ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ: ಅಲಂಕೃತಗೊಳ್ಳುತ್ತಿವೆ ತಾಲ್ಲೂಕಿನ ಶಾಲೆಗಳು

ಶಾಲೆಗಳ ಅಭಿವೃದ್ಧಿಗೆ ಮಾದರಿ ಶಾಲಾ ಯೋಜನೆ; ಜಿಲ್ಲೆಯ 38 ಶಾಲೆಗಳು ಆಯ್ಕೆ
Last Updated 9 ಸೆಪ್ಟೆಂಬರ್ 2020, 16:45 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿಯಿಂದ ಮಾದರಿ ಶಾಲಾ ಯೋಜನೆಯನ್ನು ಜಾರಿಗೊಳಿಸಿದ್ದು, ಆರಂಭಿಕ ಹಂತವಾಗಿ ಮೊದಲು ಜಿಲ್ಲೆಯ 38 ಶಾಲೆಗಳನ್ನು ಅಭಿವೃದ್ಧಿಪಡಿಸಲು ಆಯ್ಕೆ ಮಾಡಿಕೊಳ್ಳಲಾಗಿದೆ.

ತಾಲ್ಲೂಕಿನ 7 ಶಾಲೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಎಲ್ಲ ಕಾಮಗಾರಿಗಳೂ ಬಹುತೇಕ ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿವೆ.

ಮಾದರಿ ಶಾಲೆಗಳಿಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಾಂಪೌಂಡ್ ನಿರ್ಮಾಣ, ಮಳೆನೀರು ಸಂಗ್ರಹ ಯೋಜನೆ, ಶೌಚಾಲಯ ನಿರ್ಮಾಣ, ಕಿಚನ್ ಗಾರ್ಡನ್, ಉದ್ಯಾನ ನಿರ್ಮಾಣ, ನೆನಸುಗುಂಡಿ ನಿರ್ಮಾಣ, ಮಕ್ಕಳಿಗೆ ಕೈತೊಳೆಯುವ ಸಿಂಕ್ ನಿರ್ಮಾಣ, ಆಟದ ಕೋರ್ಟ್‌, ವಾಕಿಂಗ್ ಪಾಥ್‌ನಂತಹ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ.

ಅಲ್ಲದೇ ದಾನಿಗಳು, ಹಿರಿಯ ವಿದ್ಯಾರ್ಥಿಗಳು, ಸ್ಥಳೀಯರಿಂದ ಕಂಪ್ಯೂಟರ್, ಡಿಜಿಟಲ್ ಬೋಧನೆಗೆ ಪೂರಕವಾದ ಪರಿಕರಗಳು, ಗ್ರೀನ್ ಮತ್ತು ವೈಟ್ ಬೋರ್ಡ್‌ಗಳ ಅಳವಡಿಕೆ, ಎಲ್ಲ ತರಗತಿ ಕೋಣೆಗಳಿಗೆ ಲೈಟ್ ಮತ್ತು ಫ್ಯಾನ್ ಅಳವಡಿಸಲಾಗುತ್ತಿದೆ. ಸುಸಜ್ಜಿತ ಗ್ರಂಥಾಲಯ, ಪ್ರಯೋಗಾಲಯ, ನಲಿಕಲಿ ಕೊಠಡಿಗಳನ್ನು ಆಕರ್ಷಕಗೊಳಿಸಲಾಗುತ್ತಿದೆ.

‘ಆಯ್ಕೆಯಾಗಿರುವ ಶಾಲೆಗಳ ಒಳ, ಹೊರಗೆ ಬಣ್ಣ ಬಳಿಯುವ ಕಾರ್ಯ ಪೂರ್ಣಗೊಂಡಿದೆ. ವರ್ಲಿ ಕಲೆಯ ಮೂಲಕ ಭೌತಿಕ ಪರಿಸರವನ್ನು ಅಂದಗೊಳಿಸಲಾಗಿದೆ’ ಎನ್ನುವರು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್.

ಮಾದರಿ ಶಾಲಾ ಯೋಜನೆಯಡಿ ಕಾಮಗಾರಿಗಳನ್ನು ಆಗಿಂದಾಗ್ಗೆ ಮೇಲ್ವಿಚಾರಣೆ ನಡೆಸಲು ಶಿಕ್ಷಣ ಇಲಾಖೆಯು ಪ್ರತಿ ಶಾಲೆಗೆ ಜಿಲ್ಲಾ ಮತ್ತು ತಾಲ್ಲೂಕುಮಟ್ಟದ ಅಧಿಕಾರಿಗಳನ್ನು ನೋಡೆಲ್ ಅಧಿಕಾರಿಗಳನ್ನಾಗಿ ನೇಮಿಸಿದೆ. ಅಲ್ಲದೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಖುದ್ದು ಭೇಟಿ ನೀಡಿ ಪರಿಶೀಲಿಸಿ ಪಿಡಿಒಗಳು, ತಾಲ್ಲೂಕು ಪಂಚಾಯಿತಿ ಇಒಗಳ ಮೂಲಕ ಕಾಮಗಾರಿಗಳಿಗೆ ಚುರುಕು ಮುಟ್ಟಿಸಿದ್ದಾರೆ.

ಉದ್ಯಾನ, ಪ್ಲೇ ಏರಿಯಾ: ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಹೊಂದಿಕೊಂಡಿರುವ ತಾಲ್ಲೂಕಿನ ಗಡಿಯ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಿನಿ ಉದ್ಯಾನ ನಿರ್ಮಾಣವಾಗುತ್ತಿದೆ. ಅಲ್ಲದೇ ಅದರ ಪಕ್ಕದಲ್ಲಿಯೇ ಮಕ್ಕಳಿಗಾಗಿ ಪ್ಲೇ ಏರಿಯಾ ಮಾಡಿ ಆಟದ ಪರಿಕರಗಳನ್ನು ಅಳವಡಿಸಲು ಸಿಇಒ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT