ಚಿಂತಾಮಣಿ: ನಗರದ ಬೊಂಬೂ ಬಜಾರ್ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನು ನಗರಠಾಣೆ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ.
ತಾಲ್ಲೂಕಿನ ಕೈವಾರ ಹೋಬಳಿಯ ಮುತ್ತುಕದಹಳ್ಳಿ ಗ್ರಾಮದ ಶ್ರೀಧರಾಚಾರಿ ಬಂಧಿತ ಆರೋಪಿ. ಆರೋಪಿಯಿಂದ 4 ಕೆ.ಜಿ.ಗಾಂಜಾ ಹಾಗೂ ದ್ವಿಚಕ್ರವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಬೊಂಬೂ ಬಜಾರ್‌ನಲ್ಲಿ ವ್ಯಕ್ತಿಯೊಬ್ಬ ದ್ವಿಚಕ್ರವಾಹನದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ನಗರಠಾಣೆಯ ಇನ್‌ಸ್ಪೆಕ್ಟರ್ ವಿಜಿಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆಂಧ್ರಪ್ರದೇಶದಿಂದ ಕಡಿಮೆ ಬೆಲೆಗೆ ತಂದು ಅಧಿಕ ಬೆಲೆಗೆ ಮಾರಾಟ ಮಾಡಿ ಲಾಭಗಳಿಸುವ ಉದ್ದೇಶದಿಂದ ತಂದಿದ್ದೇನೆ ಎಂದು ಆರೋಪಿ ತಿಳಿಸಿದ್ದಾನೆ. ಈ ಹಿಂದೆಯೂ ಆತ ಎರಡು ಗಾಂಜಾ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.