ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾದಲಿ | ಕಾಯಂ ವೈದ್ಯರಿಲ್ಲದೆ ಪರದಾಟ

ಸಮಸ್ಯೆ ಅರಿವಿದ್ದರೂ ಸ್ಪ‍ಂದಿಸಿದ ಜನಪ್ರತಿನಿಧಿಗಳು
ಶಿವಕುಮಾರ್ ಎನ್.ವಿ
Published 7 ಜನವರಿ 2024, 7:27 IST
Last Updated 7 ಜನವರಿ 2024, 7:27 IST
ಅಕ್ಷರ ಗಾತ್ರ

ಸಾದಲಿ: ತಾಲ್ಲೂಕಿನ ಸಾದಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರಿಲ್ಲದೆ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸಮಸ್ಯೆ ಅರಿವಿದ್ದರೂ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸಾದಲಿ ಹೋಬಳಿ ಕೇಂದ್ರ. ಜನಸಂಖ್ಯೆಯೂ ಹೆಚ್ಚಿದೆ. ಕಳೆದ ಆರು ತಿಂಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರು ನೇಮಕವಾಗಿಲ್ಲ. ತುರ್ತು ಸಂದರ್ಭದಲ್ಲಿ 108 ವಾಹನ ಸಿಗುತ್ತಿಲ್ಲ. ರಾತ್ರಿ ವೇಳೆ ಜನರು ತುರ್ತು ಚಿಕಿತ್ಸೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆ ಅವಲಂಬಿಸಬೇಕಾದ ಪರಿಸ್ಥಿತಿ ಇದೆ.

ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲೇ ಇದ್ದು ಅಪಘಾತಗಳು ಸಾಮಾನ್ಯವಾಗಿವೆ. ಅಪಘಾತದಲ್ಲಿ ಗಾಯಗೊಂಡವರು ಆಸ್ಪತ್ರೆಗೆ ಬಂದರೆ ಅಟೆಂಡರ್‌ಗಳೇ ಬ್ಯಾಂಡೆಜ್‌ ಹಾಕಿ ಕಳುಹಿಸುತ್ತಾರೆ. ಸಾದಲಿ ಹೋಬಳಿಯಲ್ಲಿ ಹೆಚ್ಚು ಬುಡಕಟ್ಟು ಜನರು ವಾಸವಾಗಿದ್ದು ತುರ್ತು ಪರಿಸ್ಥಿತಿ ವೇಳೆ ಅವರಿಗೆ ಚಿಕಿತ್ಸೆ ಸಿಗುತ್ತಿಲ್ಲ. ಹೆರಿಗೆ ಸೇರಿದಂತೆ ಇನ್ನಿತರ ಪ್ರಕರಣಗಳಿಗೆ ಚಿಕಿತ್ಸೆ ಇಲ್ಲ. ಚಿಕ್ಕದೊಂದು ಆಂಬುಲೆನ್ಸ್ ಇದೆ. ಆದರೆ, ಯಾವಾಗಲೂ ಕೆಟ್ಟು ನಿಂತಿರುತ್ತದೆ ಎಂದು ಸ್ಥಳೀಯ ನಿವಾಸಿ ಬಿ.ಎಂ ವೆಂಕಟೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ವರ್ಷ ಸಾದಲಿ ಕ್ರಾಸ್ ಬಳಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ನೂತನ ಪ್ರಾಥಮಿಕ ಆರೋಗ್ಯ ಕಟ್ಟಡಗಳಿಗೆ ಶಂಕು ಸ್ಥಾಪನೆಯಾಗಿದೆ. ಕಟ್ಟಡವೂ ನಿರ್ಮಾಣ ಹಂತದಲ್ಲಿ ಇದೆ. ಈ ಹಿಂದೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯರು ಕಳೆದ 15 ವರ್ಷಗಳಿಂದ ಜನರಿಗೆ ಮತ್ತು ರೋಗಿಗಳಿಗೆ ಅಚ್ಚುಮೆಚ್ಚಿನ ವೈದ್ಯರಾಗಿದ್ದರು. ದಿಢೀರನೆ ವರ್ಗಾವಣೆಯಿಂದ ಜನರಿಗೆ ನಿರಾಸೆಯಾಗಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಶ್ರೀನಿವಾಸ್.

ತಾತ್ಕಾಲಿಕವಾಗಿ ದಿಬ್ಬೂರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ನಿಯೋಜಿಸಲಾಗಿದೆ.

ಟಿಎಚ್ಒ ಮತ್ತು ಡಿಎಚ್‌ಒ ಗಮನಹರಿಸುತ್ತಿಲ್ಲ: ಕಳೆದ ಆರು ತಿಂಗಳಿಂದ ವೈದ್ಯರಿಲ್ಲದೆ ಬಿಕೊ ಎನ್ನುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇದುವರೆಗೂ ಕಾಯಂ ವೈದ್ಯರನ್ನು ನೇಮಕ ಮಾಡುವಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿ ಮತ್ತು ಜಿಲ್ಲಾಧಿಕಾರಿ ವಿಫಲವಾಗಿದ್ದಾರೆ ಎನ್ನುತ್ತಾರೆ ಸ್ಥಳೀಯರು.

ಸಾದಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಚಿತ್ರ
ಸಾದಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಚಿತ್ರ
ಸಾದಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಚಿತ್ರ
ಸಾದಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT