ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ರಸ್ತೆಗಳೆಲ್ಲ ಧೂಳು, ಕೇಳೋರಿಲ್ಲ ಗೋಳು

ಆಮೆಗತಿಯ ಕಾಮಗಾರಿಗಳ ಪರಿಣಾಮ ನಗರದ ರಸ್ತೆಗಳಲ್ಲಿ ಜನರಿಗೆ ಹುಡಿಮಣ್ಣಿನ ಮಜ್ಜನ, ರಸ್ತೆ ಸ್ವಚ್ಛತೆ ಮರೆತ ಅಧಿಕಾರಿಗಳು
Last Updated 16 ಜನವರಿ 2020, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದ ಯಾವ ರಸ್ತೆಯಲ್ಲಿ ಹೋದರೂ ಪಾದಚಾರಿಗಳು, ಸವಾರರು ಧೂಳಿನ ಮಜ್ಜನದಿಂದ ಬೇಸತ್ತು ಹೋಗುತ್ತಿದ್ದಾರೆ. ವಾಹನಗಳು ಸಂಚರಿಸಿದಾಗ, ಜೋರಾಗಿ ಗಾಳಿ ಬಿಸಿದಾಗ ಅನೇಕ ರಸ್ತೆಗಳಲ್ಲಿ ಜನರು ಕಣ್ಣುಜ್ಜಿಕೊಂಡು ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ.

ಹದಗೆಟ್ಟ ರಸ್ತೆ, ಅರೆಬರೆ ಕಾಮಗಾರಿ, ಮರೆತು ಹೋದ ನಿರ್ವಹಣಾ ಕಾರ್ಯಗಳಿಂದಾಗಿ ಜನರು ನಗರದಲ್ಲಿ ಧೂಳಿನಿಂದ ಗೋಳಾಡುವ ಪರಿಸ್ಥಿತಿ ದಿನೇ ದಿನೇ ಹೆಚ್ಚುತ್ತಿದೆ. ಧೂಳಿನಿಂದ ಆವೃತ್ತವಾಗಿರುವ ರಸ್ತೆಗಳು ಜನ ಸಾಮಾನ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ ಎಂಬ ದೂರುಗಳು ಸ್ಥಳೀಯ ನಿವಾಸಿಗಳಿಂದ ಕೇಳಿ ಬರುತ್ತಿವೆ.

ನಗರದ ಯಾವ ದಿಕ್ಕಿನಲ್ಲಿ ನೋಡಿದರೂ ಒಂದಲ್ಲ ಒಂದು ಕಾಮಗಾರಿ ಆರಂಭಗೊಂಡು ಕೆಲವೆಡೆ ಸ್ಥಗಿತಗೊಂಡು, ಇನ್ನು ಕೆಲವೆಡೆ ಕುಂಟುತ್ತಾ ಸಾಗಿವೆ. ಪರಿಣಾಮ ನಗರದ ಮುಖ್ಯ ರಸ್ತೆಗಳಲ್ಲೇ ಜನರು ಧೂಳಿನಿಂದ ರಕ್ಷಣೆ ಪಡೆಯಲು ಹರಸಾಹಸ ಪಡುತ್ತ, ಸಾಕಪ್ಪಾ, ಸಾಕು ಧೂಳಿನ ಸಹವಾಸ ಎಂದು ಶಪಿಸುತ್ತಿದ್ದಾರೆ. ಒಟ್ಟಾರೆ ಧೂಳು ಇನ್ನಿಲ್ಲದ ಅವಾಂತರ ಸೃಷ್ಟಿಸುತ್ತಿದ್ದು, ಕಾಮಗಾರಿಗಳು ಯಾವಾಗ ಪೂರ್ಣಗೊಂಡು, ಧೂಳಿನಿಂದ ಮುಕ್ತಿ ದೊರೆಯುತ್ತದೆ ಎಂದು ಜನತೆ ಕಾಯ್ದು ಕುಳಿತಿದ್ದಾರೆ.

ನಗರದ ರಸ್ತೆಗಳಲ್ಲಿ ಶೇಖರಣೆಯಾಗಿರುವುದು ಸಾಮಾನ್ಯ ಧೂಳಲ್ಲ. ರಸ್ತೆಗಳೆಲ್ಲ ಕೆಸರಾಗಿ, ಸಣ್ಣ ಕಸಗಳೂ ಅದರಲ್ಲಿ ಕೊಳೆತು, ಈಗ ಅರ್ಧಮರ್ಧ ಒಣಗಿ ಮೇಣದಂತಾಗಿ, ಅದು ಛಿದ್ರಗೊಂಡು ಹೊರ ಹೊಮ್ಮುವ, ಬಿರುಬೇಸಿಗೆಯಲ್ಲಿ ಚದುರುವುದಕ್ಕಿಂತ ಹೆಚ್ಚು ಭಾರವಾದ ಕಣಗಳಿಂದ ಕೂಡಿದ ಅಪಾಯಕಾರಿ ಧೂಳು ಇದಾಗಿದೆ. ವಾತಾವರಣದಲ್ಲಿನ ಕಾರ್ಬನ್ ಮೊನಾಕ್ಸೈಡ್ ಹಾಗೂ ಅರೆಬೆಂದ, ಹೊಗೆ ಮಿಶ್ರಿತ ಕಣ (ಸೂಟ್ಪಾರ್ಟಿಕಲ್ಸ್ ) ರಸ್ತೆ ಮೇಲಿನ ಧೂಳಿನಲ್ಲಿದೆ ಎನ್ನುತ್ತಾರೆ ತಜ್ಞರು. ಇದರಿಂದಾಗಿ ನಗರದಲ್ಲಿ ಅಲರ್ಜಿಕ್ ಬ್ರಾಂಕೈಟಿಸ್ ಕಾಯಿಲೆ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ ಎನ್ನುತ್ತಾರೆ ವೈದ್ಯರು.

ರಸ್ತೆಗಳ ವಿನ್ಯಾಸವೇ ಸರಿ ಇಲ್ಲದ್ದರಿಂದ, ಕಂಡ ಕಂಡಲ್ಲಿ ಅಗೆದು ಹಾಗೇ ಬಿಡುವುದರಿಂದ, ಚರಂಡಿಗಳು ಸರಿ ಇಲ್ಲದೇ ಮಳೆ ನೀರು ರಸ್ತೆಯಲ್ಲಿ ಹರಿಯುವುದರಿಂದ, ಗುಂಡಿಗಳು ವಿಸ್ತರಣೆಯಾಗುತ್ತಲೇ ಹೋಗುವುದರಿಂದ, ಆ ಗುಂಡಿಗೆ ಮತ್ತೆ ಮಣ್ಣು, ಕಲ್ಲು ಹಾಕಿ ಕಾಟಾಚಾರದ ದುರಸ್ತಿ ಮಾಡುವುದು… ಹೀಗೆ ಹತ್ತಾರು ಕಾರಣಗಳಿಂದ ನಗರದಲ್ಲಿ ಧೂಳು ಕಾಯಂ ಅತಿಥಿಯಂತಾಗಿ ಆವರಿಸಿಕೊಳ್ಳುತ್ತಿದೆ.

ಭಾರಿ ವಾಹನ ಹೋದಾಗ ದಟ್ಟ ಅಲೆಯಾಗಿ ಚದುರುವ ಧೂಳಿನ ಅರ್ಧದಷ್ಟು (ಕಣಗಳು ಭಾರವಾಗಿದ್ದರಿಂದ) ಮತ್ತೆ ಅದೇ ಪ್ರದೇಶದಲ್ಲಿ ಕೂಡುತ್ತದೆ. ಹೊಂಡಗಳ ರಸ್ತೆ ಮತ್ತಿಷ್ಟು ಹಾಳಾಗುತ್ತ ಹೋಗುತ್ತದೆ. ಹೀಗಾಗಿ ಪಾದಚಾರಿಗಳು, ದ್ವಿಚಕ್ರ-ತ್ರಿಚಕ್ರ ವಾಹನ ಸವಾರರು, ಅಂಗಡಿಗಾರರು ಹೆಚ್ಚು ಹೆಚ್ಚು ಧೂಳಿನ ಸಿಂಚನಕ್ಕೆ ಗುರಿಯಾಗುತ್ತಿದ್ದಾರೆ.

ಕಣ್ಣು, ಮೂಗು, ಕಿವಿಯೊಳಗೆ ಸೇರುವ ಧೂಳು ವಿವಿಧ ರೋಗಕ್ಕೆ ಕಾರಣವಾಗುತ್ತಿದೆ. ಗಂಟಲಿಗಿಳಿದರೆ ಈ ಧೂಳು ಶ್ವಾಸಕೋಶದಲ್ಲಿ ಸೇರಿಕೊಂಡು ಅಸ್ತಮಾ, ನ್ಯುಮೋನಿಯಾದಂಥ ಕಾಯಿಲೆಗೆ ಮುನ್ನುಡಿ ಬರೆಯಬಹುದು. ಗಂಟಲ ಕೆರೆತದಂಥ ಸಮಸ್ಯೆ ಹಲವರಲ್ಲಿ ಕಾಣಿಸಿಕೊಳ್ಳುತ್ತಿದೆ. ಧೂಳು ಅನ್ನನಾಳಕ್ಕೂ ಇಳಿಯುತ್ತದೆ. ಅನೇಕರು ಕಾಯಿಲೆಗಳೇನೂ ಇಲ್ಲದಿದ್ದರೂ ಯಾಕೋ ಉತ್ಸಾಹವೇ ಇಲ್ಲ… ಎಂದು ಹೇಳಿಕೊಳ್ಳುವಂತಾಗಲು ಸಹ ಧೂಳು ಕಾರಣವಾಗಿರಬಹುದು ಎನ್ನುತ್ತಾರೆ ವೈದ್ಯರು.

ಪ್ರಮುಖವಾಗಿ ನಗರದ ಎಂ.ಜಿ.ರಸ್ತೆ ಮತ್ತು ಬಿ.ಬಿ.ರಸ್ತೆಗಳಲ್ಲಿ ಸವಾರರಿಗೆ ಧೂಳಿನ ಕಾಟ ಸಹಿಸಲು ಸಾಧ್ಯವಾಗದ ಮಟ್ಟಿಗೆ ಕಿರುಕುಳ ನೀಡುತ್ತಿದೆ. ನನೆಗುದಿಗೆ ಬಿದ್ದ, ಆಮೆಗತಿಯ ಕಾಮಗಾರಿಗಳು ಒಂದೆಡೆಯಾದರೆ, ರಸ್ತೆಗಳ ಸ್ವಚ್ಛತೆಯನ್ನೇ ಮರೆತ ಅಧಿಕಾರಿಗಳಿಂದಾಗಿ ನಾಗರಿಕರು ಅರೆಬರೆ ತೆರೆದ ಕಣ್ಣೋಟದಿಂದಲೇ ಅಪಾಯದ ನಡುವೆ ಸಂಚರಿಸಬೇಕಾದ ಸ್ಥಿತಿ ಬಂದೊದಗಿದೆ.

ಬಿ.ಬಿ.ರಸ್ತೆಯಲ್ಲಂತೂ ಜಿಲ್ಲಾ ರಂಗಮಂದಿರದ ಬಳಿಯಂತೂ ರಸ್ತೆಯ ಅರ್ಧಭಾಗದಷ್ಟು ಮರಳು, ಧೂಳು ರಸ್ತೆ ಆವರಿಸಿಕೊಂಡರೂ ಅಧಿಕಾರಿಗಳು ಮಾತ್ರ ಅತ್ತ ತಿರುಗಿ ಕೂಡ ನೋಡುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT