ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯವರ್ತಿಗಳಿಗೆ ಕಡಿವಾಣವೇ ಮೂಲ ಗುರಿ

ಅಂಬಾಜಿದುರ್ಗ: ರೈತ ಉತ್ಪಾದಕರ ಕಂಪನಿಯ ವಾರ್ಷಿಕ ಮಹಾಸಭೆ
Last Updated 6 ಏಪ್ರಿಲ್ 2021, 3:55 IST
ಅಕ್ಷರ ಗಾತ್ರ

ಚಿಂತಾಮಣಿ: ರೈತರು ಬೆಳೆದ ಉತ್ಪನ್ನಗಳನ್ನು ಸೂಕ್ತ ರೀತಿಯಲ್ಲಿ ಸಂಸ್ಕರಿಸಿ, ಮೌಲ್ಯವರ್ಧನೆ ಮಾಡಿಕೊಂಡು ಮಾರುಕಟ್ಟೆ ಒದಗಿಸುವುದು ಹಾಗೂ ದಳ್ಳಾಳಿಗಳನ್ನು ದೂರವಿಡುವುದೇ ರೈತ ಉತ್ಪಾದಕರ ಕಂಪನಿಯ ಉದ್ದೇಶವಾಗಿದೆ ಎಂದು ಕೃಷಿ ಇಲಾಖೆಯ ಉಪ ನಿರ್ದೇಶಕಿ ಡಾ.ಅನುರೂಪಾತಿಳಿಸಿದರು.

ನಗರ ಹೊರವಲಯದ ತಿಮ್ಮಸಂದ್ರದ ಬಿ.ವಿ.ಎಂ ಕನ್ವೆನ್ಷನ್‌ನಲ್ಲಿ ಈಚೆಗೆ ಆಯೋಜಿಸಿದ್ದ ತಾಲ್ಲೂಕಿನ ಅಂಬಾಜಿದುರ್ಗ ಕೃಷಿ ರೈತ ಉತ್ಪಾದಕರ ಕಂಪನಿಯ 2020-21ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.

ಚಿಂತಾಮಣಿ ತಾಲ್ಲೂಕಿನಲ್ಲಿ 2, ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 2, ಶಿಡ್ಲಘಟ್ಟ ತಾಲ್ಲೂಕಿನಲ್ಲಿ 1 ಸೇರಿ ಜಿಲ್ಲೆಯಲ್ಲಿ 5 ರೈತ ಉತ್ಪಾದಕರ ಕಂಪನಿಗಳು ರಚನೆಯಾಗಿವೆ. ಅಂಬಾಜಿದುರ್ಗ ರೈತ ಉತ್ಪಾದಕ ಕಂಪನಿಯು 1,000 ಷೇರುದಾರರನ್ನು ಹೊಂದಿದ್ದು ₹ 12.50 ಲಕ್ಷ ಷೇರು ಮೊತ್ತ ಸಂಗ್ರಹಿಸಿ ಜಿಲ್ಲೆ ಮತ್ತು ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ. ಕೃಷಿ ಇಲಾಖೆಯಿಂದ ಸಿಗುವ ಸವಲತ್ತುಗಳನ್ನು ರೈತ ಉತ್ಪಾದಕ ಕಂಪನಿಗೆ ನೀಡಲು ಎಲ್ಲ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ವ್ಯವಸ್ಥಾಪಕ ನಿರ್ದೇಶಕ ಎಲ್.ವೈ. ನರಸಿಂಹರೆಡ್ಡಿ ಮಾತನಾಡಿ ಪ್ರಾಮಾಣಿಕತೆ, ಪಾರದರ್ಶಕ ಹಾಗೂ ಪರಿಶ್ರಮದಿಂದ ಕಂಪನಿಯನ್ನು ಬೆಳೆಸಲು ಶ್ರಮಿಸಲಾಗುವುದು. ಕೇಂದ್ರದಿಂದ ಸಿಗುವ ₹ 15 ಲಕ್ಷ ಅನುದಾನ ಪಡೆಯಲು ಇನ್ನೂ ಹೆಚ್ಚು ಷೇರುಗಳನ್ನು ಸಂಗ್ರಹಿಸಬೇಕಾಗಿದೆ. ಒಂದು ಸಾವಿರ ಷೇರುಗಳ ಸಂಗ್ರಹಣೆಗಾಗಿ ಸಭೆಯ ಅನುಮತಿ ಕೋರಿದರು. ಷೇರುಗಳ ಸಂಖ್ಯೆಯನ್ನು 2 ಸಾವಿರಕ್ಕೆ ಹೆಚ್ಚಿಸಲು ಸರ್ವಾನುಮತದಿಂದ ಒಪ್ಪಿಗೆ ನೀಡಲಾಯಿತು.

ಕಂಪನಿಯ ಕಾರ್ಯ ನಿರ್ವಹಣಾಧಿಕಾರಿ ರಾಧಾಕೃಷ್ಣ ಮಾತನಾಡಿ, 2020-21ನೇ ಸಾಲಿನ ಆಯವ್ಯಯ ಮಂಡಿಸಿದರು. ಮುಂದೆ ಕೈಗೊಳ್ಳಲಿರುವ ವ್ಯಾಪಾರ ಯೋಜನೆಯಲ್ಲಿ ಕೃಷಿ ಪರಿಕರಗಳ ಮಾರಾಟ, ಹೈನುಗಾರಿಕೆ ಮತ್ತು ಪಶು ಆಹಾರ ಮಾರಾಟ, ಯಂತ್ರಧಾರೆ ಕಾರ್ಯಕ್ರದಡಿ ಕೃಷಿ ಯಂತ್ರಗಳ ಬಾಡಿಗೆ ಯೋಜನೆ, ತೃಣಧಾನ್ಯಗಳ ಸಂಸ್ಕರಣಾ ಘಟಕ ಸ್ಥಾಪಿಸುವ ಕುರಿತು ಷೇರುದಾರರಿಗೆ ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿ ಅಮರನಾರೇಯಣ, ರೈತ ಉತ್ಪಾದಕ ಕಂಪನಿಗಳನ್ನು ಸದೃಢವಾಗಿ ಬೆಳೆಸಲು ಷೇರುದಾರರು, ಮಂಡಳಿಯ ನಿರ್ದೇಶಕರು ಮತ್ತು ಪದಾಧಿಕಾರಿಗಳು ಪ್ರಾಮಾಣಿಕತೆ, ಪಾರದರ್ಶಕ ಹಾಗೂ ಪರಸ್ಪರ ಸಹಕಾರದಿಂದ ಕಾರ್ಯ ನಿರ್ವಹಿಸಬೇಕು. ಕಂಪನಿಯಲ್ಲಿ ಯಾವುದೇ ರಾಜಕೀಯವಿಲ್ಲದೆ ಪಕ್ಷಾತೀತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಸಹಾಯಕ ಕೃಷಿ ನಿರ್ದೇಶಕ ಡಾ.ಶ್ರೀನಿವಾಸ್, ಎನ್.ಆರ್.ಡಿ.ಎಸ್ ಸಂಸ್ಥೆಯ ಮನೋಹರ್, ಶ್ರೀರಾಮ ರೆಡ್ಡಿ, ನಿರ್ದೇಶಕರಾದ ಪಾಲು ನಾರಾಯಣಸ್ವಾಮಿ, ಮಂಜುನಾಥರೆಡ್ಡಿ, ದೇವರಾಜು, ನಾಗರಾಜು, ಗೋಪಾಲರೆಡ್ಡಿ, ಮೀನಾ, ವೆಂಕಟಾಚಲಪತಿ, ವೆಂಕಟಶಿವಪ್ಪ, ಲಕ್ಷ್ಮಣ್, ವಿ. ಮಂಜುನಾಥ, ನಂದೀಶ್, ಸೀನಪ್ಪ ಹಾಗೂ ಷೇರುದಾರರು ಮತ್ತು ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT