ಶನಿವಾರ, ಜನವರಿ 28, 2023
20 °C

ಸದಾಶಿವ ಆಯೋಗದ ವರದಿ ಜಾರಿಗೆ ದಸಂಸ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಕಣ್ಣೊರೆಸುವ ತಂತ್ರವನ್ನು ನಮ್ಮ ಪಾಲನ್ನು ನಮಗೆ ಸರ್ಕಾರ ಕೊಡಬೇಕು. ಈ ಹಿಂದೆ ಒಳಮೀಸಲಾತಿ ವಿಚಾರವಾಗಿ ನಿರ್ಲಕ್ಷ್ಯ ತೋರಿದ ಸಿದ್ದರಾಮಯ್ಯ ಅವರ ಸರ್ಕಾರವನ್ನೂ ಮನೆಗೆ ಕಳುಹಿಸಿದ್ದೇವೆ’ ಎಂದು ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಘಟನಾ ಸಂಚಾಲಕ ಬಿ.ಎನ್.ಗಂಗಾಧರಪ್ಪ ಆಗ್ರಹಿಸಿದರು. 

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಸರ್ಕಾರಗಳು ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ಹಿಂದೆ ಮುಂದೆ ನೋಡುತ್ತಿವೆ ಎಂದರು. 

ಕೊರಚ, ಲಂಬಾಣಿ, ಭೋವಿ ಸಮುದಾಯದವರು ಆಯೋಗದ ವರದಿಯನ್ನು ತಿರಸ್ಕರಿಸಿ ಎಂದು ಹೋರಾಟ ನಡೆಸುತ್ತಿದ್ದಾರೆ. ಆದರೆ 1972ರವರೆಗೆ ಈ ಸಮುದಾಯಗಳು ಎಸ್ಸಿ ಪಟ್ಟಿಯಲ್ಲಿಯೇ ಇರಲಿಲ್ಲ. ಎಲ್‌.ಜಿ.ಹಾವನೂರ್ ಅವರ ವರದಿಯ ನಂತರ ಈ ಸಮುದಾಯಗಳು ಎಸ್ಸಿ ಪಟ್ಟಿ ಸೇರಿದವು ಎಂದು ಹೇಳಿದರು. 

ಪರಿಶಿಷ್ಟ ಪಟ್ಟಿಯಲ್ಲಿರುವ ಹೊಲೆಯ ಮತ್ತು ಮಾದಿಗರಿಗಿಂತ ಲಂಬಾಣಿ, ಭೋವಿ ಸಮುದಾಯಗಳು ಮೀಸಲಾಥಿಯ ಅವಕಾಶವನ್ನು ಹೆಚ್ಚು ಪಡೆದಿವೆ. ನಾವು ಮೀಸಲಾತಿಯಿಂದ ಹೊರಗೆಯೇ ಇದ್ದೇವೆ. ನಾವು ಅವರನ್ನು ಎಸ್ಸಿ ಪಟ್ಟಿಯಿಂದ ಹೊರ ತೆಗೆಯಿರಿ ಎನ್ನುತ್ತಿಲ್ಲ. ಜನಸಂಖ್ಯೆಗೆ
ಅನುಗುಣವಾಗಿ ನಮಗೆ ಮೀಸಲಾತಿ ಕೊಡಿ ಎಂದು ಕೇಳುತ್ತಿದ್ದೇವೆ
ಎಂದರು. 

ಆಯೋಗದ ವರದಿಗೆ ವಿರೋಧವನ್ನು ಈ ಸಮುದಾಯಗಳು ಮುಂದುವರಿಸಿದರೆ ನಾವು ಇವರನ್ನು ‍ಪರಿಶಿಷ್ಟ ಜಾತಿ ಪಟ್ಟಿಯಿಂದ ಹೊರ ತೆಗೆಯಿರಿ ಎಂದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸರ್ಕಾರ ರಚಿಸಿರುವ ಉಪಸಮಿತಿಯಲ್ಲಿ ಸಚಿವ ಡಾ.ಕೆ.ಸುಧಾಕರ್ ಸಹ ಇದ್ದಾರೆ. ‌ಜಿಲ್ಲೆಯಲ್ಲಿ ಮಾದಿಗರು ಹೆಚ್ಚು ಇದ್ದೇವೆ. ಸಚಿವರು ಗಮನವಹಿಸಬೇಕು. ವರ್ಗೀಕರಣದ ಪರವಾಗಿ ಇರಬೇಕು ಎಂದರು.

ದಸಂಸ ಜಿಲ್ಲಾ ಅಧ್ಯಕ್ಷ ನರಸಿಂಹಪ್ಪ ಮಾತನಾಡಿ, ಕೊರಚ, ಲಂಬಾಣಿ ಮತ್ತು ಭೋವಿ ಸಮುದಾಯದವರು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮೀಸಲಾತಿಗಾಗಿ ಅವರು ಯಾವುದೇ ಹೋರಾಟ ಮಾಡಿಲ್ಲ ಎಂದರು.

ಜನಸಂಖ್ಯೆ ಆಧಾರದಲ್ಲಿ ಒಳಮೀಸಲಾತಿ ಜಾರಿಯಾಗಬೇಕು. ಇದಕ್ಕೆ ಈ ಸಮುದಾಯಗಳು ಸಹಕರಿಸಬೇಕು. ನಾವೆಲ್ಲರೂ ಒಗ್ಗಟ್ಟಾಗಿ ಇರೋಣ. ಒಕ್ಕಲಿಗರು, ಲಿಂಗಾಯತರು, ಬಲಿಜಿಗರು ಸೇರಿದಂತೆ ಎಲ್ಲರಿಗೂ ನಾವು ಮತ ಹಾಕಿದ್ದೇವೆ. ಆದರೆ ನಮ್ಮ ಬಗ್ಗೆ ಕಾಳಜಿ ಇಲ್ಲ ಎಂದು ದೂರಿದರು. 

ಮಂಜು ತುಳಸಿ, ನಾಗೇಶ್ ಕೊಳವನಹಳ್ಳಿ, ಜಯರಾಮ್ ಶ್ರೀರಾಮಪುರ, ನರಸಿಂಹಯ್ಯ ಮಂಚೇನಹಳ್ಳಿ, ಮಂಜುನಾಥ್ ಸಾದಲಿ, ಗಂಗಣ್ಣ ಇತರರು ಗೋಷ್ಠಿಯಲ್ಲಿ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.