ಭಾನುವಾರ, ಮೇ 22, 2022
21 °C
ಸಂಕಷ್ಟದಲ್ಲಿ ರೈತ ಕುಟುಂಬ, ಪರಿಹಾರಕ್ಕೆ ಮನವಿ

ರೋಜಾ ಈರುಳ್ಳಿಗೆ ರೋಗ; ಬೆಳೆ ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ತಾಲ್ಲೂಕಿನ ಕಂಬಾಲಪಲ್ಲಿ ಗ್ರಾಮದ ರೈತ ಶ್ರೀನಿವಾಸ್ ಜಮೀನಿನ ರೋಜಾ ಈರುಳ್ಳಿ ಬೆಳೆಗೆ ರೋಗ ತಗುಲಿ ₹6 ಲಕ್ಷ ಮೌಲ್ಯದ ಬೆಳೆ ನಷ್ಟ ಉಂಟಾಗಿದೆ.

ಯಲ್ಲಂಪಲ್ಲಿ ಗ್ರಾಮ ಪಂಚಾಯಿತಿ ಕಂಬಾಲಪಲ್ಲಿ ಗ್ರಾಮದ ರೈತ ವೆಂಕಟರಾಯಪ್ಪ ಮಗ ಶ್ರೀನಿವಾಸ್‍ರ. ಸ್ವಂತ ಕೊಳವೆಬಾವಿಯ ನೀರು ಬಳಿಸಿ ತನ್ನ 3 ಎಕರೆ ಜಮೀನಿನಲ್ಲಿ ರೋಜಾ ಈರುಳ್ಳಿ ಬೆಳೆಯ ಬಿತ್ತನೆ ಬೀಜಗಳನ್ನು ಹಾಕಿದ್ದಾರೆ. ಒಂದು ಪ್ಯಾಕೇಟ್‌ಗೆ ₹2,500ರಂತೆ 25 ಪಾಕೆಟ್‌ಗಳನ್ನು ₹75 ಸಾವಿರಕ್ಕೆ ಬೀಜ ಖರೀದಿ ಮಾಡಿ ಬಿತ್ತನೆ ಮಾಡಿದ್ದಾರೆ. ಬೆಳೆಗೆ ರಸಗೊಬ್ಬರವನ್ನು ಸಿಂಪಡಿಸಿದ್ದಾರೆ. ಕೂಲಿಯವರಿಗೆ, ರಸಗೊಬ್ಬರಕ್ಕೆ ಒಂದೂವರೆ ಲಕ್ಷ ರೂಪಾಯಿಗಳಷ್ಟು ಖರ್ಚು ಮಾಡಿದ್ದಾರೆ. ಆದರೆ ಇದೀಗ, ರೋಜಾ ಈರುಳ್ಳಿ ಬೆಳೆಯ ಎಲೆಗಳಿಗೆ ಆಕಸ್ಮಿಕವಾಗಿ ರೋಗ ತಗುಲಿ ಮುದುಡಿದೆ.

ಇಳುವರಿ ಬಾರದ ಈರುಳ್ಳಿ ಬೆಳೆಯನ್ನು ಹೊಲದಲ್ಲಿಯೇ ಬಿಟ್ಟು ಶ್ರೀನಿವಾಸ್ ಟ್ರ್ಯಾಕ್ಟರ್‌ನಿಂದ ಉಳುಮೆ ಮಾಡಿದ್ದಾರೆ. ಇದೇ ರೀತಿ ಕಳೆದ ಮುರು ಬಾರಿಯೂ ರೋಜಾ ಈರುಳ್ಳಿ ಬಿತ್ತನೆ ಮಾಡಿದರೂ, ರೋಗ ತಗುಲಿ, ಸಂಪೂರ್ಣವಾಗಿ ನಷ್ಟ ಹೊಂದಿದ್ದಾರೆ. ರೈತ ಕುಟುಂಬ ಸಾಲ ಮಾಡಿ ಬೆಳೆ ಇಟ್ಟಿದ್ದಾರೆ. ಆದರೆ ಬೆಳೆ ಬಾರದೇ ಸಾಲ ತೀರಿಸಲಾಗದೇ ರೈತ ಕುಟುಂಬ ಇದೀಗ ಕಂಗಾಲಾಗಿದೆ.

‘ರೋಜಾ ಈರುಳ್ಳಿ ಬೆಳೆ 1 ಕೆ.ಜಿಗೆ ₹33 ರೂಪಾಯಿ ಇದೆ. 400 ಮೂಟೆ ಈರುಳ್ಳಿ ಬರಬೇಕಾಗಿತ್ತು. ಆದರೆ ಅಂಟುರೋಗ ತಗುಲಿ ಉತ್ತಮ ಇಳುವರಿ ಬಂದಿಲ್ಲ. ರೋಗ ಬಂದಾಗ ರಸಗೊಬ್ಬರ ಸಿಂಪಡಿಸಿದ್ದೆ. ಆದರೆ ಬೆಳೆ ಬಂದಿಲ್ಲ. ಬೆಳೆಯನ್ನು ಅಲ್ಲೇ ಬಿಟ್ಟು ಉಳುಮೆ ಮಾಡಿದ್ದೇನೆ. ಏನು ಬೆಳೆ ಬೆಳೆಯಬೇಕು ಎಂಬುದು ಗೊತ್ತಾಗುತ್ತಿಲ್ಲ. ಬೆಳೆ ಬಂದರೆ ಪರವಾಗಿಲ್ಲ. ಬೆಳೆ ನಷ್ಟ ಆದರೆ ಏನು ಮಾಡುವುದು’ ಎಂದು ಕಂಬಾಲಪಲ್ಲಿ ರೈತ ಶ್ರೀನಿವಾಸ್ ಪ್ರಶ್ನಿಸಿದ್ದಾರೆ.

‘ರೈತರು ಸಾಲ ಮಾಡಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಆದರೆ ಉತ್ತಮ ಇಳುವರಿ ಬರುತ್ತಿಲ್ಲ. ರೋಜಾ ಈರುಳ್ಳಿ ಬೆಳೆಗೆ ₹3 ಲಕ್ಷ ಖರ್ಚಾಗಿದೆ. ಒಂದು ನಯಾಪೈಸೆ ಬಂದಿಲ್ಲ. ಬೆಳೆ ಸಂಪೂರ್ಣ ನಷ್ಟ ಆಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಳೆ ನಷ್ಟ ಪರಿಹಾರ ಕಲ್ಪಿಸಬೇಕು’ ಎಂದು ರೈತ ವೆಂಕಟರಾಯಪ್ಪ ಸರ್ಕಾರಕ್ಕೆ ಮನವಿ ಮಾಡಿದರು.

‘ಕೋವಿಡ್-19 ಸಂದರ್ಭದಲ್ಲಿ ವಾಹನಗಳ ಸಂಚಾರ ನಿರ್ಬಂಧ ಇರುವುದರಿಂದ ರೈತರು ಬೆಳೆಗಳನ್ನು ಸಾಗಿಸಲು ಆಗಿಲ್ಲ. ಜಮೀನುಗಳಲ್ಲಿ ಬಿಟ್ಟು, ಟ್ರ್ಯಾಕ್ಟರ್, ಜೆಸಿಬಿಗಳಿಂದ ಉಳುಮೆ ಮಾಡಿ ನಾಶಪಡಿಸಿದ್ದಾರೆ. ಇದೀಗ ಉತ್ತಮ ಇಳುವರಿ ಬರುತ್ತಿಲ್ಲ. ಜೊತೆಗೆ ಅನೇಕ ರೋಗಗಳು ಹರಡುತ್ತಿದೆ. ಸರ್ಕಾರಗಳು ವೈಜ್ಞಾನಿಕ ಬೆಂಬಲ ಬೆಲೆ ನಿಗದಿಪಡಿಸಬೇಕು. ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರಗಳನ್ನು ರೈತರಿಗೆ ವಿತರಿಸಬೇಕು. ಕಾಲಕಾಲಕ್ಕೆ ಕೃಷಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ವಿಜ್ಞಾನಿಗಳು ಬೆಳೆಗಳ ಗುಣಮಟ್ಟವನ್ನು ಪರಿಶೀಲನೆ ಮಾಡಲು ತಂಡಗಳನ್ನು ನೇಮಿಸಬೇಕು. ಸರ್ಕಾರಗಳಿಂದ ರೈತರಿಗೆ ಬೆಳ ನಷ್ಟ ಪರಿಹಾರ ಕಲ್ಪಿಸಬೇಕು‘ ಎಂದು ಪ್ರಾಂತ ರೈತ ಸಂಘದ(ಕೆಪಿಆರ್ ಎಸ್) ತಾಲ್ಲೂಕು ಕಾರ್ಯದರ್ಶಿ ಗುಂಟಿಗಾನಪಲ್ಲಿ ಮಂಜುನಾಥರೆಡ್ಡಿ ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು