ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಪರಿಶಿಷ್ಟರ ಕದಡಿದ ಚುನಾವಣಾ ಕಣ

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌–ಬಿಜೆಪಿ ಬೆಂಬಲಿತ ದಸಂಸ ಮುಖಂಡರ ವಾಕ್ಸಮರ
Published 16 ಏಪ್ರಿಲ್ 2024, 5:56 IST
Last Updated 16 ಏಪ್ರಿಲ್ 2024, 5:56 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ ಮತದಾರರು ಬಹುಸಂಖ್ಯೆಯಲ್ಲಿ ಇದ್ದಾರೆ. ಲೋಕಸಭಾ ಚುನಾವಣೆಯ ಈ ಹೊತ್ತಿನಲ್ಲಿ ಪರಿಶಿಷ್ಟ ಜಾತಿಯ ಮುಖಂಡರ ನಡುವೆಯೇ ರಾಜಕೀಯ ವಾಕ್ಸಮರ ಜೋರಾಗಿದೆ. 

ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಮತ್ತು ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ ದಲಿತ ಸಂಘರ್ಷ ಸಮಿತಿ ಮುಖಂಡರು ವಿಭಜನೆ ಆಗಿದ್ದಾರೆ. ಬಣಗಳ ನಡುವೆ ವಾಕ್ಸಮರ ಜೋರಾಗಿದೆ. ಈ ವಾಕ್ಸಮರದಲ್ಲಿ ಪಕ್ಷ, ಸಿದ್ಧಾಂತಗಳ ಜೊತೆಗೆ ವೈಯಕ್ತಿಕ ವಿಷಯಗಳು ಸಹ ಚರ್ಚೆಗೆ ಬಂದಿವೆ. 

ಸೋಮವಾರ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ ದಲಿತ ಸಂಘರ್ಷ ಸಮಿತಿ ಮುಖಂಡರು ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಮತ್ತು ಡಾ.ಕೆ.ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದರೆ, ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ದಲಿತ ಸಂಘರ್ಷ ಸಮಿತಿ ಮುಖಂಡರು ಮತ್ತೊಂದು ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. 

ಅಂದು ಸುಧಾಕರ್ ಜೊತೆ; ಇಂದು ನಿಂದನೆ: ದಲಿತ ಸಂಘರ್ಷ ಸಮಿತಿ (ಪ್ರೊ.ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಚಾಲಕರೂ ಆದ ಬಿಜೆಪಿ ಮುಖಂಡ ಬಿ.ಎನ್.ಗಂಗಾಧರಪ್ಪ ಮಾತನಾಡಿ, ‘ಈ ಹಿಂದಿನಿಂದಲೂ ಕಾಂಗ್ರೆಸ್ ಸಮುದಾಯಗಳನ್ನು ಒಡೆದು ಆಳುತ್ತಿದೆ. ಈಗ ಸುಧಾಕರ್ ಅವರನ್ನು ಟೀಕಿಸುತ್ತಿರುವವರು ಒಂದು ಸಮಯದಲ್ಲಿ ಸುಧಾಕರ್ ಅವರಿಗೆ ಆಪ್ತರಾಗಿದ್ದರು. ಆಗ ಅವರಿಂದ ಅನುಕೂಲ ಸಹ ಪಡೆದಿದ್ದಾರೆ ಎಂದು ದೂರಿದರು. 

ಸುಧಾಕರ್ ಜೊತೆಯಲ್ಲಿ ಇದ್ದಾಗ ಒಂದು ಮಾತು, ಅವರಿಂದ ಹೊರ ಹೋದಾಗ ಮತ್ತೊಂದು ಮಾತನಾಡುವುದು ಬೇಡ. ಯಾರ ಪರವಾದರೂ ಮತ ಕೇಳಲಿ, ಅದು ಅವರ ಹಕ್ಕು. ಆದರೆ ವೈಯಕ್ತಿಕ ನಿಂದನೆ ಸರಿಯಲ್ಲ ಎಂದು ಹೇಳಿದರು.

ಮಾಜಿ ಶಾಸಕ ಎಂ.ಶಿವಾನಂದ್, ‘ಹಲವು ಸಮುದಾಯಗಳಿಗೆ ಅನುಕೂಲವಾಗಲಿ ಎಂದು ಸುಧಾಕರ್ ಅವಧಿಯಲ್ಲಿ ಭವನ ನಿರ್ಮಾಣಕ್ಕೆ ಜಮೀನು, ಅನುದಾನ ಮಂಜೂರಾಗಿದೆ. ನಿಮ್ಮಾಕಲಕುಂಟೆಯಲ್ಲಿ ಪರಿಶಿಷ್ಟ ಸ್ಮಶಾನಕ್ಕೆ ಜಮೀನು ಮಂಜೂರು ಮಾಡಿಸಿದ್ದಾರೆ. ಸುಧಾಕರ್ ತಮ್ಮ ಆಡಳಿತದಲ್ಲಿ ಪರಿಶಿಷ್ಟರಿಗೆ ಏನು ಮಾಡಿಲ್ಲ ಎಂದು ಕೆಲವರು ಸುಳ್ಳು ಹೇಳುತ್ತಿದ್ದಾರೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಸುಧಾಕರ್ ಅವರು ಶಾಸಕರಾಗಿದ್ದ ವೇಳೆ ಮುನಿಯಪ್ಪ ಅವರನ್ನು ಎರಡು ಬಾರಿ ಮತ್ತು ನನ್ನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಿದರು ಎಂದರು. 

ಚುನಾವಣೆಯ ಈ ಸಮಯದಲ್ಲಿ ವೈಯಕ್ತಿಕ ನಿಂದನೆ ಒಳ್ಳೆಯದಲ್ಲ. ಪರಿಶಿಷ್ಟ ಸಮುದಾಯ ಸೇರಿದಂತೆ ಚಿಕ್ಕಬಳ್ಳಾಪುರಕ್ಕೆ ಸುಧಾಕರ ಏನು ಮಾಡಿದ್ದಾರೆ, ಈಗಿನ ಶಾಸಕ‌ರು ಏನು ಮಾಡಿದ್ದಾರೆ ಎನ್ನುವುದು ಜನರಿಗೆ ಚೆನ್ನಾಗಿಯೇ ಗೊತ್ತು ಎಂದರು.

ವೆಂಕಟೇಶ್, ಮುನಿವೆಂಕಟಪ್ಪ, ನಾರಾಯಣಸ್ವಾಮಿ, ರಂಗಪ್ಪ, ತೇಜೇಂದ್ರ ಪಾಪು, ಮುನಿ, ಮಂಜು ತುಳಸಿ ಮತ್ತಿತರರು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಸುಧಾಕರ್ ವಿರುದ್ಧ ಆಕ್ರೋಶ: ನಗರದ ಹೊರವಲಯದ ರಂಗಸ್ಥಳದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಮತಾಸೈನಿಕ ದಳದ ಜಿಲ್ಲಾ ಅಧ್ಯಕ್ಷ ಜಿ.ಸಿ.ವೆಂಕಟರಮಣಪ್ಪ ಹಾಗೂ ಕಾಂಗ್ರೆಸ್ ಮುಖಂಡರು ಸುಧಾಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಡಾ.ಕೆ.ಸುಧಾಕರ್ ತಾವು ಮಾಡದ ಕೆಲಸಕಾರ್ಯಗಳನ್ನು ಮಾಡಿರುವುದಾಗಿ ಪುಸ್ತಕ ಮುದ್ರಿಸಿ ಮತದಾರರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಚುನಾವಣಾಧಿಕಾರಿ ಇದನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣ ದಾಖಲಿಸಬೇಕು ಎಂದು   ಜಿ.ಸಿ.ವೆಂಕಟರಮಣಪ್ಪ ಒತ್ತಾಯಿಸಿದರು.

ಅಂಬೇಡ್ಕರ್, ಬಾಬೂ ಜಗಜೀವನರಾಮ್, ಕನಕ ಹಾಗೂ ವಾಲ್ಮೀಕಿ ಭವನ ನಿರ್ಮಿಸಿರುವುದಾಗಿ ಚುನಾವಣೆಗಾಗಿ ರೂಪಿಸಿರುವ ಪುಸ್ತಕದಲ್ಲಿ ನಮೂದಿಸಿದ್ದಾರೆ.  ನಿರ್ಮಿಸುವ ಭವನ ತೋರಿಸಿದಲ್ಲಿ ಅಲ್ಲಿಯೇ ಅವರಿಗೆ ಸನ್ಮಾನ ಮಾಡಲಾಗುವುದು ಎಂದು ನುಡಿದರು.

10 ವರ್ಷಗಳ ಅವಧಿಯಲ್ಲಿ ಏನು ಅಭಿವೃದ್ಧಿ ಮಾಡಿಲ್ಲ. ದಲಿತ ಸಮುದಾಯದ ಮಾಜಿ ಶಾಸಕರು ಹಾಗೂ ಮುಖಂಡರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಕಿರುಕುಳ ನೀಡಿದ್ದಾರೆ. ಇದೀಗ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗೆ ನಾವು ಬೆಂಬಲ ನೀಡುತ್ತೇವೆ ಎಂದು ಹೇಳಿದರು.

ಮಾಜಿ ಶಾಸಕರಾದ ಎಸ್.ಎಂ.ಮುನಿಯಪ್ಪ, ಕೆ.ವಿ.ಅನಸೂಯಮ್ಮ, ಮುಖಂಡರಾದ ತಿರುಮಳಪ್ಪ, ಪಟ್ರೇನಹಳ್ಳಿ ಕೃಷ್ಣ, ಶ್ರೀನಿವಾಸ್, ಮಮತಾ ಮೂರ್ತಿ, ರಮಣ್ ಅಕೇಶ್, ಹನುಮಂತಪ್ಪ, ಮುನೀಂದ್ರ, ಜಗದೀಶ್, ಅಜಯ್ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT