ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಯೊಂದು ನೀರಿನ ಹನಿಯೂ ಮುಖ್ಯ

‘ಜಲಾಮೃತ ಹಾಗೂ ಸ್ವಚ್ಛಮೇವ ಜಯತೆ’ ಕಾರ್ಯಕ್ರಮಕ್ಕೆ ಚಾಲನೆ
Last Updated 15 ಜೂನ್ 2019, 13:54 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಸತತ ಬರಗಾಲಕ್ಕೆ ತುತ್ತಾಗುತ್ತಿರುವ ನಮಗೆ ಇವತ್ತು ಪ್ರತಿಯೊಂದು ನೀರಿನ ಹನಿಯೂ ಮುಖ್ಯ ಎಂಬುದು ಜನ ಅರಿತುಕೊಳ್ಳಬೇಕು. ನಮ್ಮ ಹಿರಿಯರಂತೆ ಮುಂದಿನ ಪೀಳಿಗೆಗೆ ನೀರನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಹೇಳಿದರು.

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಸ್ವಚ್ಛ ಭಾರತ್ ಮಿಷನ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಶನಿವಾರ ಜಿಲ್ಲಾಡಳಿತ ಸಭಾ ಭವನದಲ್ಲಿ ಆಯೋಜಿಸಿದ್ದ ‘ಜಲಾಮೃತ ಹಾಗೂ ಸ್ವಚ್ಛಮೇವ ಜಯತೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಇವತ್ತು ನಮ್ಮ ಕೆರೆ, ಕಾಲುವೆಗಳು, ಬೆಟ್ಟ ಗುಡ್ಡಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಕೆರೆಗಳಿಗೆ ಬರುವ ನೀರಿನ ಮೂಲಗಳನ್ನು ಮುಚ್ಚಲಾಗಿದೆ. ಹಾಗಾಗಿ ಇವತ್ತು ನಮ್ಮ ಜಲ ಮೂಲಗಳು ಕಾಣೆಯಾಗಿ ಕಷ್ಟದ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದೇವೆ. ಪರಿಣಾಮ, ಕಳೆದ ಹಲವಾರು ವರ್ಷಗಳಿಂದ ಜಿಲ್ಲೆಗೆ ಬರಗಾಲ ಆವರಿಸಿಕೊಂಡು ಕುಡಿಯುವ ನೀರಿಗೂ ಹಾಹಾಕಾರ ಪಡುವ ಸ್ಥಿತಿ ಬಂದೊದಗಿದೆ’ ಎಂದು ತಿಳಿಸಿದರು.

‘ಇವತ್ತು ಜಿಲ್ಲೆಯಲ್ಲಿ ನಾವು ಎಷ್ಟೆ ಕೊಳವೆ ಬಾವಿಗಳನ್ನು ಕೊರೆಸಿದರೂ ನೀರು ಸಿಗುತ್ತಿಲ್ಲ. ನೀರಿನ ಅತಿಯಾದ ಬಳಕೆಯೇ ಇದಕ್ಕೆ ಕಾರಣ. ಬರದ ನಡುವೆಯೂ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರು ಎದೆಗುಂದದೆ ಹೈನುಗಾರಿಕೆ ಜತೆಗೆ ತರಕಾರಿ, ರೇಷ್ಮೆ ಉತ್ಪಾದನೆಯಲ್ಲಿ ದೊಡ್ಡ ಸಾಹಸವನ್ನೇ ಮಾಡುತ್ತಿದ್ದಾರೆ’ ಎಂದು ಶ್ಲಾಘಿಸಿದರು.

‘ಸರ್ಕಾರ ಈ ವರ್ಷವನ್ನು ಜಲ ವರ್ಷವೆಂದು ಘೋಷಣೆ ಮಾಡಿದೆ. ಈ ನಿಟ್ಟಿನಲ್ಲಿ ಇರುವ ನೀರು, ಮಳೆ ನೀರು ಕ್ರೋಡೀಕರಿಸುವುದು ಹಾಗೂ ನೀರಿನ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಹಾಗೂ ಎಲ್ಲ ಕಡೆ ಹಸರೀಕರಣ ಮಾಡಲು ಸರ್ಕಾರ ಜಲಾಮೃತ ಯೋಜನೆ ಜಾರಿಗೆ ತಂದಿದೆ. ಯಾವುದೇ ಯೋಜನೆಗಳನ್ನು ವೇದಿಕೆ ಕಾರ್ಯಕ್ರಮ ಮಾಡಿ ಘೋಷಣೆ ಮಾಡಿದರೆ ಸಾಕಾಗುವುದಿಲ್ಲ. ಅಂತಿಮವಾಗಿ ಅದರ ಆಶಯ ಈಡೇರಬೇಕು’ ಎಂದರು.

‘ಜಿಲ್ಲೆಯನ್ನು ಈಗಾಗಲೇ ಶೇ 90ರಷ್ಟು ಜನ ಶೌಚಾಲಯಗಳನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ ಕೆಲವು ಭಾಗಗಳಲ್ಲಿ ಇಂದಿಗೂ ಜನರು ಶೌಚಾಲಯಗಳನ್ನು ಬಳಕೆ ಮಾಡುತ್ತಿಲ್ಲ. ಶೌಚಾಲಯಗಳ ಬಳಕೆಗೆ ಜನರನ್ನು ಪ್ರೇರೇಪಿಸುವುದು, ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಬೇಕು. ಘನತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಜಲಮೂಲಗಳು ಮತ್ತು ಮನೆಯ ಪರಿಸರ ಸ್ವಚ್ಚವಾಗಿಟ್ಟುಕೊಳ್ಳಬೇಕು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್ ಮಾತನಾಡಿ, ‘ಜಿಲ್ಲೆ ರಾಜ್ಯದಲ್ಲಿ ಅತಿ ಹೆಚ್ಚು ಕೆರೆ, ಕುಂಟೆಗಳು ಹೊಂದಿದ್ದರೂ ಕಳೆದ 8 ವರ್ಷಗಳಿಂದ ತೀವ್ರ ಬರಗಾಲಕ್ಕೆ ತುತ್ತಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದೊಂದು ದಿನ ಜಿಲ್ಲೆ ರಾಜಸ್ಥಾನದ ಮರಭೂಮಿಯಂತೆ ಆಗುವುದರಲ್ಲಿ ಸಂಶವೇ ಇಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಅತಿಯಾದ ಗಣಿಗಾರಿಕೆ, ಮರಳು ಸಾಗಾಣಿಕೆ, ಜಲಮೂಲಗಳ ಸ್ಥಾನವಾದ ಕೆರೆ, ಕುಂಟೆಗಳನ್ನು ನಾಶ ಮಾಡಿ, ಪರಿಸರವನ್ನು ಸಂಪೂರ್ಣವಾಗಿ ಅಸಮತೋಲನ ಮಾಡಿದ್ದರಿಂದ ನಾವು ಈ ಪರಿಸ್ಥಿತಿಗೆ ಬಂದಿದ್ದೇವೆ. ಪರಿಣಾಮ, ಜಿಲ್ಲೆಯಿಂದ ಬೆಂಗಳೂರಿಗೆ ಹಣ್ಣು, ತರಕಾರಿ, ಹಾಲು, ರೇಷ್ಮೆ ಕಳುಹಿಸಿ ಅವರು ಕೊಡುವ ತ್ಯಾಜ್ಯ ನೀರಿಗಾಗಿ ಕಾಯುವ ಸ್ಥಿತಿಗೆ ಬಂದು ತಲುಪಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ 236 ಕಲ್ಯಾಣಿಗಳು, ಗೋಕುಂಟೆಗಳು, ಕೆರೆಗಳನ್ನು ಸ್ವಚ್ಛ ಮಾಡುವ ಕೆಲಸ ನಡೆಯುತ್ತಿದೆ. ಈಗಾಗಲೇ 100 ಕ್ಕೂ ಹೆಚ್ಚು ಕಲ್ಯಾಣಿಗಳನ್ನು ಸ್ವಚ್ಛಗೊಳಿಸಲಾಗಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ ಮಾತನಾಡಿ, ‘ ಜಲಾಮೃತ, ಕೋಟಿ ನಾಟಿ, ಸ್ವಚ್ಛಮೇವ ಜಯತೆ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಗ್ರಾಮ ಪಂಚಾಯಿಗಳಿಗೆ ಹೆಚ್ಚು ಜವಾಬ್ದಾರಿ ನೀಡಲಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಕೋಟಿ ನಾಟಿ ಕಾರ್ಯಕ್ರಮದ ಭಾಗವಾಗಿ 50 ಲಕ್ಷ ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಯುತ್ತಿದೆ. ಇದಕ್ಕೆ ಸಾರ್ವಜನಿಕರು ಕೈಜೋಡಿಸುವ ಅಗತ್ಯವಿದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶೇ 100ರಷ್ಟು ಫಲಿತಾಂಶ ಬಂದ ಜಿಲ್ಲೆಯ 43 ಶಾಲೆಗಳ ಮುಖ್ಯಶಿಕ್ಷಕರಿಗೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮೈಸೂರಿನ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಅವರು ನೀರಿನ ಸಂರಕ್ಷಣೆ, ಸ್ವಚ್ಛತೆ ಕುರಿತು ಉಪನ್ಯಾಸ ನೀಡಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಜಿಲ್ಲಾಧಿಕಾರಿ ಪಿ.ಅನಿರುದ್ಧ್ ಶ್ರವಣ್, ನಿವೃತ್ತ ಐ.ಎ.ಎಸ್ ಅಧಿಕಾರಿ ಕೆ.ಅಮರನಾರಾಯಣ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಸಿ.ರಾಜಾಕಾಂತ್, ಕೆ.ಎಂ.ಮುನೇಗೌಡ, ಮುಖ್ಯ ಲೆಕ್ಕಾಧಿಕಾರಿ ಸಂಗಪ್ಪ ಉಪಾಸೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾಗೇಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಸಂಜೀವಪ್ಪ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT