ಶುಕ್ರವಾರ, ಏಪ್ರಿಲ್ 10, 2020
19 °C

ಸುಧಾಕರ್‌ಗೆ ಕೋವಿಡ್‌-19 ಹೊಣೆ: ಗಡಿಗೆ ಬಂದು ವಾಪಾಸಾದ ಶ್ರೀರಾಮುಲು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಸೋಂಕು ಹರಡದಂತೆ ತೆಗೆದುಕೊಂಡ ಕ್ರಮಗಳನ್ನು ಪರಿಶೀಲಿಸಲು ಮಂಗಳವಾರ ಜಿಲ್ಲೆಗೆ ಬರುತ್ತಿದ್ದ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಜಿಲ್ಲೆಯ ಗಡಿ ಭಾಗದವರೆಗೆ ಬಂದು ವಾಪಸ್‌ ತೆರಳಿದರು.

ಸಂಜೆ ಬೆಂಗಳೂರಿನಿಂದ ಹೊರಟು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಗೆ ಸಭೆಗೆ ಬರುತ್ತಿದ್ದ ಶ್ರೀರಾಮುಲು ಅವರು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಂಗಳವಾರ ಕೊರೊನಾ ಸೋಂಕು ಹರಡುವಿಕೆ ಹಾಗೂ ನಿಯಂತ್ರಣದ ಉದ್ದೇಶದಿಂದ  'ಕೋವಿಡ್‌–19’ ಉಸ್ತುವಾರಿಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರಿಗೆ ವಹಿಸಿದ ಸುದ್ದಿ ತಿಳಿದು ಜಿಲ್ಲೆ ಪ್ರವೇಶಿಸದ ಬೆಂಗಳೂರಿಗೆ ವಾಪಾಸಾದರು.

ರಾಷ್ಟ್ರೀಯ ಹೆದ್ದಾರಿ 7ರ ಮೂಲಕ ಜಿಲ್ಲೆಗೆ ಬರುತ್ತಿದ್ದ ಶ್ರೀರಾಮುಲು ಅವರು ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಕ್ರಾಸ್‌ ತಲುಪುವ ಹೊತ್ತಿಗೆ, ಕೋವಿಡ್‌ 19 ಹೊಣೆಗಾರಿಕೆ ಹಿಂಪಡೆದು ರಾಜ್ಯಪಾಲರು ಹೊರಡಿಸಿದ ಆದೇಶದ ಬಗ್ಗೆ ಮಾಹಿತಿ ತಲುಪಿತು. ಇದರಿಂದ ಬೇಸರ ವ್ಯಕ್ತಪಡಿಸಿದ ಸಚಿವರು ಪ್ರವಾಸ ಅರ್ಧಕ್ಕೆ ಮೊಟಕುಗೊಳಿಸಿದರು ಎಂದು ತಿಳಿದು ಬಂದಿದೆ.

ಸಚಿವ ಶ್ರೀರಾಮುಲು ಅವರ ಜಿಲ್ಲಾ ಪ್ರವಾಸ ಸೋಮವಾರ ನಿಗದಿಯಾಗಿತ್ತು, ಕೊನೆಯ ಕ್ಷಣದಲ್ಲಿ ರದ್ದಾಗಿ ಮಂಗಳವಾರಕ್ಕೆ ಮುಂದೂಡಿಕೆಯಾಗಿತ್ತು. ಸಚಿವರ ಸಭೆ ಮತ್ತು ಜಿಲ್ಲಾ ಆಸ್ಪತ್ರೆ ಭೇಟಿಗಾಗಿ ಸಕಲ ಮಾಹಿತಿ, ಸಿದ್ಧತೆಯೊಂದಿಗೆ ಸಚಿವರನ್ನು ಎದುರುಗೊಳ್ಳಲು ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಸಜ್ಜಾಗಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳು ಈ ವಿಷಯ ತಿಳಿದು ಬೇಸತ್ತು ತಮ್ಮ ಕರ್ತವ್ಯಗಳಿಗೆ ವಾಪಾಸಾದರು.

ಕೊರೊನಾ ಸೋಂಕು ರಾಜ್ಯಕ್ಕೆ ಕಾಲಿಟ್ಟ ಅವಧಿಯಲ್ಲಿ ಶ್ರೀರಾಮುಲು ಅವರು ತಮ್ಮ ಮಗಳ ಮದುವೆ ಕಾರ್ಯಕ್ರಮದಲ್ಲಿ ಸಕ್ರಿಯರಾಗಿದ್ದರು. ಆ ವೇಳೆಯಲ್ಲಿ ಸುಧಾಕರ್ ಅವರೇ ಸೋಂಕು ಹರಡುವಿಕೆ ತಡೆಗೆ ಸಂಬಂಧ  ಪಟ್ಟ ಚಟುವಟಿಕೆಗಳ ಮೇಲುಸ್ತುವಾರಿ ವಹಿಸಿದ್ದರು. ಕೊರೊನಾ ಸೋಂಕು ತಡೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡುವಾಗಲೂ ಸಿದ್ಧತೆ ಇಲ್ಲದೇ ಬರುತ್ತಿದ್ದ ರಾಮುಲು ತಪ್ಪು ಮಾಹಿತಿ ನೀಡಿ, ಗೊಂದಲ ಮೂಡಿಸಿದ ಪ್ರಕರಣಗಳು ನಡೆದಿದ್ದವು.

ಸೋಮವಾರದಂದು ಕೊರೊನಾ ಸೋಂಕಿತರ ಸಂಖ್ಯೆ 33ಕ್ಕೆ ಏರಿದ್ದರೂ ರಾಮುಲು ಅವರು  ಈ ಸಂಖ್ಯೆಯನ್ನು 27 ಎಂದೇ ಪ್ರತಿಪಾದಿಸಿದ್ದರು. ಇದರಿಂದಾಗಿ ವಿಧಾನಸಭೆ ಮತ್ತು ವಿಧಾನನಪರಿಷತ್ತಿನಲ್ಲಿ ಸರ್ಕಾರ ಮುಜುಗರ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಿತ್ತು. ಈ ಕಾರಣಕ್ಕಾಗಿಯೇ ರಾಮುಲು ಅವರಿಗೆ ಇದ್ದ ಹೊಣೆಯನ್ನು ಕಿತ್ತುಕೊಂಡು ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸುವುದನ್ನು ಅರಿತಿರುವ ಸುಧಾಕರ್‌ಗೆ ಜವಾಬ್ದಾರಿ ವಹಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು