ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: 13 ಪೊಲೀಸ್‌, 9 ಕೈದಿಗಳಿಗೆ ಕೋವಿಡ್

ಪೊಲೀಸರ ಕುಟುಂಬಗಳಿಗೆ ಧೈರ್ಯತುಂಬುತ್ತಿರುವ ಎಸ್‌ಪಿ, ಡಿವೈಎಸ್‌ಪಿ
Last Updated 27 ಏಪ್ರಿಲ್ 2021, 3:14 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ 13 ಮಂದಿ ಪೊಲೀಸ್ ಸಿಬ್ಬಂದಿ ಹಾಗೂ ಜಿಲ್ಲಾ ಕಾರಾಗೃಹದಲ್ಲಿನ 9 ಕೈದಿಗಳಿಗೆ ಕೊರೊನಾ ಸೋಂಕು ತಗುಲಿದೆ. ಪೊಲೀಸರು ಕೊರೊನಾ ಕೆಲಸದಲ್ಲಿ ಸಕ್ರಿಯವಾಗಬೇಕಾದ ಕಾರಣ ಅವರ ಕುಟುಂಬ ಸದಸ್ಯರಿಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಧೈರ್ಯ ತುಂಬಲಾಗುತ್ತಿದೆ.

ಡಿಆರ್‌ಡಿವೈಎಸ್‌ಪಿ ಅವರು ಕೋವಿಡ್ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಜಿಲ್ಲಾ ಪೊಲೀಸ್ ಇಲಾಖೆಯಿಂದ ಕೋವಿಡ್ ಸೋಂಕಿತ ಸಿಬ್ಬಂದಿಯ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಲು ಮತ್ತು ಸಿಬ್ಬಂದಿಯಲ್ಲಿ ಆತ್ಮವಿಶ್ವಾಸ ಮೂಡಿಸಲು ಕಂಟ್ರೋಲ್ ರೂಂ ಸಹ ಆರಂಭಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಕೋವಿಡ್ ಸೋಂಕಿತ ಸಿಬ್ಬಂದಿಗೆ ಕರೆ ಮಾಡಿ ಆತ್ಮವಿಶ್ವಾಸ ಸಹ ಮೂಡಿಸುತ್ತಿದ್ದಾರೆ.

‘ಒಬ್ಬ ಕೈದಿಯನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ 8 ಮಂದಿ ಕೈದಿಗಳನ್ನು ಕಂದವಾರ ಬಾಗಿಲು ಬಳಿಯ ಕೋವಿಡ್ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇಲ್ಲಿ ಪೊಲೀಸ್ ಭದ್ರತೆ ಹಾಕಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪೊಲೀಸ್ ಇಲಾಖೆಯ ಇಬ್ಬರು ಸಿಬ್ಬಂದಿ ಗೌರಿಬಿದನೂರು ತಾಲ್ಲೂಕು ಆಸ್ಪತ್ರೆಯಲ್ಲಿ, ಒಬ್ಬರು ಗೌರಿಬಿದನೂರಿನ ಕ್ವಾರಂಟೈನ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 10 ಮಂದಿ ಹೋಂ ಐಸೋಲೇಷನ್‌ನಲ್ಲಿ ಇದ್ದಾರೆ’ ಎಂದರು.

ಸೋಂಕಿಗೆ ತುತ್ತಾಗಿರುವ ಸಿಬ್ಬಂದಿಯ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆಯೂ ಗಮನ ನೀಡಲಾಗಿದೆ. ಈಗಾಗಲೇ ಸಿಬ್ಬಂದಿಯ ಕುಟುಂಬದಲ್ಲಿರುವ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಿಸಲಗಿದೆ. ಕುಟುಂಬದವರು ಸಹ ತಮ್ಮ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನುವಹಿಸಬೇಕು ಎಂದು ಕೋರಿದರು.

ಕಳೆದ ವರ್ಷವೂ ಜಿಲ್ಲಾ ಪೊಲೀಸ್ ಇಲಾಖೆ ಕೆಲವು ಮಾರ್ಗಸೂಚಿಗಳನ್ನು ಅನುಸರಿಸಿತ್ತು. ಈ ವರ್ಷವೂ ಅದನ್ನು ಪಾಲಿಸುತ್ತಿದ್ದೇವೆ. ಪೊಲೀಸ್ ಠಾಣೆಗಳಲ್ಲಿ ಟೇಪ್‌ಗಳನ್ನು ಕಟ್ಟುತ್ತಿದ್ದೇವೆ. ಸಿಬ್ಬಂದಿಯ ಕರ್ತವ್ಯದ ಬಗ್ಗೆಯೂ ವಾಟ್ಸ್‌ಆ್ಯಪ್‌ನಲ್ಲಿಯೇ ಮಾಹಿತಿ ನೀಡಲಾಗುತ್ತಿದೆ. ಸಾರ್ವಜನಿಕರು ಸಾಧ್ಯವಾದಷ್ಟು ಠಾಣೆಗಳಿಗೆ ಬರದಂತೆ ತಿಳಿ ಹೇಳಲಾಗಿದೆ ಎಂದರು.

ದಂಡ ವಿಧಿಸುವಾಗ ಅಥವಾ ಕೆಲಸದ ಅವಧಿಯಲ್ಲಿ ಅಂತರ ಕಾಯ್ದುಕೊಳ್ಳುವಂತೆ ಸಿಬ್ಬಂದಿಗೆ ತಿಳಿಸಲಾಗಿದೆ. ಅಗತ್ಯವಿದ್ದರೆ ಮಾತ್ರ ಸ್ಥಳಗಳಿಗೆ ಭೇಟಿ ನೀಡಬೇಕು. ಗ್ರಾಮಗಳಲ್ಲಿ ನಡೆಯುತ್ತಿದ್ದ ಗಸ್ತು ವ್ಯವಸ್ಥೆಯನ್ನೂ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ವಾಟ್ಸ್‌ಆ್ಯಪ್ ಗ್ರೂಪ್‌ಗಳ ಮೂಲ ನಿಗಾವಹಿಸುವಂತೆ ಗಸ್ತು ಸಿಬ್ಬಂದಿಗೆ ತಿಳಿಸಿದ್ದೇವೆ ಎಂದರು.

ಶೇ 96ರಷ್ಟು ಪೊಲೀಸ್ ಸಿಬ್ಬಂದಿ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಗರ್ಭಿಣಿಯರು, ಕಿಡ್ನಿ ಸಮಸ್ಯೆಯುಳ್ಳವರು, ವೈದ್ಯರ ಸೂಚನೆ ಮೇರೆಗೆ ಬೇಡ ಎಂದವರಿಗೆ ಮಾತ್ರ ಲಸಿಕೆ ಹಾಕಿಸಿಲ್ಲ. ಕೋವಿಡ್ ಸೋಂಕಿತ ಕೈದಿಗಳ ಪ್ರಾಥಮಿಕ ಮತ್ತ ದ್ವಿತೀಯ ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT