ಶನಿವಾರ, ಮೇ 28, 2022
30 °C
ಶಾಲಾ ಶಿಕ್ಷಕರ ಸಂಘದ ಗುಡಿಬಂಡೆ ತಾಲ್ಲೂಕು ಘಟಕದಿಂದ ಬಿಇಒಗೆ ಮನವಿ

ಹಳೆ ಪಿಂಚಣಿಗೆ ಶಿಕ್ಷಕರ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಡಿಬಂಡೆ: ಸರ್ಕಾರ ಜಾರಿಗೆ ತಂದಿರುವ ನೂತನ ಪಿಂಚಣಿ ವ್ಯವಸ್ಥೆಯಿಂದ ಶಿಕ್ಷಕರಿಗೆ ಅನ್ಯಾಯವಾಗಲಿದ್ದು, ಅದನ್ನು ಕೈಬಿಟ್ಟು ಹಳೆ ಪಿಂಚಣಿ ಯೋಜನೆಯನ್ನೇ ಜಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಬಾಲಾಜಿ ಮನವಿ ಮಾಡಿದ್ದಾರೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲ್ಲೂಕು ಘಟಕದ ವತಿಯಿಂದ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಬಿಇಒ ಮೂಲಕ ಮನವಿ ಪತ್ರವನ್ನು ಸಲ್ಲಿಸಿ ಅವರು ಮಾತನಾಡಿದರು.

‘ಪ್ರಾಥಮಿಕ ಶಾಲಾ ಶಿಕ್ಷಕರು ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಅದರಲ್ಲೂ ಕೊರೊನಾ ಸಂಕಷ್ಟ ಪರಿಸ್ಥಿತಿಯಲ್ಲೂ
ವಿದ್ಯಾಗಮ ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದಾರೆ. ಆದರೆ ಪ್ರಾಥಮಿಕ ಶಾಲಾ ಶಿಕ್ಷಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳ ಪರಿಹರಿಸುವಂತೆ ಈ ಮನವಿ ಪತ್ರವನ್ನು ನೀಡುತ್ತಿದ್ದು, ಆದಷ್ಟು ಶೀಘ್ರವಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಮನವಿ ಮಾಡಿದರು.

ಸಂಘದ ಪ್ರಧಾನ ಕಾರ್ಯದರ್ಶಿ ವಿ.ಶ್ರೀರಾಮಪ್ಪ ಮಾತನಾಡಿ, ‘ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ತೆರವುಗೊಳಿಸಿ, ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ಕೊಡಿಸಬೇಕಿದೆ. ಪ್ರಾಥಮಿಕ ಶಾಲಾ ಶಿಕ್ಷಕರು ತಮಗೆ ವಹಿಸುವ ಎಲ್ಲಾ ಕೆಲಸಗಳನ್ನು ಚಾಚು ತಪ್ಪದೇ ನಿರ್ವಹಿಸುತ್ತಿದ್ದಾರೆ. ಖಾಸಗಿ ಶಾಲೆಗಳಿಗೆ ಪೈಪೊಟಿ ನೀಡುವ ಸಲುವಾಗಿ ಈಗಾಗಲೇ ಎಲ್ಲಾ ಶಿಕ್ಷಕರು ಕೆಲಸ ಮಾಡುತ್ತಿದ್ದು, ಅವರಿಗೆ ಮತಷ್ಟು ಶಕ್ತಿ ತುಂಬಲು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಮನವಿ ಮಾಡಿದರು.

ಪ್ರಮುಖ ಬೇಡಿಕೆಗಳು: ಶೇ 100ರಷ್ಟು ದಾಖಲಾತಿ ಇರುವ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಪದವೀಧರೇತರ ಮುಖ್ಯೋಪಾಧ್ಯಯರ ಹುದ್ದೆಗಳೆಂದು ಪರಿಗಣಿಸಿ ಆದೇಶ ನೀಡುವುದು. ಸಿ.ಆರ್.ಪಿ/ಬಿ.ಆರ್.ಪಿ ಗಳ ಅವಧಿಯನ್ನು ಈ ಮೊದಲಿನಂತೆ 3 ವರ್ಷಗಳಿಗೆ ಸೀಮಿತಗೊಳಿಸಬೇಕು. ನಂತರ ಅವರು ಇಚ್ಛಿಸುವ ಶಾಲೆಗಳಿಗೆ ಹೋಗಲು ಅವಕಾಶ ಮಾಡಿಕೊಡುವುದು. ಪ್ರತಿ ವರ್ಷ ಶಾಲೆಗಳಿಗೆ ನಿಯಮಿತವಾಗಿ 2 ಕಂತುಗಳಲ್ಲಿ ಶಾಲಾ ಅನುದಾನವನ್ನು ಬಿಡುಗಡೆ ಮಾಡುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಿಇಒ ವೆಂಕಟೇಶಪ್ಪ ರವರಿಗೆ ಮನವಿ ಪತ್ರ ಸಲ್ಲಿಸಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಕೃಷ್ಣಪ್ಪ, ಪದಾಧಿಕಾರಿಗಳಾದ ಶ್ರೀರಾಮರೆಡ್ಡಿ, ಸುಮಿತ್ರ, ಶ್ವೇತ, ಆದಿನಾರಾಯಣ, ಜಿ.ಎನ್.ಶ್ರೀನಿವಾಸ್, ಪುಷ್ಪಲತಾ, ಉಮಾಶಂಕರ್, ಜಯಪ್ರಕಾಶ್, ಅಶ್ವತ್ಥಪ್ಪ, ವೆಂಕಟೇಶಪ್ಪ, ಆರ್.ರಾಜಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು