ಬಡವರು, ಮಧ್ಯಮ ವರ್ಗದ ಜನರ ಬದುಕಿಗೆ ಬರೆ: ಟಿ.ಬಿ.ಜಯಚಂದ್ರ ವಾಗ್ದಾಳಿ

ಚಿಕ್ಕಬಳ್ಳಾಪುರ: ಪೆಟ್ರೋಲ್, ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದಾದ್ಯಂತ ಬುಧವಾರ ನಡೆಸಿದ ಸೈಕಲ್ ಜಾಥಾ ಹಾಗೂ ಪ್ರತಿಭಟನೆಗೆ ಜಿಲ್ಲೆಯಲ್ಲಿಯೂ ಉತ್ತಮ ಬೆಂಬಲ ವ್ಯಕ್ತವಾಯಿತು.
ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದ ಬಿಬಿ ರಸ್ತೆಯಲ್ಲಿ ಪಕ್ಷದ ಕಾರ್ಯಕರ್ತರು ಸೈಕಲ್ ಜಾಥಾ ನಡೆಸಿದರು. ಶಿಡ್ಲಘಟ್ಟ ವೃತ್ತದಲ್ಲಿ ಸಮಾವೇಶಗೊಂಡರು.
ಈ ವೇಳೆ ಮಾತನಾಡಿದ ಪಕ್ಷದ ಜಿಲ್ಲಾ ಉಸ್ತುವಾರಿ ಟಿ.ಬಿ.ಜಯಚಂದ್ರ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಜನರ ರಕ್ಷಣೆ ಮಾಡುವ ಯೋಗ್ಯತೆ ಇಲ್ಲ ಎಂದು ಟೀಕಿಸಿದರು.
ಡೀಸೆಲ್, ಪೆಟ್ರೋಲ್ ಬೆಲೆ ಲೀಟರ್‌ಗೆ ₹ 100 ದಾಟಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದ ವೇಳೆ ಅಡುಗೆ ಅನಿಲ ಬೆಲೆ ₹ 400 ಇತ್ತು. ಈಗ ₹ 900 ದಾಟಿದೆ. ಎಲ್ಲ ಬೆಲೆಗಳು ನಾಗಾಲೋಟದಲ್ಲಿ ಹೆಚ್ಚುತ್ತಿವೆ. ಬಡವರು ಹಾಗೂ ಮಧ್ಯಮ ವರ್ಗದ ಜನರ ಬದುಕು ಕಷ್ಟಕ್ಕೆ ಸಿಲುಕಿದೆ. ಇದೇ ಮೋದಿ ಅವರ ಸಾಧನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇವರು ಅಧಿಕಾರಕ್ಕೆ ಬಂದ 7 ವರ್ಷಗಳ ಸಾಧನೆ ಎಂದರೆ ಆದಾನಿ ಮತ್ತು ಅಂಬಾನಿ ಮಾತ್ರ ಶ್ರೀಮಂತರಾದುದು. ನರೇಂದ್ರ ಮೋದಿ ಮತ್ತು ಅಮಿತ್ ಶಾ ಸರ್ಕಾರ ನಡೆಸುತ್ತಿರುವುದೇ ಈ ಇಬ್ಬರಿಗಾಗಿ. ಮೋದಿ ಆಡಳಿತ ಶ್ರೀಮಂತರ ಪರವಾಗಿದೆ. ಎಪಿಎಂಸಿ, ಕೃಷಿ ಕಾಯ್ದೆಗಳನ್ನು ದುರ್ಬಲಗೊಳಿಸಿ ಬಡವರು, ರೈತರ ವಿರುದ್ಧದ ಕಾನೂನುಗಳನ್ನು ಜಾರಿಗೊಳಿಸಲಾಗಿದೆ. ದೇಶದವನ್ನು ಮುನ್ನಡೆಸುವ ಸಾಮರ್ಥ್ಯ ಇವರಿಗೆ ಇಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ತೊಲಗಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ ಮಾತನಾಡಿ, ಕೊರೊನಾದ ಈ ಸಂಕಷ್ಟದ ಸಂದರ್ಭದಲ್ಲಿ ಇಂಧನ ಬೆಲೆ ಹೆಚ್ಚಳ ಮಾಡಲಾಗಿದೆ. ರಾಜ್ಯ ಸರ್ಕಾರದ ಸಚಿವರ ನಡುವೆ ಸಮನ್ವಯ ಇಲ್ಲ. ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.
ಟೊಮೆಟೊ, ದ್ರಾಕ್ಷಿ, ಮುಸುಕಿನ ಜೋಳಕ್ಕೆ ಬೆಂಬಲ ಬೆಲೆ ಇಲ್ಲ. ರೈತರು ತತ್ತರಿಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಕಿತ್ತೊಗೆಯುವವರೆಗೂ ಹೋರಾಟ ಮುಂದುವರಿಸುತ್ತೇವೆ. ಸರ್ಕಾರಕ್ಕೆ ಬುದ್ದಿಕಲಿಸಬೇಕು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಈ ಹೋರಾಟ ನಡೆಸುತ್ತಿಲ್ಲ. ಜನರ ಭಾವನೆಗಳಿಗೆ ಸ್ಪಂದಿಸುವ ದೃಷ್ಟಿಯಿಂದ ಹೋರಾಟ ನಡೆಸುತ್ತಿದ್ದೇವೆ ಎಂದರು.
ಮಾಜಿ ಶಾಸಕ ಮುನಿಯಪ್ಪ, ‘ಡೀಸೆಲ್ ಬೆಲೆ ಹೆಚ್ಚಳದಿಂದ ಕೃಷಿ ಚಟುವಟಿಕೆಗಳ ವೆಚ್ಚ ಅಧಿಕವಾಗಿದೆ. ಟ್ರಾಕ್ಟರ್‌ನಲ್ಲಿ ಒಂದು ಎಕರೆ ಉಳಿಮೆ ಮಾಡಿಸಲು ₹ 4 ಸಾವಿರ ವೆಚ್ಚವಾಗುತ್ತಿದೆ. ಈ ವರ್ಷದ ಆರಂಭದಿಂದ 50 ಬಾರಿ ಇಂಧನ ಬೆಲೆ ಹೆಚ್ಚಳವಾಗಿದೆ ಎಂದು ಹೇಳಿದರು.
ಮುಖಂಡ ಯಲುವಳ್ಳಿ ರಮೇಶ್, ‘ಮೋದಿ ಸರ್ಕಾರ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಭರವಸೆ ನೀಡಿತು. ಆದರೆ ಸಾಧ್ಯವಾಗಲಿಲ್ಲ. ಕೊರೊನಾ ಸಾವುಗಳನ್ನು ತಡೆಯಲು ಸಹ ಪ್ರಯತ್ನಿಸಲಿಲ್ಲ. ಈ ಸರ್ಕಾರ ಜನರ ಪರವಾಗಿಲ್ಲ. ಚುನಾವಣೆ ಹತ್ತಿರ ಬರುತ್ತದೆ ಎಂದಾಗ ಸೈನಿಕರನ್ನು ತೋರಿಸಿ ನಾಟಕ ಶುರು ಮಾಡುವರು ಎಂದರು.
ಉಸ್ತುವಾರಿ ಕಾರ್ಯದರ್ಶಿ ಉದಯಶಂಕರ್, ವಿನಯ್ ಶ್ಯಾಮ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಕೋನಪಲ್ಲಿ ಕೋದಂಡ, ಕೃಷ್ಣಪ್ಪ ರಾಮಕೃಷ್ಣಪ್ಪ, ಅಬ್ದುಲ್ ಖಾದರ್, ರಫೀಕ್, ಕಣಿತಹಳ್ಳಿ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೈರಾಮ್, ಸುರೇಶ್, ಕವಿತಾ, ಸುಮಿತ್ರಮ್, ಮುದಾಸಿರ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.