ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಉಲ್ಲಂಘನೆ: ಅಪ‍ಘಾತ ಹೆಚ್ಚಳ

ಸಂಚಾರ ನಿಯಮ ಜಾಗೃತಿ, ವಾಹನ ಚಾಲನಾ ಪರವಾನಗಿ ವಿತರಣೆ
Last Updated 12 ನವೆಂಬರ್ 2021, 4:20 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಅಪಘಾತಗಳು ಹೆಚ್ಚುತ್ತಿವೆ. ಶೇ 80ರಷ್ಟು ಅಪಘಾತ ಪ್ರಕರಣಗಳಲ್ಲಿ 18 ರಿಂದ 25ವರ್ಷಒಳಗಿನ ವಯೋಮಾನದ ಯುವಕರೇ ಹೆಚ್ಚಾಗಿ ಅಪಘಾತಕ್ಕೆ ಒಳಪಟ್ಟು ಮೃತಪಡುತ್ತಿದ್ದಾರೆ. ಇದಕ್ಕೆ ಸಂಚಾರ ನಿಯಮಗಳನ್ನು ಪಾಲಿಸದೆ ಇರುವುದೇ ಪ್ರಮುಖ ಕಾರಣ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ತಿಳಿಸಿದರು.

ಇಲ್ಲಿನ ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಪೊಲೀಸ್ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆಯ ಸಹಯೋಗದಲ್ಲಿ ನಡೆದ ಸಂಚಾರ ನಿಯಮ ಕುರಿತ ಜಾಗೃತಿ ಹಾಗೂ ವಾಹನ ಚಾಲನಾ ಪರವಾನಗಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅತಿವೇಗದ ಚಾಲನೆ, ಹೆಲ್ಮೆಟ್ ಧರಿಸದೆ ಇರುವುದು, ಮದ್ಯ ಸೇವಿಸಿ ವಾಹನ ಚಾಲನೆ ಮಾಡುವುದು, ನಿರ್ದೇಶನ ಉಲ್ಲಂಘಿಸಿ ಚಾಲನೆ ಮಾಡುವುದು, ಅಧಿಕ ತೂಕ ಸಾಗಣೆ, ವಿಶ್ರಾಂತಿ ರಹಿತ ಚಾಲನೆ, ಸಮರ್ಪಕ ತರಬೇತಿ ಕೊರತೆ, ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ, ಸೀಟ್ ಬೆಲ್ಟ್ ಧರಿಸದೆ ಇರುವುದು ಹೀಗೆ ಹಲವು ಕಾರಣಗಳಿಂದ ಅಪಘಾತ ಸಂಭವಿಸುತ್ತಿವೆ ಎಂದು
ತಿಳಿಸಿದರು.

ಬಹಳಷ್ಟು ವಿದ್ಯಾರ್ಥಿಗಳು ದ್ವಿಚಕ್ರವಾಹನಗಳಲ್ಲಿ ಕಾಲೇಜಿಗೆ ಬರುತ್ತಾರೆ. ಎಷ್ಟು ಜನರ ಬಳಿ ಡಿಎಲ್, ವಾಹನ ಅರ್ಹತಾ ಪತ್ರ ಇದೆ, ಸಂಚಾರ ನಿಯಮಗಳನ್ನು ಎಷ್ಟು ಜನರು ಪಾಲಿಸುತ್ತಿದ್ದಾರೆ ಎಂಬುದನ್ನು ಕಾಲೇಜಿನ ಭದ್ರತಾ ಸಿಬ್ಬಂದಿ, ಪ್ರಾಂಶುಪಾಲರು, ಕಾಲೇಜಿನ ಮುಖ್ಯಸ್ಥರು, ವಿದ್ಯಾರ್ಥಿಗಳ ಮೇಲೆ ನಿಗಾ ಇಟ್ಟು ಪರಿಶೀಲಿಸಬೇಕು. ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಚ್.ಡಿ. ಮಂಜುನಾಥ್ ಮಾತನಾಡಿ, ವಾಹನ ಚಾಲನಾ ಪರವಾನಗಿ ಪತ್ರ (ಡಿಎಲ್) ಪಡೆಯಲು ಅರ್ಜಿದಾರರು ಈ ಹಿಂದೆ ಆರ್‌ಟಿಒ ಕಚೇರಿಗೆ ಹೋಗಿ ಅರ್ಜಿ ಪಡೆದು ಭರ್ತಿ ಮಾಡಿ ಸಲ್ಲಿಸಬೇಕಿತ್ತು. ನಗದು ಪಾವತಿಸಬೇಕಿತ್ತು. ಈಗ ಪ್ರತಿ ಪ್ರಕ್ರಿಯೆ ಆನ್‌ಲೈನ್ ಮೂಲಕ ನಡೆಯುವ ಕಾರಣ ಕಾಲ ವಿಳಂಬಕ್ಕೆ ಅವಕಾಶವಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT