ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟಕ್ಕೆ ಬಂದ ತಾಟಿ ಬೆಲ್ಲ; ಒಂದಿಷ್ಟು ಶುಠಿ ಒಗರು, ಖಾರ, ಸಿಹಿ ಪದಾರ್ಥ

Last Updated 5 ಫೆಬ್ರುವರಿ 2021, 2:51 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಶಿಡ್ಲಘಟ್ಟದಿಂದ ಚಿಕ್ಕಬಳ್ಳಾಪುರಕ್ಕೆ ಹೋಗುವ ರಸ್ತೆಯ ಬದಿಯಲ್ಲಿ ದೂರದಿಂದ ನೋಡಿದರೆ ತೆಂಗಿನ ಚಿಪ್ಪುಗಳನ್ನು ಉದ್ದಕ್ಕೆ ಪೇರಿಸಿಟ್ಟಂತೆ ಕಪ್ಪಗೆ ಕಾಣುವ ವಸ್ತು ಮಾರಾಟಕ್ಕಿರಿಸಿಕೊಂಡಿದ್ದಾರೆ. ಅದು ತಿನ್ನುವ ಪದಾರ್ಥ. ಸ್ವಲ್ಪ ಚೂರನ್ನು ಮುರಿದು ಬಾಯಿಗೆ ಹಾಕಿಕೊಂಡರೆ ಒಂದಿಷ್ಟು ಶುಠಿಯ ಒಗರು, ಖಾರ ಮತ್ತು ಸಿಹಿ ಪದಾರ್ಥ ಬಾಯಲ್ಲಿ ಕರಗಿ ನಾಲಿಗೆ ಚುರುಕಾಗುತ್ತದೆ. ಅರೆ ಬೆಲ್ಲದಂತೆಯೆ ಇದೆಯಲ್ಲ! ಎಂದು ಕೇಳಿದರೆ, ತೆಲುಗು ಮತ್ತು ತಮಿಳಿನಲ್ಲಿ ಮಾತನಾಡುವ ಮಧುರೈನ ಕಾಶೀಪಾಂಡ್ಯನ್, ಇದು ‘ತಾಟಿಬೆಲ್ಲ’ ಎಂದು ಹೇಳುತ್ತಾರೆ.

‘ಗುಣಮು ಅಲ್ಲಮು ಮರಿ ಬೆಲ್ಲನಿದಿ, ಪೇರು ವೈದ್ಯಗಾನಿದಿ’ ಎಂಬುದು ಗಾದೆ ಮಾತು. ಇದರ ಅರ್ಥ, ‘ಗುಣ ಶುಂಠಿ ಮತ್ತು ಬೆಲ್ಲದ್ದಾದರೆ, ಹೆಸರು ಮಾತ್ರ ವೈದ್ಯನದು’ ಎಂದು. ಈ ರೀತಿಯ ವೈದ್ಯಕೀಯ ಗುಣ ಹೊಂದಿರುವ ಬೆಲ್ಲಗಳ ಸಾಲಿಗೆ ಸೇರುವುದು ತಾಟಿ ಬೆಲ್ಲ. ತಾಳೆಗರಿಯಲ್ಲಿ ಮಾಡಿರುವ ಪುಟ್ಟಪುಟ್ಟ ಬುಟ್ಟಿಗಳನ್ನು ಇಟ್ಟುಕೊಂಡು ಇವರು ಮಾರಾಟ ಮಾಡುತ್ತಿದ್ದಾರೆ.

ತಾಳೆ ಮರದ ಹಾಲಿನಿಂದ ತಯಾರಿಸಿದ ಬೆಲ್ಲವೇ ತಾಟಿ ಬೆಲ್ಲ. ತಾಳೆ ಮರದ ಹೊಂಬಾಳೆಯಿಂದ ಕಳ್ಳನ್ನು ತೆಗೆದು ಚೆನ್ನಾಗಿ ಕುದಿಸಿ ಹದವಾಗಿ ಬೆಲ್ಲವನ್ನು ತಯಾರಿಸುತ್ತಾರೆ. ತಾಳೆ ಜಾತಿಗೆ ಸೇರಿರುವ ಈ ತಾಟಿ ಮರ ತಮಿಳುನಾಡು ಹಾಗೂ ಕರಾವಳಿ ಭಾಗದಲ್ಲಿ ಹೆಚ್ಚು ಕಂಡುಬರುತ್ತವೆ. ಈ ಬೆಲ್ಲವನ್ನು ತಯಾರಿಸುವ ಕಸುಬು ಆಂಧ್ರ ಹಾಗೂ ತಮಿಳುನಾಡಿನ ಕೆಲ ಗ್ರಾಮೀಣ ಭಾಗದ ಜನರಿಗೆ ಜೀವನೋಪಾಯವಾಗಿದೆ. ಹಿಂದೆ ತಮಿಳು
ನಾಡಿನ ಮಧುರೈ, ಕೃಷ್ಣಗಿರಿ, ಈರೋಡು ಪ್ರದೇಶಗಳಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಗ್ರಾಮಗಳಿಗೆ ತಂದು ಸಂಚಾರ ಮಾರಾಟ ಮಾಡುತ್ತಿದ್ದರು. ಈ ಅಲೆಮಾರಿತನ ಕಡಿಮೆಯಾದಂತೆ ಇದೀಗ ನಗರ ಪಟ್ಟಣಗಳ ಹೊರವಲಯದ ಮುಖ್ಯ ರಸ್ತೆಗಳ ಬದಿ ಅಲ್ಲಲ್ಲಿ ಇಟ್ಟು ಮಾರಾಟ ಮಾಡುತ್ತಿದ್ದಾರೆ.

ದುಂಡು ಆಕಾರದ ಅಚ್ಚು ಮತ್ತು ತಂಬಿಟ್ಟು ಆಕಾರದ ಸಣ್ಣಸಣ್ಣದ ಅಚ್ಚುಗಳಲ್ಲಿ ತಾಟಿ ಬೆಲ್ಲವನ್ನು ಮಾರುತ್ತಾರೆ. ‘ಈ ತಾಟಿ ಬೆಲ್ಲದ ಜತೆಗೆ ಸಣ್ಣ ತೂಕದ ಬಟ್ಟಿನಂತೆ ಕಾಣುವ ಶುಂಠಿಬೆಲ್ಲ ಬಾಯಿಗೆ ಖಾರ ಖಾರ ಅನಿಸಿದರೂ ಆರೋಗ್ಯಕ್ಕೆ ಒಳ್ಳೆಯದು’ ಎಂದು ಮಾರಾಟಗಾರ ಮಧುರೈನ ಕಾಶೀಪಾಂಡ್ಯನ್ ಹೇಳಿದರು. ಹೆಸರೇ ಹೇಳುವಂತೆ ಈ ಬೆಲ್ಲಕ್ಕೆ ಶುಂಠಿ, ಲವಂಗ, ತುಳಸಿ, ಪುದೀನ ಬೆರೆಸಿ ತಯಾರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಮಧುಮೇಹಿಗಳು ಸಹ ಇದನ್ನು ಬಳಸಬಹುದಾಗಿದೆ. ಒಂದು ಕಿಲೋಗೆ ₹220ರಿಂದ 280.

ಈ ಬೆಲ್ಲದ ಸೇವನೆಯಿಂದ ವಾತ- ಪಿತ್ತ ಹತೋಟಿಗೆ ಬರುತ್ತದೆ, ಬಾಣಂತಿಯರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅಲ್ಲದೆ ಎದೆ ಹಾಲು ಹೆಚ್ಚಾಗುತ್ತದೆ. ಕ್ಷಯ, ಉಬ್ಬಸ ಮತ್ತು ಚರ್ಮ ರೋಗಗಳಿಗೂ ಔಷಧಿಯಾಗಿ ಇದನ್ನು ಬಳಸಲಾಗುತ್ತದೆ. ಇದರಲ್ಲಿ ಮಾಡುವ ಕಾಫಿ ಎಂತಹ ನೆಗಡಿಯನ್ನು ವಾಸಿಮಾಡಬಲ್ಲದು.

ಕೊರೊನಾ ಸಂಕಷ್ಟ: ಕೊರೊನಾ ಇವರ ಕಸುಬಿನ ಮೇಲೂ ಪರಿಣಾಮ ಬೀರಿದೆ. ಮಾಮೂಲಿ ಬೆಲ್ಲಕ್ಕಿಂತ ತಾಟಿ ಬೆಲ್ಲದ ಸಿಹಿ ಸ್ವಲ್ಪ ಕಡಿಮೆ. ತಮಿಳುನಾಡಿನ ಮಾರ್ಗಂಪಟ್ಟಿ ಕಡೆ ಈಗಲೂ ತಾಟಿ ಬೆಲ್ಲ ಶುದ್ಧ ರೂಪದಲ್ಲಿ ಸಿಗುತ್ತದೆ. ಆದರೆ ಬೆಲೆ ಮಾತ್ರ ಹೆಚ್ಚು. ಅದು ಇಲ್ಲಿಗೆ ಬಂದರೆ ಇನ್ನಷ್ಟು ಬೆಲೆ ಹೆಚ್ಚಿಸಬೇಕಾಗುತ್ತದೆ. ಅದಕ್ಕಾಗಿ ಇಲ್ಲಿ ತರುವವರೆಲ್ಲ ಕಡಿಮೆ ದರ್ಜೆಯ ಕಡಿಮೆ ಬೆಲೆಯ ತಾಟಿ ಬೆಲ್ಲವನ್ನೇ ತಂದು ಮಾರಾಟ ಮಾಡುವುದು ಅನಿವಾರ್ಯ. ನೀರು ಸೋಕದಿದ್ದರೆ ಸುಮಾರು ಒಂದು ವರ್ಷದವರೆಗೂ ಈ ಬೆಲ್ಲ ಉಪಯೊಗಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT