ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಬಜೆಟ್ | ಚಿಕ್ಕಬಳ್ಳಾಪುರ ನಿರೀಕ್ಷೆ ಅಪಾರ: ದೊರೆಯುವುದೇ ಭರಪೂರ?

Published 11 ಫೆಬ್ರುವರಿ 2024, 6:07 IST
Last Updated 11 ಫೆಬ್ರುವರಿ 2024, 6:07 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರ 2023ರ ಜುಲೈ 7ರಂದು ಮಂಡಿಸಿದ ಬಜೆಟ್‌ನಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಯಾವುದೇ ಯೋಜನೆಗಳ ಪ್ರಸ್ತಾಪವೂ ಇರಲಿಲ್ಲ. ಈಗ ಮತ್ತೆ ಬಜೆಟ್ ಮಂಡನೆಯ ದಿನಗಣನೆ ಆರಂಭವಾಗಿದೆ. ಈ ಹೊತ್ತಿನಲ್ಲಿ ‘ಚಿಕ್ಕಬಳ್ಳಾಪುರಕ್ಕೆ ಏನು ಕೊಡುವರು’ ಎನ್ನುವ ನಿರೀಕ್ಷೆ ಜನರದ್ದಾಗಿದೆ. ಬಜೆಟ್ ಮೇಲೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜನರು ಅಪಾರ ನಿರೀಕ್ಷೆಗಳನ್ನೇ ಹೊಂದಿದ್ದಾರೆ. 

ಹೈಟೆಕ್ ಹೂ ಮಾರುಕಟ್ಟೆ, ಕೈಗಾರಿಕಾ ಟೌನ್‌ಶಿಪ್ ನಿರ್ಮಾಣ, ಕೃಷಿ ಸಂಬಂಧಿ ಉತ್ಪನ್ನಗಳ ಮೌಲ್ಯವರ್ಧನೆಗೆ ಸಂಬಂಧಿಸಿದ ಕೈಗಾರಿಕೆಗಳ ಸ್ಥಾಪನೆ, ಜೀವವೈವಿಧ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ನಂದಿಬೆಟ್ಟದ ಅಭಿವೃದ್ಧಿ, ಎಚ್‌.ಎನ್.ವ್ಯಾಲಿ ನೀರು ಮೂರು ಹಂತದಲ್ಲಿ ಶುದ್ದೀಕರಣ, ಎತ್ತಿನಹೊಳೆ ನೀರು, ಜಿಲ್ಲಾ ಕ್ರೀಡಾಂಗಣಕ್ಕೆ ಕಾಯಕಲ್ಪ, ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ ರಚನೆ, ನಂದಿ ಅಭಿವೃದ್ಧಿ ಪ್ರಾಧಿಕಾರದ ರಚನೆ–ಹೀಗೆ ಹಲವು ವಿಚಾರಗಳ ಬಗ್ಗೆ ಬಜೆಟ್‌ನಲ್ಲಿ ನಿರೀಕ್ಷೆಗಳನ್ನು ಹೊಂದಲಾಗಿದೆ. ಇವುಗಳಲ್ಲಿ ಕನಿಷ್ಠ ಮಟ್ಟದಲ್ಲಾದರೂ ಯೋಜನೆಗಳ ಬಗ್ಗೆ ಪ್ರಸ್ತಾಪವಾದರೂ ಚಿಕ್ಕಬಳ್ಳಾಪುರ ನಾಗರಿಕರಿಗೆ ಸಮಾಧಾನ ತರಲಿದೆ. 

ಚಿಕ್ಕಬಳ್ಳಾಪುರದಲ್ಲಿ ₹ 100 ಕೋಟಿ ವೆಚ್ಚದಲ್ಲಿ ಹೈಟೆಕ್ ಹೂವಿನ ಮಾರುಕಟ್ಟೆ ನಿರ್ಮಿಸಲಾಗುವುದು ಎಂದು ಬಿಜೆಪಿ ಆಡಳಿತದ ಕೊನೆಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಸ್ತಾಪಿಸಿದ್ದರು. ನಂತರ ಬಂದ ಕಾಂಗ್ರೆಸ್ ಸರ್ಕಾರವು, ‘ಹೂವಿನ ಮಾರುಕಟ್ಟೆ ಘೋಷಣೆ ಮಾಡಿದ್ದಾರಷ್ಟೇ ಹಣ ಮೀಸಲಿಟ್ಟಿಲ್ಲ’ ಎಂದಿತು. ಈ ಕಾರಣಕ್ಕೆ ಹೂ ಮಾರುಕಟ್ಟೆಯ ವಿಚಾರ ನನೆಗುದಿಗೆ ಬಿದ್ದಿತು. ತಾತ್ಕಾಲಿಕ ಮಾರುಕಟ್ಟೆಯ ಅವ್ಯವಸ್ಥೆಯ ನಡುವೆಯೇ ವಹಿವಾಟು ನಡೆಯುತ್ತಿದೆ. 

ರಾಜ್ಯದಲ್ಲಿಯೇ ಅತಿ ಹೆಚ್ಚು ಹೂ ಬೆಳೆಯುವ ತಾಲ್ಲೂಕುಗಳಲ್ಲಿ ಚಿಕ್ಕಬಳ್ಳಾಪುರ ಪ್ರಮುಖವಾಗಿದೆ. ಇಂತಹ ಕಡೆ ಹೈಟೆಕ್ ಹೂ ಮಾರುಕಟ್ಟೆ ನಿರ್ಮಿಸಬೇಕು. ಕಳೆದ ಬಜೆಟ್‌ನಲ್ಲಿ ಶಿಡ್ಲಘಟ್ಟ ರೇಷ್ಮೆ ಮಾರುಕಟ್ಟೆಗೆ ಹಣ ನೀಡಿದ್ದ ಸಿದ್ದರಾಮಯ್ಯ ಈ ಬಾರಿ ಚಿಕ್ಕಬಳ್ಳಾಪುರಕ್ಕೆ ಹೂ ಮಾರುಕಟ್ಟೆಗೆ ಹಣ ನೀಡಬೇಕು ಎನ್ನುವುದು ಹೂ ಬೆಳೆಗಾರರ ಆಗ್ರಹ. 

ಮೂರನೇ ಹಂತದ ಶುದ್ಧೀಕರಣ: ಎಚ್‌.ಎನ್.ವ್ಯಾಲಿ ಮತ್ತು ಕೆ.ಸಿ.ವ್ಯಾಲಿ ಯೋಜನೆ ನೀರನ್ನು ಮೂರು ಹಂತದಲ್ಲಿ ಶುದ್ದೀಕರಿಸಬೇಕು ಎನ್ನುವ ಒತ್ತಾಯ ನೀರಾವರಿ ಹೋರಾಟಗಾರರದ್ದು. ಬಸವರಾಜ ಬೊಮ್ಮಾಯಿ ತಮ್ಮ ಕೊನೆಯ ಬಜೆಟ್‌ನಲ್ಲಿಯೂ ಈ ಬಗ್ಗೆ ಪ್ರಸ್ತಾಪಿಸಿದ್ದರು. ಪ್ರದೀಪ್ ಈಶ್ವರ್ ಶಾಸಕರಾಗುವ ಮುನ್ನ ಮೂರು ಹಂತದಲ್ಲಿ ನೀರು ಶುದ್ದೀಕರಿಸಬೇಕು ಎನ್ನುವ ಧ್ವನಿ ಸಹ ಎತ್ತಿದ್ದರು. ಆದರೆ ಈಗ ಅವರೇ ಶಾಸಕರು. ಶಾಸಕರಾದ ತರುವಾಯ ಮೂರು ಹಂತದ ಶುದ್ದೀಕರಣದ ಬಗ್ಗೆ ‘ಗಟ್ಟಿಧ್ವನಿ’ಯೇ ಇಲ್ಲ. 

ಜಿಲ್ಲಾ ಕೇಂದ್ರದಲ್ಲಿರುವ ಸರ್‌.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣ ಅಧ್ವಾನ ಎನ್ನುವಂತಿದೆ. ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಬೇಕು ಅಭಿವೃದ್ಧಿಗೊಳಿಸಬೇಕು ಎಂದು ಕ್ರೀಡಾಪಟುಗಳು ಕ್ರೀಡಾ ಸಚಿವರಿಗೆ ಮನವಿಗಳನ್ನು ಮಾಡಿದರೂ ಪ್ರಯೋಜನವಾಗಿಲ್ಲ. ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ₹ 70 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ಅಭಿವೃದ್ಧಿಗೊಳಿಸುವುದಾಗಿ ತಿಳಿಸಿದ್ದಾರೆ. ನೀಲನಕ್ಷೆಯೂ ಸಿದ್ಧವಾಗಿದೆ. ಬಜೆಟ್‌ನಲ್ಲಿ ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿಗೆ ಅನುದಾನ ದೊರೆಯುವುದೇ ಕಾದು ನೋಡಬೇಕಿದೆ. 

ಕೈಗಾರಿಕೀಕರಣದ ಹಂಬಲ: ರಾಜಧಾನಿ ಬೆಂಗಳೂರಿಗೆ ಮತ್ತು ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚಿಕ್ಕಬಳ್ಳಾಪುರ ಸಮೀಪವಿದ್ದರೂ ಕೈಗಾರಿಕೀಕರಣದ ಅಭಿವೃದ್ಧಿಯಲ್ಲಿ ತೀರಾ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕಳೆದ ಬಜೆಟ್‌ನಲ್ಲಿ ನೆರೆಯ ಕೋಲಾರ ಜಿಲ್ಲೆಯ ಕೆಜಿಎಫ್‌ನಲ್ಲಿ ಕೈಗಾರಿಕಾ ಟೌನ್‌ಶಿಪ್ ನಿರ್ಮಾಣದ ಬಗ್ಗೆ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದರು. ಯಥಾ ಪ್ರಕಾರ ಈ ಬಾರಿಯೂ ಚಿಕ್ಕಬಳ್ಳಾಪುರದ ಜನರು ಕೈಗಾರಿಕಾ ಟೌನ್‌ಶಿಪ್ ಎದುರು ನೋಡುತ್ತಿದ್ದಾರೆ. 

ಕೃಷಿ ಪ್ರಧಾನವಾಗಿರುವ ಚಿಕ್ಕಬಳ್ಳಾಪುರದಲ್ಲಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಸಂಬಂಧಿಸಿದ ಕೈಗಾರಿಕೆಗಳನ್ನು ನಿರ್ಮಿಸಬೇಕು ಎನ್ನುವ ಆಗ್ರಹ ರೈತರದ್ದಾಗಿದೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ಮಂಚೇನಹಳ್ಳಿ ಹೆಸರಿಗಷ್ಟೇ ತಾಲ್ಲೂಕು ಕೇಂದ್ರ ಎನಿಸಿದೆ. ಹೊಸ ತಾಲ್ಲೂಕಿನ ಅಭಿವೃದ್ಧಿಗೆ ಅನುದಾನ ಅಗತ್ಯವಿದೆ.

ಐತಿಹಾಸಿಕ ನಂದಿಗಿರಿಧಾಮ ಮತ್ತು ಭೋಗ ನಂದೀಶ್ವರ ದೇಗುಲವನ್ನು ಒಳಗೊಂಡಂತೆ ನಂದಿ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು ಎನ್ನುವ ಪ್ರವಾಸಿಗರು ಮತ್ತು ಭಕ್ತರ ಆಗ್ರಹ ಇಂದಿಗೂ ಈಡೇರಿಲ್ಲ. ಹೀಗೆ ಬೆಂಗಳೂರಿಗೆ ಸಮೀಪವಿರುವ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ಅಭಿವೃದ್ಧಿ ವಿಚಾರವಾಗಿ ಜನರು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ. ಈ ನಿರೀಕ್ಷೆಗಳಿಗೆ ಸಿದ್ದರಾಮಯ್ಯ ಅವರ ಬಜೆಟ್ ಬಲ ನೀಡುತ್ತದೆಯೇ ಇಲ್ಲವೇ ಎನ್ನುವ ಕುತೂಹಲವೂ ನಾಗರಿಕರಲ್ಲಿ ಇದೆ.

ಸಿ.ಎಂಗೆ ಮನವಿ ನೀಡುವರೇ ಶಾಸಕರು?
ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಯಾವುದೇ ಹೊಸ ಯೋಜನೆಗಳು ಮಂಜೂರಾದರೂ ಅದರ ಕ್ರೆಡಿಟ್ ಶಾಸಕ ಪ್ರದೀಪ್ ಪ್ರದೀಪ್ ಈಶ್ವರ್‌ಗೆ ಸಲ್ಲುತ್ತದೆ. ಒಂದು ವೇಳೆ ಅಲ್ಪ ಪ್ರಮಾಣದಲ್ಲಿಯಾದರೂ ಚಿಕ್ಕಬಳ್ಳಾಪುರದ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವಿಲ್ಲದಿದ್ದರೆ ವಿರೋಧಿಗಳು ಶಾಸಕರ ಮೇಲೆ ಮುಗಿಬೀಳುವುದು ಖಚಿತ.  ಡಾ.ಕೆ.ಸುಧಾಕರ್ ಸಚಿವರಾಗಿದ್ದ ವೇಳೆ ಪ್ರಭಾವಿ ಎನಿಸಿದ್ದರು. ಬಜೆಟ್ ಸಮಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಪ್ರಭಾವ ಬೀರುವರು ಎನ್ನುವ ಮಾತುಗಳು ಆ ಸಮಯದಲ್ಲಿ ಇದ್ದವು. 
ಕ್ರೀಡಾಂಗಣಕ್ಕೆ ಕಾಯಕಲ್ಪ ಅಗತ್ಯ ಜಿಲ್ಲಾ ಕೇಂದ್ರದಲ್ಲಿನ ಕ್ರೀಡಾಂಗಣಕ್ಕೆ ಕಾಯಕಲ್ಪ ಅಗತ್ಯವಿದೆ. ಕ್ರೀಡಾಂಗಣ ಅಭಿವೃದ್ಧಿಗೊಳಿಸುವುದಾಗಿ ಸಚಿವರು ಹೇಳುತ್ತಿದ್ದಾರೆ. ಬಜೆಟ್‌ನಲ್ಲಿ ಮುಖ್ಯಮಂತ್ರಿ ಕ್ರೀಡಾಂಗಣ ಅಭಿವೃದ್ಧಿಗೆ ಹಣ ನೀಡಬೇಕು. ಸಚಿವರೇ ಮುತುವರ್ಜಿವಹಿಸಿದರೆ ಈ ಕಾರ್ಯಗಳು ಜಾರಿಗೊಳ್ಳುತ್ತವೆ.
ಮಂಚನಬಲೆ ಶ್ರೀನಿವಾಸ್ ಜಂಟಿ ಕಾರ್ಯದರ್ಶಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ 
ನೀರಾವರಿಗೆ ಅನುದಾನ ಅಗತ್ಯ ಎತ್ತಿನಹೊಳೆ ನೀರನ್ನು ಚಿಕ್ಕಬಳ್ಳಾಪುರಕ್ಕೆ ಆದಷ್ಟು ಬೇಗ ಹರಿಸಬೇಕಿದೆ. ಎಚ್‌.ಎನ್.ವ್ಯಾಲಿ ನೀರನ್ನು ಮೂರು ಹಂತದಲ್ಲಿ ಶುದ್ದೀಕರಿಸಬೇಕು. ಯಾವುದೇ ಕಾಮಗಾರಿಗಳಿಗಿಂತ ಚಿಕ್ಕಬಳ್ಳಾಪುರಕ್ಕೆ ಪ್ರಮುಖವಾಗಿ ಶುದ್ದ ನೀರು ಬೇಕಾಗಿದೆ.  ನೀರಾವರಿ ವಿಚಾರವು ಬಜೆಟ್‌ನಲ್ಲಿ ಪ್ರಸ್ತಾಪವಾಗಬೇಕು.
ಮೋಹನ್ ಕುಮಾರ್ ವಕೀಲ ಚಿಕ್ಕಬಳ್ಳಾಪುರ
ಎತ್ತಿನಹೊಳೆ ನೀರು ಬರಲಿ ಮೊದಲು ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು ಬರಬೇಕು. ಇದರಿಂದ ಬರಡು ಭೂಮಿ ಹಸಿರಾಗುತ್ತದೆ. ರೈತರ ಬದುಕು ಹಸನಾಗುತ್ತದೆ. ಚಿಕ್ಕಬಳ್ಳಾಪುರ ಸೇರಿದಂತೆ ಜಿಲ್ಲೆಯು ಕೃಷಿ ಪ್ರಧಾನವಾಗಿದೆ. ನವದೆಹಲಿಗೆ ಇಲ್ಲಿನ ಉತ್ಪನ್ನಗಳು ತಲುಪುವ ರೀತಿ ಸರಕು ಸಾಗಾಣಿಕೆ ರೈಲಿನ ವ್ಯವಸ್ಥೆಗಳು ಆಗಬೇಕು. ನೀರಿನ ಹಾಹಾಕಾರದಿಂದ ಬಳಲುತ್ತಿರುವ ಚಿಕ್ಕಬಳ್ಳಾಪುರಕ್ಕೆ ಶಾಶ್ವತ ನೀರಾವರಿ ಮೂಲದ ಯೋಜನೆಗಳು ಜಾರಿಯಾಗಬೇಕು.
ಮೋಹನ್ ಮುರುಳಿ ಚಿಕ್ಕಬಳ್ಳಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT