ಮಂಗಳವಾರ, ಜನವರಿ 18, 2022
27 °C

ಶ್ರೀಗಂಧ ಕಳವು: ಏಳು ಮಂದಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲ್ಲೂಕಿನ ಕೆಂಚಾರ್ಲಹಳ್ಳಿ, ಬಟ್ಲಹಳ್ಳಿ ಹಾಗೂ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ರೈತರು ಬೆಳೆದಿದ್ದ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿದ ಆರೋಪದ ಮೇಲೆ 7 ಮಂದಿಯನ್ನು ಚಿಂತಾಮಣಿ ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ತಿಳಿಸಿದರು. 

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಂತಾಮಣಿ ತಾಲ್ಲೂಕಿನ ದಬರಗಾನಹಳ್ಳಿಯ ಮುನಿರಾಜು, ಪ್ರಸನ್ನ, ಪ್ರದೀಪ್, ಕೃಷ್ಣಮೂರ್ತಿ, ನರಸಿಂಹಮೂರ್ತಿ, ಮುನಿಯಪ್ಪ, ಹೊಸಕೋಟೆ ತಾಲ್ಲೂಕಿನ ಕಟ್ಟಿಗೇನಹಳ್ಳಿಯ ಮಹಮ್ಮದ್ ಇಸ್ಮಾಯಿಲ್
ಬಂಧಿತರು.

ಸೋಮವಾರ ಸಂಜೆ ಚಿಂತಾಮಣಿ ಗ್ರಾಮಾಂತರ ಠಾಣೆ ಪಿಎಸ್‌ಐ ನಾರಾಯಣಸ್ವಾಮಿ ಹಾಗೂ ಸಿಬ್ಬಂದಿ ಕಡಪ–ಬೆಂಗಳೂರು ರಸ್ತೆಯ ಮಾಡಿಕೆರೆ ಕ್ರಾಸ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಐದು ಮಂದಿ ದ್ವಿಚಕ್ರವಾಹನದಲ್ಲಿ ಮದನಪಲ್ಲಿ ಕಡೆಯಿಂದ ಬರುತ್ತಿದ್ದರು. ಪೊಲೀಸರನ್ನು ಕಂಡ ತಕ್ಷಣ ವಾಹನಗಳನ್ನು ತಿರುಗಿಸಿಕೊಂಡಿದ್ದಾರೆ ಎಂದು ಹೇಳಿದರು. 

ಇದನ್ನು ಕಂಡ ಪೊಲೀಸರು ತಕ್ಷಣವೇ ಇವರನ್ನು ಬೆನ್ನತ್ತಿದರು. ಈ ವೇಳೆ ದ್ವಿಚಕ್ರವಾಹನದಿಂದ ವ್ಯಕ್ತಿಯೊಬ್ಬ ಗೋಣಿ ಚೀಲವನ್ನು ಬೀಳಿಸಿದ್ದಾನೆ. ಇವರನ್ನು ವಶಕ್ಕೆ ಪಡೆದು ಗೋಣಿಚೀಲ ಪರಿಶೀಲಿಸಿದಾಗ ಅದರಲ್ಲಿ ಶ್ರೀಗಂಧದ ತುಂಡುಗಳು ಇದ್ದವು. ಬಂಧಿತರು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧೆಡೆ ರೈತರ ತೋಟಗಳಲ್ಲಿದ್ದ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಹೇಳಿದರು. 

ಮೊದಲಿಗೆ ಐದು ಮಂದಿಯನ್ನು ಬಂಧಿಸಿದ್ದು ಅವರು ನೀಡಿದ ಮಾಹಿತಿ ಆಧರಿಸಿ ಮತ್ತಿಬ್ಬರನ್ನು ಬಂಧಿಸಲಾಗಿದೆ. ಶ್ರೀಗಂಧವನ್ನು ಯಾರಿಗೆ ಮಾರಾಟ ಮಾಡುತ್ತಿದ್ದರು. ಮತ್ತಷ್ಟು ಮಂದಿ ಈ ತಂಡದಲ್ಲಿ ಇದ್ದಾರೆಯೇ ಎನ್ನುವುದು ಮತ್ತಷ್ಟು ತನಿಖೆಯಿಂದ ತಿಳಿಯಲಿದೆ ಎಂದು ಹೇಳಿದರು.

ಒಟ್ಟು 70 ಕೆ.ಜಿ ಗಂಧವನ್ನು ವಶಕ್ಕೆ ಪಡೆದಿದ್ದು, ಇದರ ಮೌಲ್ಯ ₹ 21 ಲಕ್ಷ ಎಂದು ಅಂದಾಜಿಸಲಾಗಿದೆ. ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ ಬಹುಮಾನ ನೀಡಲಾಗುವುದು ಎಂದರು.

ಚಿಂತಾಮಣಿ ಡಿವೈಎಸ್‌ಪಿ ಕುಶಾಲ್ ಚೌಕ್ಸೆ, ಚಿಂತಾಮಣಿ ನಗರ ಠಾಣೆ ಇನ್‌ಸ್ಪೆಕ್ಟರ್ ಎ.ಎಸ್. ವಿಶ್ವಾಸ್, ಕೆಂಚಾರ್ಲಹಳ್ಳಿ ಪಿಎಸ್‌ಐ ಪುರುಷೋತ್ತಮ್, ಗ್ರಾಮಾಂತರ ಠಾಣೆ ಪಿಎಸ್‌ಐ ನಾರಾಯಣಸ್ವಾಮಿ ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.