ಪ್ರಕೃತಿ, ಕೆರೆ ಎಂದರೆ ಮೋಜು, ಮಸ್ತಿಗಾಗಿಯೇ ಇರುವಂಥದ್ದು ಎಂದುಕೊಂಡಿದ್ದರಿಂದಲೇ ನಾವು ಇಂದು ನೀರಿಲ್ಲದ ಸ್ಥಿತಿಗೆ ತಲುಪಿದ್ದೇವೆ. ಶೇಕಡ ಎರಡರಷ್ಟಿರುವ ಜನರ ಮೋಜಿಗಾಗಿ ಶೇ 98 ರೈತರು ಸಾಯಬೇಕೇ?
ಕೆ.ಸಿ ವ್ಯಾಲಿ, ಎಚ್.ಎನ್ ವ್ಯಾಲಿ ಸೇರಿದಂತೆ ಯಾವುದೇ ಯೋಜನೆ ಮಾಡುವುದಿದ್ದರೆ ಸರಿಯಾಗಿ ರೂಪಿಸಬೇಕು. ನೀರು ಜನರನ್ನು, ಕೆರೆಯನ್ನು ತಲುಪುವಂತಿರಬೇಕು. ಇಷ್ಟೆಲ್ಲ ಭಾರತದಲ್ಲೇ ತಂತ್ರಜ್ಞಾನ, ವಿಜ್ಞಾನಿಗಳು ಇದ್ದರೂ ನಮಗೆ ಶುದ್ಧೀಕರಿಸಿದ ನೀರನ್ನು ಕೊಡಲು ಸಾಧ್ಯವಾಗುತ್ತಿಲ್ಲ ಎಂದರೆ ಹಾಸ್ಯಾಸ್ಪದ ಅಲ್ಲವೇ?
ಬಯಲು ಸೀಮೆಯ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಜನ ಈಗಾಗಲೇ ನೀರಿಗಾಗಿ ಪರದಾಡುತ್ತಿದ್ದಾರೆ. ಈಗ ಬೆಂಗಳೂರಿನ ಕೊಳಚೆ ನೀರು ಹರಿಸಿ ಕೆರೆ ತುಂಬಿಸಲಾಗುತ್ತಿದೆ. ಅವಳಿ ವ್ಯಾಲಿ ಯೋಜನೆಗಳನ್ನು ಸರ್ಕಾರ ಅನುಷ್ಠಾನಗೊಳಿಸಿದೆ. ತಂತ್ರಜ್ಞಾನ ಇದೀಗ ಮುಂದುವರಿದಿದೆ. ಆದರೆ ಅದನ್ನೇ ಮುತುವರ್ಜಿಯಿಂದ ಮಾಡಲು ಇರುವ ಅಡ್ಡಿಯಾದರೂ ಏನು ಗೊತ್ತಾಗುತ್ತಿಲ್ಲ.
ಕೊಳಚೆ ನೀರನ್ನು ಶೇ 90 ಶುದ್ಧ ಮಾಡಿ ಕೊಡಬೇಕು. ಇನ್ನುಳಿದ ಶೇ 10ರಷ್ಟು ನೀರು ಕೆರೆಯಲ್ಲಿ ಪ್ರಾಕೃತಿಕವಾಗಿ ಶುದ್ಧವಾಗುತ್ತದೆ. ಬರದ ನಾಡಿಗೆ ಕೊಳಚೆ ನೀರು ಹರಿಸಿದ್ದರ ಪರಿಣಾಮ ಕೋಲಾರ, ಚಿಕ್ಕಬಳ್ಳಾಪುರದಿಂದ ಬರುವ ತರಕಾರಿಗಳೂ ತಿನ್ನಲು ಯೋಗ್ಯವಿಲ್ಲ ಎನ್ನುವಂತಾಗಿದೆ. ಸರ್ಕಾರ ಯಾವುದೇ ಇರಲಿ ಜವಾಬ್ದಾರಿ, ಬದ್ಧತೆ ಅತಿ ಮುಖ್ಯವಾಗುತ್ತದೆ.
ಇಲ್ಲಿನ ಹಣ್ಣು, ತರಕಾರಿ ಬೆಂಗಳೂರು ಮಾರುಕಟ್ಟೆಗೆ ಬರುತ್ತದೆ. ಶ್ರೀಮಂತರು ಸಾವಯವ ಎಂದು ಆಲೋಚನೆ ಮಾಡುತ್ತಾರೆ. ಅದು ಎಷ್ಟರ ಮಟ್ಟಕ್ಕೆ ಸಾವಯವವೋ ತಿಳಿಯದು. ಕೊಳಚೆ ನೀರಿನಲ್ಲಿ ಬೆಳೆದ ತರಕಾರಿ, ಸೊಪ್ಪು, ಹಣ್ಣುಗಳು ನಮ್ಮ ಹೊಟ್ಟೆ ಸೇರುತ್ತಿವೆ.
ತರಕಾರಿ, ಸೊಪ್ಪಿನಲ್ಲಿ ಲೋಹದ ಅಂಶ ಹೆಚ್ಚಾಗಿದೆ.ತರಕಾರಿಗೆ ಭೂಮಿಯಿಂದಲೂ ವಿಷದ ಅಂಶ ಸೇರುತ್ತಿದೆ. ಇನ್ನೊಂದೆಡೆ ತರಕಾರಿ, ಹಣ್ಣುಗಳು ಹಾಳಾಗದಂತೆ ಕಾಪಾಡಲು ಮನುಷ್ಯನೇ ಅವುಗಳಿಗೆ ರಾಸಾಯನಿಕ ವಿಷ ಉಣಿಸುತ್ತಿದ್ದಾನೆ. ಇವೆರಡೂ ಮರಳಿ ಮನುಷ್ಯನ ಹೊಟ್ಟೆ ಸೇರುತ್ತಿವೆ.
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಒಂದು ಕಾಲದಲ್ಲಿ ಏನೂ ಇರಲಿಲ್ಲ. ಈಗ ಅಲ್ಲೆಲ್ಲ ಹಸಿರು ಕಂಗೊಳಿಸುತ್ತಿದೆ. ತಂತ್ರಜ್ಞಾನದ ಸಹಾಯದಿಂದ ಇಸ್ರೇಲ್ ಸಾಧಿಸಿರುವುದನ್ನು ನೋಡಿ ನಾವು ಕಲಿಯುವುದು ಬಹಳಷ್ಟಿದೆ. ಒಂದೆಡೆ ಕಾಡನ್ನು ಕಡಿದು ಅಭಿವೃದ್ಧಿ ಎನ್ನಲಾಗುತ್ತದೆ. ಮತ್ತೊಂದೆಡೆ ಹಸಿರು, ಪ್ರಕೃತಿ, ನೀರು ಎಂದು ಬಡಬಡಿಸುತ್ತೇವೆ.
ಸರ್ಕಾರ ಯಾವುದೇ ಇರಲಿ. ಅದು ಇಂದೋ, ನಾಳೆಯೋ ಬದಲಾಗುತ್ತದೆ. ಆದರೆ ಇಲ್ಲಿರುವ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಅಧಿಕಾರಿಗಳೇ ಯೋಜನೆ ರೂಪಿಸಬೇಕಲ್ಲವೇ?
ಇಲ್ಲಿನ ಎಂಜಿನಿಯರ್‌ಗಳೇ ಈಗ ಬೇರೆ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಅವರನ್ನು ಇಲ್ಲೇ ಉಳಿಸಿಕೊಂಡರೆ ಅವರ ಜ್ಞಾನ, ತಂತ್ರಜ್ಞಾನ ನಾವೇ ಬಳಸಿಕೊಳ್ಳಬಹುದು. ಪರಿಸರ ಉಳಿದರೆ ಎಲ್ಲವೂ ಸರಿಯಾಗುತ್ತದೆ. ಕೋಟಿಗಟ್ಟಲೆ ಹಣ ವೆಚ್ಚ ಮಾಡಿ ರೂಪಿಸಿದ ಯೋಜನೆಯ ಫಲ ಜನರಿಗೆ, ರೈತರಿಗೆ ತಲುಪದಿದ್ದರೆ ಅಂಥ ಯೋಜನೆ ರೂಪಿಸಿ ಪ್ರಯೋಜನೆ ಏನು? ರಾಜಕಾರಣಿಗಳು ಮತ್ತು ಆಡಳಿತಶಾಹಿಗೆ ಈಗಲೂ ಬುದ್ದಿ ಬಂದಿಲ್ಲ ಎಂದಾದರೆ ಕೋಲಾರ, ಚಿಕ್ಕಬಳ್ಳಾಪುರದ ಸ್ಥಿತಿಯೇ ಮುಂದೊಂದು ದಿನ ಎಲ್ಲರಿಗೂ ಬರಲಿದೆ.
ಕೋಟಿಗಟ್ಟಲೆ ಹಣ ವೆಚ್ಚ ಮಾಡಿ ರೂಪಿಸಿದ ಯೋಜನೆಯ ಫಲ ಜನರಿಗೆ, ರೈತರಿಗೆ ತಲುಪದಿದ್ದರೆ ಅಂಥ ಯೋಜನೆ ರೂಪಿಸಿ ಉಪಯೋಗ ಏನು? ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಒಂದು ಕಾಲದಲ್ಲಿ ಏನೂ ಇರಲಿಲ್ಲ. ಈಗ ಅಲ್ಲೆಲ್ಲ ಹಸಿರು ಕಂಗೊಳಿಸುತ್ತಿದೆ. ತಂತ್ರಜ್ಞಾನದ ಸಹಾಯದಿಂದ ಇಸ್ರೇಲ್ ಸಾಧಿಸಿರುವುದನ್ನು ನೋಡಿ ನಾವು ಕಲಿಯುವುದು ಬಹಳಷ್ಟಿದೆ. ರಾಜಕಾರಣಿಗಳು ಮತ್ತು ಆಡಳಿತಶಾಹಿಗೆ ಈಗಲೂ ಬುದ್ದಿ ಬಂದಿಲ್ಲ ಎಂದಾದರೆ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರಿಗೆ ಬಂದೊದಗಿದ ಸ್ಥಿತಿಯೇ ಮುಂದೊಂದು ದಿನ ರಾಜ್ಯದ ಎಲ್ಲರಿಗೂ ಬರಲಿದೆ.
(ಲೇಖಕರು: ಸಾಮಾಜಿಕ ಕಾರ್ಯಕರ್ತ, ಪರಿಸರ ಹೋರಾಟಗಾರ, ವನ್ಯಜೀವಿ ಮಂಡಳಿಯ ಮಾಜಿ ಸದಸ್ಯ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.