ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆಹೊರೆಯಲ್ಲಿ ಸ್ವಚ್ಛತೆಯ ಅರಿವು ಮೂಡಿಸಿ

‘ಸ್ವಚ್ಛಮೇವ ಜಯತೆ’ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ಸ್ವಚ್ಛತಾ ರಸಪ್ರಶ್ನೆ ಕಾರ್ಯಕ್ರಮ ಆಯೋಜನೆ
Last Updated 2 ಜುಲೈ 2019, 12:12 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ವಿದ್ಯಾರ್ಥಿಗಳು ಸ್ವಚ್ಛತೆಯ ರೂವಾರಿಗಳಾಗಿ ತಮ್ಮ ಕುಟುಂಬ ಮತ್ತು ಸುತ್ತ ಮುತ್ತಲಿನ ಜನರಲ್ಲಿ ಪರಿಸರ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ ತಿಳಿಸಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಂಗಳವಾರ ‘ಸ್ವಚ್ಛಮೇವ ಜಯತೆ’ ಕಾರ್ಯಕ್ರಮದಡಿ ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸ್ವಚ್ಛ ಭಾರತ್ ಮಿಷನ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸ್ವಚ್ಛತಾ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಪರಿಸರದ ಸಂರಕ್ಷಣೆ ಹಾಗೂ ಸ್ವಚ್ಛತೆ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈಗಾಗಲೇ ನಮ್ಮಲ್ಲಿರುವ ಹಾಗೂ ನಾವು ಬಳಸುವ ಪ್ಲಾಸ್ಟಿಕ್‌ನಿಂದ ಯಾವ ರೀತಿ ಹಾನಿಯಾಗುತ್ತಿದೆ ಎಂದು ಜನಸಾಮಾನ್ಯರಿಗೆ ಅರಿವು ಇಲ್ಲ. ಆದ್ದರಿಂದ ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು’ ಎಂದು ಹೇಳಿದರು.

‘ಕಳೆದ ಮೂರು ವರ್ಷಗಳ ಹಿಂದೆ ನಮ್ಮ ಜಿಲ್ಲೆಯಲ್ಲಿ 2 ಲಕ್ಷ ಶೌಚಾಲಯಗಳು ಕೂಡ ಇರಲಿಲ್ಲ. ಆದರೆ ಬಯಲು ಬಹಿರ್ದೆಸೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಪ್ರತಿ ಮನೆಗೂ ಶೌಚಾಲಯ ನಿರ್ಮಾಣ ಮಾಡಿಕೊಟ್ಟಿದೆ. ಅವುಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಬಳಕೆ ಮಾಡುವ ಮೂಲಕ ಪರಿಸರ ಸ್ವಚ್ಛವಾಗಿಡಲು ಸಹಕರಿಸಬೇಕು’ ಎಂದು ತಿಳಿಸಿದರು.

‘ಈ ವರ್ಷದಿಂದ ಜಿಲ್ಲಾ ಪಂಚಾಯಿತಿ ವತಿಯಿಂದ ಪ್ರತಿ ಶಾಲೆಯಲ್ಲಿ ಶಿಕ್ಷಕರ ಜತೆಗೂಡಿ ವಿದ್ಯಾರ್ಥಿಗಳಿಗೆ ಸ್ವಚ್ಛತೆ ಬಗ್ಗೆ ತರಬೇತಿ ನೀಡಿ, ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಈ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಹಕರಿಸಬೇಕು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪಣ ತೊಡಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾಧಿಕಾರಿ ಮುನಿರಾಜು ಮಾತನಾಡಿ, ‘ಜನಸಂಖ್ಯೆ ಹೆಚ್ಚಾದಂತೆ ಸಮಸ್ಯೆಗಳು, ಕಾಯಿಲೆಗಳು ಉಲ್ಭಣಿಸುತ್ತವೆ. ಇಂತಹ ಪರಿಸ್ಥಿಯಲ್ಲಿ ನಾವು ಉತ್ತಮ ಜೀವನ ನಡೆಸಬೇಕಾದರೆ ನಮ್ಮ ಮುಂದಿನ ಭವಿಷ್ಯಕ್ಕಾಗಿ ಇಂದಿನಿಂದಲೇ ಸ್ವಚ್ಛತೆ, ಆರೋಗ್ಯದತ್ತ ಗಮನ ಹರಿಸಬೇಕಿದೆ’ ಎಂದರು.

‘ಈ ಹಿಂದೆ ತಾಲ್ಲೂಕಿಗೆ ಒಂದು ಆಸ್ಪತ್ರೆ ಇರುತ್ತಿದ್ದವು. ಆದರೆ ಬದಲಾದ ಸನ್ನಿವೇಶದಲ್ಲಿ ಇವತ್ತು ಬೀದಿಗೆ ಒಂದು ಆಸ್ಪತ್ರೆಗೆ ತಲೆ ಎತ್ತುತ್ತಿವೆ. ಆಸ್ಪತ್ರೆಗಳ ಮುಂದೆ ಜನ ಸಾಲುಗಟ್ಟಿ ನಿಂತಿರುವ ಚಿತ್ರಣ ಕಾಣುತ್ತೇವೆ. ಇದಕ್ಕೆಲ್ಲ ನಮ್ಮಲ್ಲಿರುವ ಹವ್ಯಾಸಗಳು, ಅಭ್ಯಾಸಗಳೇ ಮುಖ್ಯ ಕಾರಣ. ಇವತ್ತು ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳುವ ಅಗತ್ಯವಿದೆ. ಅಂದು ಸ್ವಾತಂತ್ರಕ್ಕಾಗಿ ಚಳುವಳಿ ನಡೆದಿದೆ. ಇಂದು ಸ್ವಚ್ಛತೆಗಾಗಿ ಆಂದೋಲನ ನಡೆಯಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ರಸಪ್ರಶ್ನೆ ಸ್ಪರ್ಧೆಯಲ್ಲಿ ಚಿಕ್ಕಬಳ್ಳಾಪುರದ ಗುಡ್‌ ಶೆಫರ್ಡ್‌ ಶಾಲೆಯ ವಿದ್ಯಾರ್ಥಿಗಳು ಪ್ರಥಮ, ಚಿಂತಾಮಣಿಯ ಕಿಶೋರ್ ವಿದ್ಯಾಭವನದ ವಿದ್ಯಾರ್ಥಿಗಳು ದ್ವಿತೀಯ ಮತ್ತು ಗೌರಿಬಿದನೂರಿನ ಎಸ್‌ಎಚ್‌ಇಎ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಅನುಕ್ರಮವಾಗಿ ₹10 ಸಾವಿರ, ₹7 ಸಾವಿರ ಮತ್ತು ₹5 ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಸಂಗಪ್ಪ ಉಪಾಸೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಜಿ.ನಾಗೇಶ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT