ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಸುಧಾಕರ್ ಹೆಗಲಿಗೆ ಜಿಲ್ಲೆ ಉಸ್ತುವಾರಿ

ನಿರೀಕ್ಷೆಯಂತೆ ವೈದ್ಯಕೀಯ ಶಿಕ್ಷಣ ಸಚಿವರಿಗೆ ಒಲಿದ ಜಿಲ್ಲೆಯ ಹೊಣೆಗಾರಿಕೆ, ಜನರಲ್ಲಿ ಗರಿಗೆದರಿದ ಕನಸುಗಳು
Last Updated 10 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕಳೆದ ಕೆಲ ತಿಂಗಳಿಂದ ನನೆಗುದ್ದಿಗೆ ಬಿದ್ದಿದ ಜಿಲ್ಲಾ ಉಸ್ತುವಾರಿ ಸ್ಥಾನ ಹಂಚಿಕೆ ಕಾರ್ಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಪೂರ್ಣಗೊಳಿಸಿದ್ದು, ನಿರೀಕ್ಷೆಯಂತೆ ಜಿಲ್ಲೆಯ ಉಸ್ತುವಾರಿಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರಿಗೆ ವಹಿಸಲಾಗಿದೆ. ಈ ಮೂಲಕ ಜಿಲ್ಲೆಯ ಜನರಲ್ಲಿ ಹೊಸ ಕನಸುಗಳು ಗರಿಗೆದರಿವೆ.

ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸಿ ವಿಫಲರಾಗಿದ್ದ ಸುಧಾಕರ್ ಅವರು, ಆ ಸರ್ಕಾರ ಪತನಗೊಳಿಸುವಲ್ಲಿ ಮುಖ್ಯಪಾತ್ರ ವಹಿಸಿದ್ದರು. ಕಳೆದ ಜುಲೈನಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೆಪ್ಟೆಂಬರ್‌ನಲ್ಲಿ ಮೊದಲ ಬಾರಿಗೆ ಕೆಲ ಜಿಲ್ಲೆಗಳಿಗೆ ಮಾತ್ರ ಉಸ್ತುವಾರಿಗಳನ್ನು ನೇಮಕ ಮಾಡಿದ್ದರು.

ಆಗ ಸುಧಾಕರ್ ಅವರು ಅನರ್ಹಗೊಂಡು, ಉಪ ಚುನಾವಣೆ ಎದುರಿಸಬೇಕಾದ ಪರಿಸ್ಥಿತಿ ಇದ್ದ ಕಾರಣಕ್ಕೆ ಉಪಮುಖ್ಯಮಂತ್ರಿ, ರಾಮನಗರ ಜಿಲ್ಲಾ ಉಸ್ತುವಾರಿ ಆಗಿ ನಿಯೋಜನೆಗೊಂಡ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರಿಗೆ ಯಡಿಯೂರಪ್ಪ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಹೆಚ್ಚುವರಿ ಹೊಣೆಗಾರಿಕೆಯನ್ನು ವಹಿಸಿದ್ದರು.

ಉಪ ಚುನಾವಣೆಯಲ್ಲಿ ಸುಧಾಕರ್ ಅವರು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ವಿರೋಚಿತ ಗೆಲುವು ಸಾಧಿಸುತ್ತಿದ್ದಂತೆ, ಯಡಿಯೂರಪ್ಪ ಅವರು ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರ ಬಳಿ ಹೆಚ್ಚುವರಿಯಾಗಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಕಳೆದ ಫೆಬ್ರುವರಿಯಲ್ಲಿ ಇವರಿಗೆ ಹಂಚಿಕೆ ಮಾಡುವ ಮೂಲಕ, ತಮ್ಮ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಕ್ಕೆ ಉತ್ತಮ ಉಡುಗೊರೆಯಾಗಿ ನೀಡಿದ್ದರು.

ಜಿಲ್ಲೆಗೆ ಕಳೆದ ಆರೂವರೆ ತಿಂಗಳಲ್ಲಿ ಅಶ್ವತ್ಥನಾರಾಯಣ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಅಪರೂಪ ಅತಿಥಿಯಂತಿದ್ದರು. ಬೆರಳೆಣಿಕೆ ಬಾರಿ ಜಿಲ್ಲೆಗೆ ಬಂದಿದ್ದ ಹಂಗಾಮಿ ಉಸ್ತುವಾರಿ ಸಚಿವರು ಕಳೆದ ಅಕ್ಟೋಬರ್‌ನಲ್ಲಿ ಒಂದು ಸಭೆ ನಡೆಸಿದ್ದರು. ಆ ನಂತರ ಜಿಲ್ಲೆಯತ್ತ ತಲೆ ಹಾಕಿರಲಿಲ್ಲ.

ಈ ಕುರಿತಂತೆ ‘ಪ್ರಜಾವಾಣಿ’ ಏಪ್ರಿಲ್ 1 ರಂದು ‘ಜಿಲ್ಲೆಯತ್ತ ತಲೆ ಹಾಕದ ಉಸ್ತುವಾರಿ’ ಎಂಬ ಶೀರ್ಷಿಕೆ ಅಡಿ ವಿಶೇಷ ವರದಿ ಪ್ರಕಟಿಸಿತ್ತು. ವರದಿ ಪ್ರಕಟವಾದ ಬೆನ್ನಲ್ಲೆ ಎಚ್ಚೆತ್ತುಕೊಂಡ ಉಸ್ತುವಾರಿ ಸಚಿವರು ಏಪ್ರಿಲ್ 3 ರಂದು ಜಿಲ್ಲೆಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸುವ ಜತೆಗೆ ರೈತರ ಸಮಸ್ಯೆ ಆಲಿಸುವ ಕೆಲಸ ಮಾಡಿದ್ದರು.

ಇದೀಗ ಸುಧಾಕರ್ ಅವರಿಗೆ ಜಿಲ್ಲೆಯ ಉಸ್ತುವಾರಿ ವಹಿಸಿರುವುದು ಅವರ ಬೆಂಬಲಿಗರಿಗೆ ಮಾತ್ರವಲ್ಲ ಜಿಲ್ಲೆಯ ಜನರಿಗೂ ಸಂತಸ ಉಂಟು ಮಾಡಿದೆ. ಜಿಲ್ಲೆಯವರೇ ಆದ ಉಸ್ತುವಾರಿ ಸಚಿವರು ಇದ್ದರೆ ಜಿಲ್ಲೆ ಮತ್ತಷ್ಟು ಪ್ರಗತಿ ಪಥದಲ್ಲಿ ಮುಂದೆ ಹೋಗಲು ಸಾಧ್ಯವಾಗುತ್ತದೆ ಎನ್ನುವುದು ಸಾರ್ವಜನಿಕರ ಆಶಯವಾಗಿದೆ.

ಸತತ ಬರಗಾಲ, ಕುಡಿಯುವ ನೀರಿನ ತೀವ್ರ ಸಮಸ್ಯೆಯ ನಡುವೆಯೇ ಗಾಯದ ಮೇಲೆ ಬರೆ ಎಳೆದಂತೆ ಕಾಣಿಸಿಕೊಂಡ ಕೋವಿಡ್ 19 ಹಾವಳಿ ಜಿಲ್ಲೆಯನ್ನು ತತ್ತರಿಸುವಂತೆ ಮಾಡಿದೆ. ಇನ್ನೊಂದೆಡೆ, ತಮ್ಮ ಬೆಳೆಗಳನ್ನು ಸಕಾಲಕ್ಕೆ ಮತ್ತು ಯೋಗ್ಯ ಬೆಲೆಗೆ ಮಾರಾಟ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ ರೈತರು, ಹೂವು, ಹಣ್ಣು ಬೆಳೆಗಾರರ‌ನ್ನು ಹತಾಶೆಗೆ ತಳ್ಳಿದೆ. ಇಂತಹ ಪರಿಸ್ಥಿತಿಯನ್ನು ಸುಧಾಕರ್ ಅವರು ಹೇಗೆ ನಿಭಾಯಿಸುತ್ತಾರೆ ಎನ್ನುವುದು ಸದ್ಯ ಎಲ್ಲರ ಕುತೂಹಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT