ಶನಿವಾರ, ಜೂನ್ 19, 2021
21 °C

ಸಿಎಎ ಕುರಿತ ಜನ ಜಾಗರಣ ಅಭಿಯಾನದಲ್ಲಿ ವಿರೋಧ ಪಕ್ಷಗಳ ವಿರುದ್ಧ ಶೋಭಾ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ‘ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿಚಾರದಲ್ಲಿ ಮುಸ್ಲಿಮರನ್ನು ಎತ್ತಿಕಟ್ಟಿ, ಅಪಪ್ರಚಾರ ಮಾಡುತ್ತಿರುವ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್‌ ನಾಯಕರು ಬಹಿರಂಗ ವೇದಿಕೆಗೆ ಚರ್ಚೆಗೆ ಬಂದು, ಸಿಎಎಯಿಂದ ಭಾರತದಲ್ಲಿ ಹುಟ್ಟಿದ ಮುಸ್ಲಿಮರಿಗೆ ಯಾವ ರೀತಿ ತೊಂದರೆಯಾಗುತ್ತದೆ ಎಂಬುದರ ಕುರಿತು ಚರ್ಚೆ ಮಾಡಲಿ. ಆದರೆ ವಿರೋಧ ಪಕ್ಷದವರು ಚರ್ಚೆಗೂ ಬರದೆ, ಅದಕ್ಕೆ ಅವಕಾಶವನ್ನೂ ಕೊಡದೆ ನಿರಂತರ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಿದರು. 

ನಗರದಲ್ಲಿ ಶುಕ್ರವಾರ ಸಿಎಎ ಕುರಿತ ಜನ ಜಾಗರಣ ಅಭಿಯಾನ ಮತ್ತು ಮನೆ ಮನೆ ಸಂಪರ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಪಪ್ರಚಾರ ಮಾಡುವವರು ಬಹಿರಂಗ ಚರ್ಚೆಗೆ ಬಂದು ಸತ್ಯ ತಿಳಿದುಕೊಳ್ಳಲಿ. ಬಳಿಕ ಪರ–ವಿರೋಧದ ಮಾತನಾಡಲಿ. ದೇಶದಲ್ಲಿ ಎಲ್ಲ ಸಮುದಾಯದವರು ಒಟ್ಟಾಗಿ ಬದುಕುತ್ತಿದ್ದಾರೆ. ಭಾರತದಲ್ಲಿ ಹುಟ್ಟಿದ ಯಾವುದೇ ಮುಸ್ಲಿಮರಿಗೆ ಸಿಎಎ ಅನ್ವಯಿಸುವುದಿಲ್ಲ. ಯಾರು ಕೂಡ ಕಾಂಗ್ರೆಸ್‌ನ ಕೆಟ್ಟ ರಾಜನೀತಿಗೆ ಬಲಿಯಾಗಬಾರದು’ ಎಂದು ಹೇಳಿದರು.

‘ಕಾಂಗ್ರೆಸ್ ಸೇರಿದಂತೆ ಅನೇಕ ವಿರೋಧ ಪಕ್ಷಗಳು ಸಿಎಎ ಬಗ್ಗೆ ಅಪಪ್ರಚಾರ ಮಾಡುತ್ತ, ಅಲ್ಪಸಂಖ್ಯಾತರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಜನ ಸಂಘರ್ಷ ಉಂಟು ಮಾಡಿ, ಆ ಮೂಲಕ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡುವ ಕೆಲಸ ಮಾಡುತ್ತಿವೆ. ಇಂತಹ ಅಪಪ್ರಚಾರದಿಂದ ತಮ್ಮ ಮತ ಬ್ಯಾಂಕ್‌ ಮತ್ತಷ್ಟು ಗಟ್ಟಿಗೊಳಿಸಬಹುದು ಎಂದು ಭಾವಿಸಿಕೊಂಡಿರುವ ಕಾಂಗ್ರೆಸ್‌ನವರು, ದೇಶದಲ್ಲಿ ಎರಡು ಸಮುದಾಯದವರನ್ನು ಸಂಘರ್ಷಕ್ಕೆ ಈಡು ಮಾಡುವ ಪಾಪದ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು. 

‘ವೈಚಾರಿಕ ಸಂಘರ್ಷಕ್ಕೆ ಸ್ವಾಗತವಿದೆ. ಆದರೆ ದೇಶದಲ್ಲಿ ಇವತ್ತು ಕಾಲೇಜು, ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನು ದೇಶದ ವಿರುದ್ಧ ಎತ್ತಿಕಟ್ಟುವ ಕೆಲಸ ನಡೆಯುತ್ತಿದ್ದೆ. ಅದಕ್ಕೆ ಜೆಎನ್‌ಯು, ಮೈಸೂರು ಘಟನೆಗಳೇ ಉದಾಹರಣೆ. ಇದರ ಹಿಂದಿರುವ ಶಕ್ತಿಗಳನ್ನು ಪತ್ತೆ ಮಾಡಬೇಕು. ಜೆಎನ್‌ಯು ಮತ್ತು ರಾಜ್ಯದ ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ನಿಲಯಗಳಲ್ಲಿ ಅವಧಿಗೂ ಮೀರಿ ಬೀಡು ಬಿಟ್ಟು ವಿದ್ಯಾರ್ಥಿಗಳಲ್ಲಿ ವಿಷಬೀಜ ಬಿತ್ತುವ ದೇಶದ್ರೋಹಿ ಶಕ್ತಿಗಳನ್ನು ಪತ್ತೆ ಮಾಡಿ ಶಿಕ್ಷೆಗೆ ಗುರಿಪಡಿಸಬೇಕಾಗಿದೆ’ ಎಂದು ಹೇಳಿದರು. 

‘ಕಾಶ್ಮೀರದ ಮಾದರಿಯಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಲ್ಲು ಎಸೆಯುವ ಕೆಟ್ಟ, ದುಷ್ಟ ಸಂಸ್ಕೃತಿ ಮೊದಲ ಬಾರಿಗೆ ದೇಶದಾದ್ಯಂತ ಹರಡುತ್ತಿದೆ. ಇದರ ಹಿಂದಿರುವ ಶಕ್ತಿಗಳನ್ನು ಪತ್ತೆ ಮಾಡಬೇಕು. ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು