ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜಕೀಯಕ್ಕಾಗಿ ಸಂವಿಧಾನಕ್ಕೆ ವಿರುದ್ಧ ಮಾತು: ಸಚಿವ ಡಾ.ಎಂ.ಸಿ.ಸುಧಾಕರ್

ಗಣರಾಜ್ಯೋತ್ಸವ; ಪರೋಕ್ಷವಾಗಿ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಉಸ್ತುವಾರಿ ಸಚಿವ
Published 26 ಜನವರಿ 2024, 13:19 IST
Last Updated 26 ಜನವರಿ 2024, 13:19 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದ ಸರ್‌.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ 75 ನೇ ಗಣರಾಜ್ಯೋತ್ಸವ ಸಂಭ್ರಮದಿಂದ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ರಾಷ್ಟ್ರ ಧ್ವಜಾರೋಹಣ ನಡೆಸಿದರು. 

ಬಳಿಕ ಮಾತನಾಡಿದ ಸುಧಾಕರ್, ‘ಸರ್ವರಿಗೂ ಸಮಪಾಲು, ಸಮಬಾಳು ಎನ್ನುವುದು ಸಂವಿಧಾನದ ಉದ್ದೇಶವಾಗಿದೆ. ಇದರಿಂದ ದೇಶದ ಎಲ್ಲ ನಾಗರಿಕರು ಸಮಾಧಾನದ ಬದುಕು ಸಾಗಿಸಲು ಸಾಧ್ಯವಾಗಿದೆ. ಅಗತ್ಯಕ್ಕೆ ತಕ್ಕಂತೆ ಕಾಲಕ್ಕೆ ಅನುಗುಣವಾಗಿ ಸಂವಿಧಾನವನ್ನು ತಿದ್ದುಪಡಿ ಮಾಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ಉದ್ದೇಶಕ್ಕಾಗಿ ಸಂವಿಧಾನ ತಿದ್ದುಪಡಿ ಮತ್ತು ಸಂವಿಧಾನದ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಬಿಜೆಪಿ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. 

‘ಆದ್ದರಿಂದ ಸರ್ಕಾರ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಂಡಿದೆ. ನಿಮ್ಮ ಗ್ರಾಮ, ವಾರ್ಡ್‌ಗಳಿಗೆ ಜಾಥ ಬಂದ ವೇಳೆ ಎಲ್ಲರೂ ಸಹಕಾರ ನೀಡಬೇಕು’ ಎಂದು ಕೋರಿದರು.

ಜಿಲ್ಲೆಯಲ್ಲಿ ಪ್ಲಾಸ್ಟಿಕ್ ನಿಷೇಧದ ಘೋಷಣೆ ಮಾಡಲಾಗಿದೆ. ಆದರೆ ನಾಗರಿಕರಿಂದ ನಿರೀಕ್ಷಿತ ಸಹಕಾರ ದೊರೆಯುತ್ತಿಲ್ಲ. ನಾಗರಿಕರು ಇಂತಹ ಕಾರ್ಯಗಳಿಗೆ ಸಹಕಾರ ನೀಡಬೇಕು ಎಂದರು.

ನಂದಿ ಗಿರಿಧಾಮಕ್ಕೆ ರೋಪ್ ವೇ ನಿರ್ಮಿಸಬೇಕು ಎನ್ನುವ ಬಯಕೆ ಈ ಹಿಂದಿನಿಂದಲೂ ಇದೆ. ಆದರೆ ಕಾರ್ಯಗತಕ್ಕೆ ಹಲವು ಸಮಸ್ಯೆಗಳು ಇವೆ. ಸಮಸ್ಯೆಗಳ ಪರಿಹಾರಕ್ಕೆ ಮೂರ್ನಾಲ್ಕು ಸಭೆಗಳನ್ನು ಸಹ ನಡೆಸಲಾಗಿದೆ. ಹಂತ ಹಂತವಾಗಿ ಸಮಸ್ಯೆಗಳನ್ನು ಪರಿಹರಿಸಲಾಗುವುದು. ನಂದಿಬೆಟ್ಟವನ್ನು ಅಂತರರಾಷ್ಟ್ರೀಯ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದು ಹೇಳಿದರು.

ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆಗೆ ಈಗಾಗಲೇ ಕ್ರಮವಹಿಸಲಾಗಿದೆ. ಚಿಂತಾಮಣಿಯಲ್ಲಿ ಎಂಜಿನಿಯರಿಂಗ್ ಕಾಲೇಜು ನಿರ್ಮಾಣಕ್ಕೆ 10 ಎಕರೆ ಜಾಗ ಮಂಜೂರು ಮಾಡಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ಕನ್ನಡ ಭವನ ಕಾಮಗಾರಿ ಪೂರ್ಣಕ್ಕೆ ಇನ್ನೂ ₹ 6.5 ಕೋಟಿ ಅಗತ್ಯವಿದೆ. ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಜೊತೆ ಮಾತುಕತೆ ನಡೆಸಿದ್ದು ಹಂತ ಹಂತವಾಗಿ ಹಣ ಬಿಡುಗಡೆ ಆಗಲಿದೆ ಎಂದರು.

ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ನಾಗರಿಕ ಪೊಲೀಸ್ ತಂಡ, ಜಿಲ್ಲಾ ಮಹಿಳಾ ಪೊಲೀಸ್ ತಂಡ, ಅರಣ್ಯ ಇಲಾಖೆ, ಗೃಹರಕ್ಷಕ ದಳ, ಎನ್.ಸಿ.ಸಿ, ಭಾರತ ಸೇವಾದಳ, ಪಂಚಗಿರಿ ಬೋಧನಾ ಶಾಲೆ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಕ್ವಾಯಟ್ ಕಾರ್ನರ್ ಪ್ರೌಢಶಾಲೆ, ನ್ಯೂಟನ್ ಗ್ರಾಮರ್ ಪ್ರೌಢಶಾಲೆ, ಸಂತ ಜಾನ್ಸ್ ಪ್ರೌಢಶಾಲೆ, ಇಂಡಿಯನ್ ಪಬ್ಲಿಕ್ ಶಾಲೆ, ಪ್ರಕೃತಿ ಶಾಲೆ, ಬ್ರೈಟ್ ಪ್ರೌಢಶಾಲೆ ಮತ್ತು ಪೊಲೀಸ್ ಬ್ಯಾಂಡ್ ತಂಡಗಳು ಪಥ ಸಂಚಲನ ನಡೆಸಿದವು. 

ನಗರದ ಭಾರತಿ ವಿದ್ಯಾಸಂಸ್ಥೆ, ಪೂರ್ಣಪ್ರಜ್ಞ ಶಾಲೆ, ಸರ್ಕಾರಿ ಪ್ರೌಢಶಾಲೆ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ವಾಪಸಂದ್ರ ಹಾಗೂ ಗಿಡ್ನಹಳ್ಳಿಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ನಡೆಸಿಕೊಟ್ಟ ನೃತ್ಯ ಪ್ರದರ್ಶನ ಗಮನ ಸೆಳೆದವು. 

ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ್, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಐ ಕಾಸಿಂ, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಜಿ.ಪಂ ಉಪ ಕಾರ್ಯದರ್ಶಿ ಎನ್.ಭಾಸ್ಕರ್, ಉಪ ವಿಭಾಗಾಧಿಕಾರಿ ಅಶ್ವಿನ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಎಂ.ಗಾಯತ್ರಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದ ರೆಡ್ಡಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸಂವಿಧಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದ ವೇಳೆ ಹಾಜರಿದ್ದ ಗಣ್ಯರು
ಸಂವಿಧಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದ ವೇಳೆ ಹಾಜರಿದ್ದ ಗಣ್ಯರು
ಫಲಪುಷ್ಪ ಪ್ರದರ್ಶನದಲ್ಲಿನ ಇಂಡಿಯಾ ಗೇಟ್‌ ಮಾದರಿ ಬಳಿ ಅಧಿಕಾರಿಗಳ ಸೆಲ್ಫೀ
ಫಲಪುಷ್ಪ ಪ್ರದರ್ಶನದಲ್ಲಿನ ಇಂಡಿಯಾ ಗೇಟ್‌ ಮಾದರಿ ಬಳಿ ಅಧಿಕಾರಿಗಳ ಸೆಲ್ಫೀ

ಶಾಸಕ ಪ್ರದೀಪ್ ಈಶ್ವರ್ ಗೈರು

ಶಾಸಕ ಪ್ರದೀಪ್ ಈಶ್ವರ್ ಜಿಲ್ಲಾಡಳಿತದಿಂದ ನಗರದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಗೈರು ಹಾಜರಿ ವೇದಿಕೆ ಸೇರಿದಂತೆ ಆವರಣದಲ್ಲಿ ಚರ್ಚೆಗೆ ಕಾರಣವಾಗಿತ್ತು. ತಮ್ಮ ಭಾಷಣದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಸಚಿವ ಡಾ.ಎಂ.ಸಿ.ಸುಧಾಕರ್ ‘ಮಂಚೇನಹಳ್ಳಿಯಲ್ಲಿ ಹಮ್ಮಿಕೊಂಡಿರುವ ಗಣರಾಜ್ಯೋತ್ಸವದಲ್ಲಿ ಶಾಸಕರು ಭಾಗಿಯಾಗಿದ್ದಾರೆ. ನಮ್ಮ ಅನುಮತಿ ಪಡೆದಿದ್ದಾರೆ. ಆ ಕಾರಣದಿಂದ ಇಲ್ಲಿಗೆ ಬಂದಿಲ್ಲ’ ಎಂದರು. 

ಸಂವಿಧಾನ ಜಾಗೃತಿ ಜಾಥಾಕ್ಕೆ ಚಾಲನೆ

ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ಸಂವಿಧಾನ ಜಾಗೃತಿ ಜಾಥಾ ಸ್ತಬ್ಧಚಿತ್ರಕ್ಕೆ ಸಚಿವರು ಚಾಲನೆ ನೀಡಿದರು. ಈ ವೇಳೆ ದಲಿತ ಸಂಘರ್ಷ ಸಮಿತಿಯ ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು. ವಿವಿಧ ಕಲಾ ತಂಡಗಳು ಪ್ರದರ್ಶನ ನೀಡಿದವು.  ಜಾಗೃತಿ ಗೀತೆಗಳನ್ನು ಹಾಡಲಾಯಿತು. ಜಿಲ್ಲೆಯ 157 ಗ್ರಾಮ ಪಂಚಾಯಿತಿಗಳು ಹಾಗೂ 6 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಫೆ.23ರವರೆಗೆ ಸಂಚರಿಸಲಿದೆ. ಫಲಪುಷ್ಪ ಪ್ರದರ್ಶನ  ತೋಟಗಾರಿಕೆ ಇಲಾಖೆ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮಕ್ಕೆ ಡಾ.ಎಂ.ಸಿ.ಸುಧಾಕರ್ ಚಾಲನೆ ನೀಡಿದರು. ಜ.28ರವರೆಗೂ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಫಲಪುಷ್ಪ ಪ್ರದರ್ಶನವನ್ನು ಜನರು ಕಣ್ತುಂಬಿಕೊಳ್ಳಬಹುದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT