚಿಂತಾಮಣಿ ನೆಲದಲ್ಲಿ ನಿಂತು ಹೇಳಿದ್ದರು.
ಇಂಗ್ಲಿಷ್ ಭಾಷೆಗೆ ವಿಶ್ವದಲ್ಲಿ ಗಣ್ಯ ಸ್ಥಾನವಿದ್ದರೂ ಅದು ಭಾರತೀಯರ ರಾಷ್ಟ್ರ ಭಾಷೆ ಆಗಲು ಸಾಧ್ಯವಿಲ್ಲ. ನನಗೆ ಕನ್ನಡ ಭಾಷೆ ಬರುತ್ತಿದ್ದರೆ ಚೆನ್ನಾಗಿತ್ತು. ನನ್ನ ಜೀವಿತಾವಧಿಯಪೊಳಗೆ ವಿದ್ಯಾವಂತರೆಲ್ಲ ಹಿಂದಿಯನ್ನು ಕಲಿಯುತ್ತಾರೆ ಎಂಬ ನಂಬಿಕೆ ಇದೆ ಎಂದು ತಿಳಿಸಿ ಕೊನೆಯಲ್ಲಿ ಭರತಖಂಡದಲ್ಲಿ ರಾಮರಾಜ್ಯ ಸ್ಥಾಪಿತವಾಗಲಿ ಎಂದು ಹಾರೈಸಿದ್ದರು ಎಂದು ಇತಿಹಾಸ ತಜ್ಞ ಪ್ರೊ.ತಳಗವಾರ ನಾಗರಾಜ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು
ಹೀಗೆ ಅಂದಿನ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಪ್ರವಾಸ ನಡೆಸಿದ್ದ ಮಹಾತ್ಮ ಗಾಂಧೀಜಿ ಅವರು ಚಿಂತಾಮಣಿಗೂ ಭೇಟಿ ನೀಡಿದ್ದರು.
1936ರ ಮೇ 11 ರಿಂದ ಮೇ 31ರವರೆಗೆ ಗಾಂಧಿ ಅವರು ಚಿಕ್ಕಬಳ್ಳಾಪುರದ ನಂದಿಬೆಟ್ಟದಲ್ಲಿ ವಿಶ್ರಾಂತಿ ಪಡೆದಿದ್ದರು. ನಂತರ ಕೆ.ಸಿ.ರೆಡ್ಡಿ ಒತ್ತಾಯದ ಮೇರೆಗೆ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಒಂದು ದಿನ ಪ್ರವಾಸ ಕೈಗೊಂಡು 150 ಕಿ.ಮೀ. ಪ್ರಯಾಣ ಮಾಡಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿ ತುಂಬಿದರು. ಮೇ 11 ರಂದು ತಾವೇ ಸ್ವತಃ ನಂದಿಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹತ್ತಿದ್ದರು. ಮೇ 31 ರಂದು ಚಿಕ್ಕಬಳ್ಳಾಪುರ ಮಾರ್ಗವಾಗಿ ಶಿಡ್ಲಘಟ್ಟ, ಚಿಂತಾಮಣಿ, ಕೋಲಾರ, ಬಂಗಾರಪೇಟೆ ಮೂಲಕ ಸಾಗಿ ಹರಿಜನ ನಿಧಿ ಸಂಗ್ರಹಿಸಿದರು.
ಕೋಲಾರ ಜಿಲ್ಲಾ ಹರಿಜನ ಸೇವಾ ಸಂಘ ಮತ್ತು ಜಿಲ್ಲಾ ಬೋರ್ಡ್ ಅಧ್ಯಕ್ಷರಾಗಿದ್ದ ಕೆ.ಸಿ.ರೆಡ್ಡಿ ಅವರು, ಜಿಲ್ಲೆಯಲ್ಲಿ ಹರಿಜನ ನಿಧಿ ಸಂಗ್ರಹಕ್ಕಾಗಿ ಪ್ರವಾಸ ಮಾಡಬೇಕು ಎಂದು ವಿನಂತಿಸಿದ್ದರು. ಅವರ ಮನವಿ ಒಪ್ಪಿ, ಗಾಂಧೀಜಿ ಮತ್ತು ಅವರ ತಂಡವು ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ಕಾರ್ಯಕ್ರಮಗಳನ್ನು ಮುಗಿಸಿ ಚಿಂತಾಮಣಿಗೆ ಬಂದಾಗ ಸಾರ್ವಜನಿಕರು ಭವ್ಯ ಸ್ವಾಗತ ಕೋರಿದರು.
ಅಂದಿನ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ವಿಶ್ರಾಂತಿ ಪಡೆದಿದ್ದು ಕೋಲಾರ ಜಿಲ್ಲೆಯ ಹೆಮ್ಮೆಯ ವಿಷಯವಾಗಿದೆ. ಗಾಂಧೀಜಿ ತಮ್ಮ ಸಂಚಾರದ ಸಮಯದಲ್ಲಿ 1915ರ ಮೇ 20ರಂದು ಮದ್ರಾಸಿನಿಂದ ಬೆಂಗಳೂರಿಗೆ ರೈಲಿನಲ್ಲಿ ಬಂದಿದ್ದರು. ಬಂಗಾರಪೇಟೆಯ ಗುಜರಾತಿ ವರ್ತಕರು ಗಾಂಧೀಜಿ ಅವರನ್ನು ರೈಲು ನಿಲ್ದಾಣದಲ್ಲಿ ಭೇಟಿ ಮಾಡಿ ಹೂಮಾಲೆ ಹಾಕಿ ಸತ್ಕರಿಸಿದ್ದರು.
ತಮ್ಮ ನಾಡಿಗೆ ಸೇರಿದ ಗಾಂಧೀಜಿಯವರನ್ನು ನೋಡುವುದು ಇಲ್ಲಿನ ವರ್ತಕ ಸಮುದಾಯವಾದ ಗುಜರಾತಿಗರಲ್ಲಿ ಅತ್ಯಂತ ಉತ್ಸಾಹ ಅಡಗಿತ್ತು. ಇದು ಜಿಲ್ಲೆಗೆ ಗಾಂಧೀಜಿಯ ಮೊದಲ ಭೇಟಿಯಾಗಿದ್ದು ಜನರಲ್ಲಿ ಸ್ವಾತಂತ್ಯ ಹೋರಾಟಕ್ಕೆ ಮತ್ತಷ್ಟು ಪ್ರೋತ್ಸಾಹ ದೊರೆತಂತಾಯಿತು ಎಂದು ಜಿಲ್ಲೆಯ ಇತಿಹಾಸದಲ್ಲಿ ದಾಖಲಾಗಿದೆ.
1927 ಆನಾರೋಗ್ಯದ ನಿಮಿತ್ತ ಎರಡನೇ ಬಾರಿಗೆ ನಂದಿ ಗಿರಿಧಾಮದಲ್ಲಿ 45 ದಿನ ತಂಗಿದ್ದು ವಿಶ್ರಾಂತಿ ಪಡೆದಿದ್ದರು. ಅವರ ಮಡದಿ ಕಸ್ತೂರ ಬಾ ಜೊತೆಗೆ ಇದ್ದರು. ಹಂಜಾ ಹುಸೇನ್, ರಾಮಚಂದ್ರ, ಕೆ.ಸಿ.ರೆಡ್ಡಿ, ಟಿ.ರಾಮಾಚಾರ್, ಕೆ.ಸಂಪಂಗಿರಾಮಯ್ಯ, ಎನ್.ಸಿ.ನಾಗಯ್ಯರೆಡ್ಡಿ ಹಾಗೂ ಇತರ ನಾಯಕರು ನಂದಿಬೆಟ್ಟದಲ್ಲಿ ತಂಗಿದ್ದರು. 45 ದಿನಗಳ ವಾಸವಿದ್ದ ಗಾಂಧೀಜಿ ತಮ್ಮ ಆರೋಗ್ಯ ಸುಧಾರಿಸಿದಾಗ 1927 ಜೂನ್ 5ರಂದು ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರು ತಲುಪಿದರು.
ಹರಿಜನ ನಿಧಿ ಸಂಗ್ರಹಕ್ಕಾಗಿ ಹೊರಟ ಗಾಂಧೀಜಿಯವರಿಗೆ ಚಿಕ್ಕಬಳ್ಳಾಪುರ, ಶಿಡ್ಲಘಟ್ಟದಲ್ಲಿ ತಲಾ ₹ 100, ಚಿಂತಾಮಣಿ, ಕೋಲಾರದಲ್ಲಿ ತಲಾ ₹ 200, ಬಂಗಾರಪೇಟೆಯಲ್ಲಿ ₹ 261, ಕೆ.ಜಿ.ಎಫ್ ನಲ್ಲಿ ₹ 617ಗಳನ್ನು ಸಾರ್ವಜನಿಕರು ಮತ್ತು ಪುರಸಭೆಯು ದೇಣಿಗೆಯಾಗಿ ಅರ್ಪಿಸಿತ್ತು.
1932ರಲ್ಲಿ ಗಾಂಧೀಜಿಯವರ ನಾಗರಿಕರ ಅಸಕಾರ ಚಳವಳಿ ಸಂದರ್ಭದಲ್ಲಿ ಅವರ ಬಂಧನವನ್ನು ವಿರೋಧಿಸಿ ಚಿಂತಾಮಣಿಯಲ್ಲೂ ತೀವ್ರ ಪ್ರತಿಭಟನೆ, ಹರತಾಳ ನಡೆದಿತ್ತು. ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಶಾಲಾ ಕಾಲೇಜು ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆಗೆ ಇಳಿದಿದ್ದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹೋರಾಟದ ಕಹಳೆ ಮೊಳಗಿಸಿದ್ದರು ಎಂದು ಹಿರಿಯರು ಸ್ಮರಿಸುತ್ತಾರೆ.
ಗಾಂಧಿಯಿಂದ ಪ್ರೌಢಶಾಲೆ ಹೆಸರು ಬದಲು
ಚಿಕ್ಕಬಳ್ಳಾಪುರ ಚಿಂತಾಮಣಿ ಶಿಡ್ಲಘಟ್ಟ ಕೋಲಾರ ಬಂಗಾರಪೇಟೆ ಮತ್ತು ಮಾಲೂರು ತಾಲ್ಲೂಕುಗಳಲ್ಲಿ ಗಾಂಧೀಜಿ ಅವರ ನೆನಪಿಗಾಗಿ ಮುಖ್ಯ ರಸ್ತೆಗಳಿಗೆ ಗಾಂಧೀಜಿ (ಎಂ.ಜಿ.ರಸ್ತೆ) ಹೆಸರನ್ನು ಇಡಲಾಗಿದೆ. ಚಿಂತಾಮಣಿಯಲ್ಲಿ ಅವರು ಭೇಟಿ ನೀಡಿದ್ದ ಹಾಗೂ ಕಾರ್ಯಕ್ರಮ ಏರ್ಪಡಿಸಿದ್ದ ನೆನಪಿಗಾಗಿ ಸರ್ಕಾರಿ ಪ್ರೌಢಶಾಲೆಯನ್ನು ಮಹಾತ್ಮ ಗಾಂಧಿ ಸರ್ಕಾರಿ ಪ್ರೌಢಶಾಲೆ ಎಂದು ಮರುನಾಮಕರಣ ಮಾಡಿ ನೋಂದಣಿ ಮಾಡಿಸಲಾಗಿದೆ. ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಾಧವರಾವ್ ಎಂಬ ಶಿಕ್ಷಕರು ಗಾಂಧಿ ಭೇಟಿಯ ನೆನಪಿಗಾಗಿ ಶಾಲೆಯಲ್ಲಿ ಗಾಂಧಿ ಪುತ್ಥಳಿ ಸ್ಥಾಪಿಸಿದರು. ಇಂದಿಗೂ ಗಾಂಧಿ ಪುತ್ಥಳಿಯನ್ನು ಕಾಣಬಹುದು.
ಗಾಂಧೀಜಿ ಅವರ ಅಹಿಂಸಾತ್ಮಕ ಸ್ವಾತಂತ್ರ್ಯ ಹೋರಾಟಕ್ಕೆ ಚಿಂತಾಮಣಿ ತಾಲ್ಲೂಕಿನ ವಿ.ಸೀತಪ್ಪ ಆಂಜನೇಯರೆಡ್ಡಿ ಟಿ.ಕೆ.ಗಂಗಿರೆಡ್ಡಿ ಊಲವಾಡಿ ನಾರಾಯಣರೆಡ್ಡಿ ಕೆ.ಎಸ್.ಶ್ರೀನಿವಾಸಮೂರ್ತಿ ದೇವಳಂ ವೆಂಕಟಶಾಮಪ್ಪ ಕೆ.ರಾಮಶೇಷಾ ಶಾಸ್ತ್ರಿ ರಂಗಯ್ಯಶೆಟ್ಟಿ ಸಿ.ಕೃಷ್ಣಯ್ಯಶೆಟ್ಟಿ ಎಂ.ಕೆ.ನಾರಾಯಣಪ್ಪ ಮುತ್ತುಕದಹಳ್ಳಿ ಗೋಪಲಗೌಡ ದೊಡ್ಡಬೊಮ್ಮನಹಳ್ಳಿ ಮುನಿಶಾಮಿರೆಡ್ಡಿ ಬಿ.ಮುನಿಸ್ವಾಮಪ್ಪ ಜಿ.ಎಸ್.ಚೌಡಪ್ಪ ಸೇರಿದಂತೆ ಹಲವು ನಾಯಕರು ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಪ್ರೌಢಶಾಲಾ ಶಿಕ್ಷಕ ದೇವತಾ ದೇವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.