ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಡ್ಲಘಟ್ಟ | ಹಸಿ, ಒಣ ಮೇವು ಕೊರತೆ: ಪಶು ಆಹಾರ ಬೆಲೆ ಗಗನಕ್ಕೆ

Published 27 ಮೇ 2024, 5:55 IST
Last Updated 27 ಮೇ 2024, 5:55 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಕಳೆದ ಕೆಲ ತಿಂಗಳಿನಿಂದ ಮಳೆ ಕೊರತೆಯಿಂದಾಗಿ ಹಸಿ ಮೇವು ಇಲ್ಲ, ಒಣ ಮೇವೂ ಸಿಗುತ್ತಿಲ್ಲ. ಇದರಿಂದಾಗಿ ಸೀಮೆ ಹಸು, ಎತ್ತು, ಎಮ್ಮೆ, ಕುರಿ, ಮೇಕೆಗಳನ್ನು ನಿರ್ವಹಣೆ ಮಾಡಲಾಗದೆ ಕೆಲ ರೈತರು ಅವುಗಳ ಮಾರಾಟಕ್ಕೆ ಮುಂದಾಗಿದ್ದಾರೆ.

ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಗಡಿಗೆ ಹೊಂದಿಕೊಂಡಂತಿರುವ ಆಂಧ್ರ, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದಲೂ ಹಲವು ದೊಡ್ಡ ದೊಡ್ಡ ರೈತರು, ಹೈನು ಕ್ಷೇತ್ರದ ಉದ್ದಿಮೆದಾರರು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದಲ್ಲಾಳಿಗಳ ಮೂಲಕ ಸೀಮೆ ಹಸು, ಎತ್ತು, ಎಮ್ಮೆ, ಕುರಿ, ಮೇಕೆಗಳನ್ನು ಖರೀದಿಸಿ ಅಲ್ಲಿಗೆ ಸಾಗಾಣೆ ಮಾಡುತ್ತಿದ್ದಾರೆ.

ಕಳೆದ ಮುಂಗಾರು ಮಳೆಗಾಲದಲ್ಲಿ ವಾಡಿಕೆಯಷ್ಟು ಮಳೆ ಬೀಳದ ಕಾರಣ ಮತ್ತು ಈ ಬಾರಿಯ ಬೇಸಿಗೆಯಿಂದಾಗಿ ಬರಗಾಲ ಎದುರಾಗಿದೆ. ಒಂದು ಕಡೆ ರಾಗಿ ಕಾಳೂ ಇಲ್ಲ ಇನ್ನೊಂದು ಕಡೆ ಮೇವೂ ಇಲ್ಲದಾಗಿದೆ. ಕೆರೆ ಕುಂಟೆ ಕಾಲುವೆಗಳಲ್ಲೂ ನೀರು ಇಲ್ಲವಾಗಿದ್ದು, ಹಸಿ ಮೇವು ಕೊರತೆಯುಂಟಾಗಿದೆ.

ಇದರಿಂದಾಗಿ ಕೇವಲ ಹಾಲು ಕೊಡುವ ಸೀಮೆ ಹಸು, ಎಮ್ಮೆ ಮಾತ್ರವಲ್ಲದೆ ಕುರಿ, ಮೇಕೆ, ಎತ್ತುಗಳನ್ನು ನಿರ್ವಹಣೆ ಮಾಡಲು ಸಾಕಷ್ಟು ರೈತರು ಹೆಣಗಾಡುವಂತಾಗಿದೆ.

ಅದರಲ್ಲೂ ಹಾಲು ನೀಡುವ ಹಸು, ಎಮ್ಮೆಗಳಿಗೆ ಹಸಿ ಮೇವು ನೀಡದ ಕಾರಣ ಹಾಗೂ ಒಣ ಮೇವನ್ನು ಸಾಕಷ್ಟು ಪ್ರಮಾಣದಲ್ಲಿ ನೀಡದ ಕಾರಣ ಹಾಲಿನ ಪ್ರಮಾಣವೂ ಕುಸಿದಿದೆ. ಲಾಭವೂ ಇಲ್ಲವಾಗಿದೆ.

ಎಂದಿನಂತೆ ಹಾಲು ನೀಡಬೇಕಾದರೆ ಹಸಿ ಮೇವು, ಒಣ ಮೇವಿನ ಜತೆಗೆ ಪಶು ಆಹಾರ ನೀಡಬೇಕು. ಇದೀಗ ಮೇವಿನ ಕೊರತೆಯಿಂದ ಮೇವಿನ ಬದಲು ಪಶು ಆಹಾರ ನೀಡೋಣ ಎಂದರೆ ಪಶು ಆಹಾರದ ಬೆಲೆಯೂ ಮಾರುಕಟ್ಟೆಯಲ್ಲಿ ದುಪ್ಪಟ್ಟಾಗಿದೆ. ಹಾಗಾಗಿ ಸಾಕಷ್ಟು ರೈತರು ಸೀಮೆ ಹಸು, ಎಮ್ಮೆಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.

ಸ್ಥಳೀಯವಾಗಿ ಬಹುತೇಕ ರೈತರಿಗೆ ಮೇವಿನ ಬರ ಇರುವ ಕಾರಣ ಸ್ಥಳೀಯರು ಎತ್ತು, ಎಮ್ಮೆ, ಸೀಮೆ ಹಸು, ಕುರಿ, ಮೇಕೆಗಳನ್ನು ಕೊಂಡುಕೊಳ್ಳುವ ಗೋಜಿಗೆ ಹೋಗುತ್ತಿಲ್ಲ. ಹಾಗಾಗಿ ಆಂಧ್ರ, ತೆಲಂಗಾಣ, ಮಹಾರಾಷ್ಟ್ರಕ್ಕೆ ಸಾಕಷ್ಟು ಸಂಖ್ಯೆಯ ಸೀಮೆ ರಾಸುಗಳು ಮಾರಾಟವಾಗುತ್ತಿವೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಚ್ಚು ಹಾಲು ನೀಡುವ ಜೆರ್ಸಿ ಮತ್ತು ಎಚ್‌.ಎಫ್ ತಳಿಯ ಸೀಮೆ ಹಸುಗಳೆ ಹೆಚ್ಚಿನ ಸಂಖ್ಯೆಯಲ್ಲಿವೆ. ನಾಟಿ ತಳಿಯ ಸೀಮೆ ಹಸುಗಳು ಸೀಮಿತ ಸಂಖ್ಯೆಯಲ್ಲಿವೆ. ಈ ಜೆರ್ಸಿ ಮತ್ತು ಎಚ್‌.ಎಫ್ ತಳಿಯ ಸೀಮೆ ಹಸುಗಳಿಗೆ ಹಸಿರು ಮೇವು ಜತೆಗೆ ಪಶು ಆಹಾರ ನೀಡಿದರಷ್ಟೆ ವಾಡಿಕೆಯಂತೆ ಹಾಲು ನೀಡುತ್ತವೆ. ಹಸಿ ಮೇವು ನೀಡದೆ ಒಣ ಮೇವು ನೀಡಿದರೆ ವಾಡಿಕೆಗಿಂತಲೂ ಹೆಚ್ಚು ಪ್ರಮಾಣದಲ್ಲಿ ಪಶು ಆಹಾರ ನೀಡಬೇಕಾಗುತ್ತದೆ. ಪಶು ಆಹಾರ ಹೆಚ್ಚಿನ ಪ್ರಮಾಣದಲ್ಲಿ ನೀಡುವುದು ಹೈನುಗಾರರಿಗೆ ಹೊರೆ ಆಗುತ್ತಿದ್ದು ನಷ್ಟವಾಗುತ್ತಿದೆ. ಬರದಿಂದಾಗಿ ಹಸಿ ಮೇವು ಸಿಗುತ್ತಿಲ್ಲವಾದ್ದರಿಂದ ಸೀಮೆ ಹಸುಗಳನ್ನು ಮಾರಾಟಕ್ಕೆ ಮುಂದಾಗಿದ್ದಾರೆ.

ಪಶು ಆಹಾರದ ಬೆಲೆ ಹೆಚ್ಚಳ

ಹಸಿ ಮೇವಿನ ಕೊರತೆ ಹೆಚ್ಚಾದಾಗ ರಾಸುಗಳಿಗೆ ಪಶು ಆಹಾರ ಹೆಚ್ಚಿನ ಪ್ರಮಾಣದಲ್ಲಿ ನೀಡಿದರಷ್ಟೆ ಹಾಲು ಕೊಡುತ್ತದೆ. ಇಲ್ಲವಾದಲ್ಲಿ ಹಾಲು ಕೊಡುವ ಪ್ರಮಾಣ ಕಡಿಮೆ ಅಗುತ್ತದೆ.

ಇದೀಗ ಮಾರುಕಟ್ಟೆಯಲ್ಲಿ ಪಶು ಆಹಾರದ ಬೆಲೆಗಳೂ ಹೆಚ್ಚಿವೆ. ಮಾರುಕಟ್ಟೆಯಲ್ಲಿ ನಾನಾ ಕಂಪನಿಗಳ ಬೂಸಾ ಲಭ್ಯವಿದ್ದು ಬೂಸಾ ₹1350ರಿಂದ ₹1400 (49 ಕೆ.ಜಿ) ಚಕ್ಕೆ ₹1600-₹1650 (30 ಕೆ.ಜಿ) ಫೀಡ್ ₹1150ರಿಂದ ₹1200 (50 ಕೆ.ಜಿ) ಕೋಚಿಮುಲ್‌ನಿಂದ ವಿತರಿಸುವ ಪಶು ಆಹಾರ ನಂದಿನಿ ಬೈಪಾಸ್ ₹1280 (50 ಕೆ.ಜಿ) ಬೆಲೆ ಇದೆ. ಯಾರಿಗೂ ಲಾಭ ಇಲ್ಲ ಹಸಿ ಮೇವು ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲವೆಂದು ಬೆಳೆಯಲು ಸಾಕಷ್ಟು ಖರ್ಚು ಬರುತ್ತದೆಂದು ಹಲವಾರು ಮಂದಿ ಬೆಳೆಯುವುದನ್ನೇ ನಿಲ್ಲಿಸಿದ್ದಾರೆ.

ಬೆಲೆ ಒಂದು ಟನ್‌ಗೆ ಒಂದು ಸಾವಿರ ರೂ ಹೆಚ್ಚಳವಾಗಿದೆ. ಹಸು ಸಾಕುವವರಿಗೆ ಸಾಕಷ್ಟು ಹೊರೆಯಾಗುತ್ತಿದೆ. ಮೇವು ಬೆಳೆಯುವ ರೈತ ಮಾರುವ ವ್ಯಾಪಾರಿ ಕೊಳ್ಳುವ ಹೈನುಗಾರರು ಯಾರಿಗೂ ಲಾಭ ಸಿಗದಂತಾಗಿದೆ. ಎಂ.ವಿ.ವೆಂಕಟಸ್ವಾಮಿ ಹಸಿ ಮೇವಿನ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT