ಗುರುವಾರ , ಡಿಸೆಂಬರ್ 3, 2020
21 °C
ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಡಿ ದುಂಡುಮೇಜಿನ ಸಭೆ

‘ಭಾಗ್ಯನಗರ’ ಮರುನಾಮಕರಣ ಕೂಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ಬಾಗೇಪಲ್ಲಿಯನ್ನು ಭಾಗ್ಯನಗರವನ್ನಾಗಿ ಮರುನಾಮಕರಣ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಲು ಗುರುವಾರ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸ್ಮಾರಕ ಭವನದಲ್ಲಿ ತಾಲ್ಲೂಕಿನ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಡಿ ನಡೆದ ದುಂಡುಮೇಜಿನ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.

ಸಭೆಯ ನಂತರ ಮುಖಂಡರು ತಾಲ್ಲೂಕು ಕಚೇರಿ ಮುಂದೆ ಗ್ರೇಡ್-2 ತಹಶೀಲ್ದಾರ್ ನಾಗರಾಜ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎ.ಜಿ. ಸುಧಾಕರ್ ಮಾತನಾಡಿ, ‘ಬಾಗೇಪಲ್ಲಿ ತಾಲ್ಲೂಕು ಆಂಧ್ರಪ್ರದೇಶದ ಗಡಿ ಅಂಚಿನಲ್ಲಿದೆ. ಹಿಂದೆ ಅನೇಕ ಕಲಾವಿದರು ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸಲು ಶ್ರಮಿಸಿದ್ದಾರೆ. ಸರ್ಕಾರಿ ಶಾಲಾ ಆವರಣದ ರಂಗಮಂಟಪದಲ್ಲಿ ಕನ್ನಡ ನಾಟಕಗಳ ಪ್ರದರ್ಶನದ ಮೂಲಕ ಜನಜಾಗೃತಿ ಮೂಡಿಸಿದ್ದಾರೆ. ತಾಲ್ಲೂಕಿನ ಹಿರಿಯರಲ್ಲೂ  ಭಾಗ್ಯನಗರ ಎಂದು ಮರುನಾಮಕರಣ ಮಾಡಬೇಕೆಂಬ ಒತ್ತಾಯ ಇದೆ ಎಂದರು.

ಇದರ ಮುಂದುವರಿದ ಭಾಗವಾಗಿ ಎಲ್ಲಾ ಪ್ರಗತಿಪರ ಸಂಘಟನೆಗಳ ಮುಖಂಡರು ಸೇರಿ ಚರ್ಚಿಸಲಾಗಿದೆ. ಭಾಗ್ಯನಗರ ಮರುನಾಮಕರಣ ಸಂಬಂಧ ಹೋರಾಟದ ರೂಪರೇಷೆ ರೂಪಿಸಲಾಗಿದೆ. ಇದಕ್ಕೆ ಜನಪ್ರತಿನಿಧಿಗಳ ಸಹಕಾರದ ಅಗತ್ಯವಿದೆ. ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹೇರಬೇಕಾಗಿದೆ. ಸರ್ಕಾರದ ಮಟ್ಟದಲ್ಲಿ ಜನಪ್ರತಿನಿಧಿಗಳು ಭಾಗ್ಯನಗರದ ಕೂಗು ಕೇಳಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಭಾಗ್ಯನಗರ ಹೋರಾಟ ಸಮಿತಿ ಅಧ್ಯಕ್ಷ ಎಸ್.ಎಸ್. ಶ್ರೀನಿವಾಸ್ ಮಾತನಾಡಿ, ‘2009ರಲ್ಲಿ ಪುರಸಭೆಯ ನಡವಳಿಕೆ ಸಭೆಯಲ್ಲಿ ನಿರ್ಣಯ ಮಾಡಿ ಬಾಗೇಪಲ್ಲಿಯನ್ನು ಭಾಗ್ಯನಗರ ಮಾಡಬೇಕು ಎಂದು ಹಿಂದಿನ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಆದರೆ, ಕ್ರಮವಹಿಸಿಲ್ಲ’ ಎಂದರು.

ಪ್ರಗತಿಪರ ಚಿಂತಕ ಡಾ.ಚಿನ್ನಕೈವಾರಮಯ್ಯ ಮಾತನಾಡಿ, 1980ರಲ್ಲಿ ತಾಲ್ಲೂಕಿನ ಹಿರಿಯ ಕಲಾವಿದರು ಸೇರಿ ಮಾಡಿದ್ದ ನಾಟಕ ಪ್ರದರ್ಶನಕ್ಕೆ ನಟ ದಿವಂಗತ ಉದಯ್ ಕುಮಾರ್ ಆಗಮಿಸಿದ್ದರು. ಅಂದು ಅವರು ಹೇಳಿದ್ದ ಬಾಗೇಪಲ್ಲಿಯು ಬಂಗಾರವಾಗಿ ಭಾಗ್ಯನಗರವಾಗಲಿ ಎಂಬ ಮಾತನ್ನು ನೆನಪಿಸಿಕೊಂಡರು.

ಭಾಗ್ಯನಗರ ಹೋರಾಟ ಜನಾಂದೋಲನ ಆಗಬೇಕು. ಜನರಲ್ಲಿ ಜನಜಾಗೃತಿ ಮೂಡಿಸಬೇಕು. ಕನ್ನಡದ ಮನಸ್ಸುಗಳು ಒಂದಾಗಿ ಹೋರಾಟ ಮಾಡಲು ಮುಂದಾಗಬೇಕು ಎಂದರು.

ಮುಖಂಡ ಬಿ.ಆರ್. ನರಸಿಂಹನಾಯ್ಡು ಮಾತನಾಡಿ, ಗಡಿಯಲ್ಲಿ ಕನ್ನಡ ನಾಡು, ನುಡಿ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ತೆಲುಗು ಆಡುಭಾಷೆ ಆದರೂ, ವ್ಯಾವಹಾರಿಕ ಭಾಷೆ ಕನ್ನಡ ಆಗಿದೆ. ನಿರಂತರವಾಗಿ ಹೋರಾಟ ಮಾಡುವುದರಿಂದ ಮಾತ್ರ ಫಲಶ್ರುತಿ ಸಾಧ್ಯ ಎಂದರು.

ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಕಾರ್ಯದರ್ಶಿ ಡಿ.ಎನ್. ಕೃಷ್ಣಾರೆಡ್ಡಿ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಆರ್. ಹನುಮಂತರೆಡ್ಡಿ, ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲ ಡಾ.ರಾಮಯ್ಯ, ಸಾಹಿತಿ ಬಿ.ಆರ್. ಕೃಷ್ಣ, ಕರವೇ ತಾಲ್ಲೂಕು ಅಧ್ಯಕ್ಷ ಕೆ.ಎನ್. ಹರೀಶ್, ಜಿಲ್ಲಾ ಅಧ್ಯಕ್ಷೆ ಸುಜಾತಮ್ಮ, ಶಾಂತಮ್ಮ, ಡಿವೈಎಫ್ ಜಿಲ್ಲಾ ಅಧ್ಯಕ್ಷ ಹೇಮಚಂದ್ರ, ಸ್ವಾಭಿಮಾನಿ ಬಣದ ಅಧ್ಯಕ್ಷ ಬಿಟಿಸಿ ಸೀನಾ, ಕಾರ್ಯದರ್ಶಿ ಜಬೀಉಲ್ಲಾ, ರೈತ ಸಂಘದ ರಾಜ್ಯ ಅಧ್ಯಕ್ಷ ಬಿ.ಜಿ. ಹಳ್ಳಿ ನಾರಾಯಣಸ್ವಾಮಿ, ಡಿಎಸ್‌ಎಸ್ ತಾಲ್ಲೂಕು ಸಂಚಾಲಕ ಲಕ್ಷ್ಮೀನರಸಿಂಹಪ್ಪ, ಜಯಂತ್, ಮಾದಿಗ ದಂಡೋರ ಜಿಲ್ಲಾ ಅಧ್ಯಕ್ಷ ಶಿವಪ್ಪ, ಜೀವಿಕಾ ಸಂಘಟನೆಯ ಮಹಿಳಾ ಅಧ್ಯಕ್ಷೆ ಲಕ್ಷ್ಮೀ, ಮಹಮದ್ ಎಸ್. ನೂರ್‌ಉಲ್ಲಾ, ಕಲೀಂ‌ ಉಲ್ಲಾ, ಪಿ.ಎಸ್. ರಾಜೇಶ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು