ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಸಕಾಲಕ್ಕೆ ಸಾಲ ತಪ್ಪದೆ ಮರುಪಾವತಿಸಿ

ಆರ್ಯ ವೈಶ್ಯ ಅಭಿವೃದ್ಧಿ ನಿಗಮ ಮಂಡಳಿಯ ವಿವಿಧ ಯೋಜನೆಗಳ ಸಾಲ ಸೌಲಭ್ಯ ವಿತರಣೆ ಕಾರ್ಯಕ್ರಮ
Last Updated 19 ಜೂನ್ 2020, 15:23 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಆರ್ಯ ವೈಶ್ಯ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. ಫಲಾನುಭವಿಗಳು ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸಿ ಇತರ ಕುಟುಂಬಗಳಿಗೂ ಅನುಕೂಲ ಕಲ್ಪಿಸಲು ನೆರವಾಗಬೇಕು’ ಎಂದು ಆರ್ಯ ವೈಶ್ಯ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಅರುಣ್ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಆರ್ಯ ವೈಶ್ಯ ಅಭಿವೃದ್ಧಿ ನಿಗಮ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ 87 ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ತಲಾ ₹1 ಲಕ್ಷದಂತೆ ₹87 ಲಕ್ಷ ಸಾಲ ನೀಡಲಾಗುತ್ತಿದೆ. ನನ್ನ ವಿವೇಚನಾಧಿಕಾರ ಬಳಸಿ ₹13 ಲಕ್ಷ ಹೆಚ್ಚುವರಿಯಾಗಿ ನೀಡಲು ಕ್ರಮಕೈಗೊಳ್ಳಲಾಗಿದೆ. ಜಿಲ್ಲೆಯ100 ಕುಟುಂಬಗಳಿಗೆ ಒಟ್ಟು ₹1 ಕೋಟಿ ಸಾಲ ನೀಡಲಾಗುತ್ತದೆ’ ಎಂದು ತಿಳಿಸಿದರು.

‘ರಾಜ್ಯ ಆರ್ಯವೈಶ್ಯ ಅಭಿವೃದ್ಧಿ ನಿಗಮದಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ಸೌಲಭ್ಯ ಹಾಗೂ ಸ್ವಯಂ ಉದ್ಯೋಗ ಕೈಗೊಳ್ಳಲು ನೇರ ಸಾಲ ಯೋಜನೆಗಳನ್ನು ಇದೇ ಮೊದಲ ಬಾರಿಗೆ ರಾಜ್ಯದಾದ್ಯಂತ ಆರಂಭಿಸಲಾಗಿದೆ. ಈ ಯೋಜನೆಯಡಿ ಎಂಜಿನಿಯರಿಂಗ್, ವೈದ್ಯಕೀಯ, ದಂತವೈದ್ಯಕೀಯ ಇತ್ಯಾದಿ ವೃತ್ತಿಪರ ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಸಿಇಟಿ ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶೇ2ರ ಬಡ್ಡಿದರದಲ್ಲಿ ಗರಿಷ್ಠ ₹1 ಲಕ್ಷ ಶೈಕ್ಷಣಿಕ ಸಾಲ ಮಂಜೂರು ಮಾಡಲಾಗುವುದು’ ಎಂದು ಹೇಳಿದರು.

‘ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಅಡಿಯಲ್ಲಿ ಆರ್ಯವೈಶ್ಯ ಸಮುದಾಯಕ್ಕೆ ಸೇರಿದ ಅರ್ಜಿದಾರರು ಸ್ವಯಂ ಉದ್ಯೋಗ ಕೈಗೊಳ್ಳಲು ಗರಿಷ್ಠ ₹1 ಲಕ್ಷ ಆರ್ಥಿಕ ನೆರವು ಒದಗಿಸಲಾಗುವುದು. ಸಾಂಪ್ರದಾಯಕ ವೃತ್ತಿ ಗಳಲ್ಲದೆ ಹಸು ಸಾಕಾಣಿಕೆ, ಸೇವಾ ಚಟುವಟಿಕೆಗಳು ಚಕ್ಕಲಿ, ನಿಪ್ಪಟ್ಟು ತಯಾರಿಸಿ ಮಾರಾಟ ಮಾಡುವ ಸಣ್ಣ ವ್ಯಾಪಾರಿಗಳು ಸಹ ಈ ನೆರವು ಪಡೆದುಕೊಳ್ಳಬಹುದು’ ಎಂದರು.

‘ಯೋಜನೆ ಅಡಿ ಕನಿಷ್ಠ ₹50 ಸಾವಿರ ನೆರವು ಒದಗಿಸಲಾಗುವುದು. ಈ ಮೊತ್ತದಲ್ಲಿ ಶೇ 20 ರಷ್ಟು ಸಹಾಯಧನವಾಗಿ ಉಳಿದ ಮೊತ್ತವನ್ನು ಸಾಲದ ರೂಪದಲ್ಲಿ ವಾರ್ಷಿಕ ಶೇ 4ರ ಬಡ್ಡಿ ದರದಲ್ಲಿ ನೀಡಲಾಗುವುದು. ಅರ್ಜಿದಾರರು 45 ವರ್ಷಕ್ಕಿಂತ ಒಳಗಿನವರಾಗಿರಬೇಕು’ ಎಂದು ಮಾಹಿತಿ ನೀಡಿದರು.

‘ಸಾಲ ಪಡೆದೆ ಫಲಾನುಭವಿಗಳು ಕಡೆಗಣನೆ ಮಾಡದೆ ಮರುಪಾವತಿ ಮಾಡಿ ಆರ್ಯ ವೈಶ್ಯ ಅಭಿವೃದ್ಧಿ ನಿಗಮ ಮಂಡಳಿ ಉಳಿಸಬೇಕು ಹಾಗೂ ಮುಂದಿನ ದಿನಗಳಲ್ಲಿ ಉಳಿದ ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡಲಾಗುತ್ತದೆ ಈ ಹಣವನ್ನು ವ್ಯಾಪಾರ ವಹಿವಾಟಿಗೆ ಉಪಯೋಗಿಸಿಕೊಂಡು ಅಭಿವೃದ್ಧಿಯಾಗುವುದರ ಜೊತೆಗೆ ಕೌಶಲ್ಯಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು’ ಎಂದು ಹೇಳಿದರು.

‘ಮುಂದಿನ ದಿನಗಳಲ್ಲಿ ಆರ್ಯ ವೈಶ್ಯ ಸಮುದಾಯದವರು ನಿಗಮ ಮಂಡಳಿ ಜೊತೆ ಸಂಪರ್ಕ ಇಟ್ಟುಕೊಳ್ಳಬೇಕು ಹಾಗೂ ಈ ಸಮುದಾಯಕ್ಕೆ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ನೀಡಲಾಗುತ್ತಿದೆ ಇದನ್ನು ಜಿಲ್ಲೆಯ ಆರ್ಯ ವೈಶ್ಯದ ಸಮುದಾಯದವರು ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

‘ರಾಜ್ಯ ಸರ್ಕಾರ ಕೊರೊನಾ ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ ಆದ್ದರಿಂದಲೇ ರಾಜ್ಯದಲ್ಲಿ ಕೊರೊನಾ ನಿಯಂತ್ರಿಸಲು ಸಾಧ್ಯವಾಗುತ್ತಿದೆ. ಎಲ್ಲರೂ ಕಡ್ಡಾಯವಾಗಿ ಮುಖಗವಸು ಉಪಯೋಗಿಸಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಸ್ವದೇಶಿ ವಸ್ತುಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ವ್ಯವಸ್ಥಾಪಕರಾದ ಬಸವರಾಜು, ಸಭೆಯಲ್ಲಿ ಆರ್ಯ ವೈಶ್ಯ ಸಮುದಾಯ ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT