ಚಿಂತಾಮಣಿ: ನೆಕ್ಕುಂದಿಪೇಟೆಯ ಕನ್ನಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಆವರಣದಲ್ಲಿ ವಿವಿಧ ಗಿಡಮರಗಳು ಹಾಗೂ ಹೂವಿನ ಗಿಡಗಳನ್ನು ಬೆಳೆಸಲಾಗಿದೆ.
ಪ್ರತಿದಿನ ಶಾಲಾ ಸಮಯದ ಮುಂಚೆ ಹಾಗೂ ಶಾಲಾ ಸಮಯದ ನಂತರ ವಿದ್ಯಾರ್ಥಿಗಳು ಗಿಡಗಳಿಗೆ ನೀರು ಉಣಿಸುವುದು, ಕಳೆ ಕೀಳುವುದು, ಪಾತಿ ಮಾಡುವ ಕಾರ್ಯದಲ್ಲಿ ತೊಡಗುತ್ತಾರೆ.
ಶಿಕ್ಷಣ ಇಲಾಖೆ, ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳ ನೆರವಿನಿಂದ ಎಲ್ಲ ಮೂಲ ಸೌಲಭ್ಯಗಳನ್ನು ಶಾಲೆ ಒಳಗೊಂಡಿದೆ. ಉತ್ತಮ ಶೈಕ್ಷಣಿಕ ವಿಕಾಸಕ್ಕೆ ಶಾಲೆಯ ಆವರಣದಲ್ಲಿ ಬೆಳೆಸಿರುವ ಹಸಿರು ವಾತಾವರಣ ಪೂರಕವಾಗಿದೆ.
ಶಾಲೆಯಲ್ಲಿ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ ಕಂಪ್ಯೂಟರ್, ಗ್ರಂಥಾಲಯ, ವಿಜ್ಞಾನ ಮತ್ತು ಗಣಿತದ ಕಿಟ್ ಸೇರಿದಂತೆ ಎಲ್ಲ ಅವಶ್ಯಕತೆಗಳನ್ನು ಒದಗಿಸಲಾಗಿದೆ. ಡೆಸ್ಕ್, ಬೆಂಚ್ ಹಾಗೂ ನಲಿ-ಕಲಿ ತರಗತಿಗೆ ಅವಶ್ಯಕವಾದ ಪೀಠೋಪಕರಣ ಇವೆ.
ನಿಸರ್ಗವೇ ಉತ್ತಮ ಶಿಕ್ಷಕ, ಮಕ್ಕಳಿಗೆ ಬಾಲ್ಯದಿಂದಲೇ ಪರಿಸರ ಮಹತ್ವವನ್ನು ತಿಳಿಸಿಕೊಡುವ ಹಾಗೂ ಪರಿಸರ ಕಾಳಜಿ ಮೂಡಿಸಲು ಶ್ರಮಿಸುತ್ತಿದ್ದೇವೆ. ಮಕ್ಕಳನ್ನು ಸೇರಿಸಿಕೊಂಡು ಹಸಿರನ್ನು ನಿರ್ವಹಣೆ ಮಾಡುತ್ತಿರುವುದರಿಂದ ಅವರಿಗೆ ಜವಾಬ್ದಾರಿ ಬಂದಿದೆ. ಮಕ್ಕಳು ಸಂತೋಷದಿಂದ ಪ್ರತಿನಿತ್ಯ ಗಿಡಗಳ ಬಗ್ಗೆ ಕಾಳಜಿ ವಹಿಸುತ್ತಾರೆ. ಹಸಿರು ಮೂಡಿಸುವ ಕಾರ್ಯಕ್ರಮಕ್ಕೆ ಶಾಲೆಯ ಎಸ್‌ಡಿಎಂಸಿ ಸದಸ್ಯರು ಹಾಗೂ ಪೋಷಕರ ಸಹಕಾರ ದೊರೆಯುತ್ತಿದೆ ಎಂದು ಹಿರಿಯ ಶಿಕ್ಷಕಿ ಕೆ.ಸಿ.ಚಂದ್ರಮ್ಮ ತಿಳಿಸಿದರು.
ಶಾಲೆಯ ಆವರಣದಲ್ಲಿ ಪರಿಸರಕ್ಕೆ ಹೆಚ್ಚಿನ ಒತ್ತು ನೀಡಿ ಸಸಿನೆಟ್ಟು ಹಸಿರು ಶಾಲೆಯನ್ನಾಗಿ ರೂಪಿಸಲಾಗಿದೆ. ಸುತ್ತಮುತ್ತಲೂ ಸ್ವಚ್ಛತೆ ಕಾಪಾಡಲಾಗಿದೆ. ಶಾಲೆಯ ಕಾರಿಡಾರ್‌ನಲ್ಲಿ ಬಣ್ಣ ಬಣ್ಣದ ಫಲಕಗಳನ್ನು ಬರೆಸಲಾಗಿದೆ. ಶಾಲಾ ಆವರಣದಲ್ಲೇ ಅಂಗನವಾಡಿ ಇದೆ. ಮಧ್ಯಾಹ್ನ ಬಿಸಿಯೂಟದ ಅಡುಗೆ ಮನೆ, ದಾಸ್ತಾನು ಕೊಠಡಿ, ಎರಡು ನೀರಿನ ಸಂಪ್, ನೀರಿನ ಫಿಲ್ಟರ್ ಸೌಲಭ್ಯವಿದೆ. ಶಾಲೆಯಲ್ಲಿ ಪ್ರತಿವರ್ಷ ವಿಶ್ವಪರಿಸರ ದಿನಾಚರಣೆ, ಕಲಿಕೋತ್ಸವ ದಿನಾಚರಣೆ ಹಾಗೂ ರಾಷ್ಟ್ರೀಯ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ.
ಶಾಲೆಯ ಆವರಣವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಬೇಕು ಎಂಬ ಉದ್ದೇಶದಿಂದ ವರ್ಷದಿಂದ ವರ್ಷಕ್ಕೆ ಸಸಿಗಳನ್ನು ನೆಡುತ್ತಾ ಪೋಷಣೆ ಮಾಡುತ್ತಾ ಸಾಗಿದೆವು. ನಮ್ಮ ಶ್ರಮ ಫಲಿಸಿದ್ದು ಈಗ ಶಾಲೆಯ ಆವರಣ ಹಸಿರಿನಿಂದ ಕಂಗೊಳಿಸುತ್ತಿದೆ ಎಂದು ಮಕ್ಕಳು ಸಂತಸ ವ್ಯಕ್ತಪಡಿಸಿದರು.
ಈ ಶಾಲೆ ರಾಜ್ಯಮಟ್ಟದ ಹಸಿರು ನೈರ್ಮಲ್ಯ ಶಾಲಾ ಅಭ್ಯುಧಯ ಪ್ರಶಸ್ತಿಗೆ ಭಾಜನವಾಗಿದೆ. ಜಿಲ್ಲೆಯ ಮುದ್ದೇನಹಳ್ಳಿಯ ಸತ್ಯಸಾಯಿ ಟ್ರಸ್ಟ್ ಈ ಪ್ರಶಸ್ತಿ ನೀಡಿದೆ.
ಶಾಲೆಯಲ್ಲಿ ಶಿಕ್ಷಕರು ಮಕ್ಕಳೊಂದಿಗೆ ಮಕ್ಕಳಂತೆ ಆಡಿ ನಲಿಯುತ್ತಾ ಕಲಿಸುತ್ತಾರೆ. ಸ್ವಂತ ಮಕ್ಕಳಂತೆ ಪ್ರೀತಿಯಿಂದ ಕಾಣುತ್ತಾರೆ. ಮಧ್ಯಾಹ್ನ ಬಿಸಿಯೂಟ ಕೊಡುತ್ತಾರೆ. ಬೇಜಾರಿಲ್ಲದೆ ಪ್ರತಿನಿತ್ಯ ಶಾಲೆಗೆ ಬರುತ್ತೇವೆಅಭಿಲಾಶ್ ವಿದ್ಯಾರ್ಥಿ
ನಮ್ಮ ಶಾಲೆಯಲ್ಲಿ ಕಲಿಯುವುದಕ್ಕೆ ಖುಷಿ ಕೊಡುತ್ತದೆ. ಶಿಕ್ಷಕರು ಪಾಠದ ಜತೆಗೆ ಸಾಂಸ್ಕೃತಿಕ ಚಟುವಟಿಕೆ ಮತ್ತು ಆಟಗಳನ್ನು ಆಡಿಸುತ್ತಾರೆ. ಸಂತೋಷದಿಂದ ಇಷ್ಟಪಟ್ಟು ಶಾಲೆಗೆ ಬರುತ್ತೇವೆಅಮೃತ ವಿದ್ಯಾರ್ಥಿನಿ
ಶಾಲೆ ಪ್ರಶಸ್ತಿ ಭಾಜನವಾಗಿರುವುದು ಹಾಗೂ ಮಾದರಿ ಶಾಲೆಯಾಗಿ ಮಾಡುವುದರಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದುಜಬೀನಾ ತಾಜ್ ಎಸ್‌ಡಿಎಂಸಿ ಅಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.