ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಗ್ರಿವಾಜ್ಞೆಗಳನ್ನು ಹಿಂದೆ ಪಡೆಯಲು ಆಗ್ರಹ

ಜಿಲ್ಲಾಡಳಿತ ಭವನದ ಎದುರು ರೈತಸಂಘದ ಪದಾಧಿಕಾರಿಗಳ ಪ್ರತಿಭಟನೆ
Last Updated 21 ಸೆಪ್ಟೆಂಬರ್ 2020, 16:05 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಭೂಸುಧಾರಣೆ, ಕೈಗಾರಿಕೆ, ಎಪಿಎಂಸಿ ಸೇರಿ ಹಲವು ಕಾಯ್ದೆಗಳನ್ನು ತಿದ್ದುಪಡಿಗೆ ಹೊರಡಿಸಿರುವ ಸುಗ್ರಿವಾಜ್ಞೆಗಳನ್ನು ಹಿಂದೆ ಪಡೆಯಬೇಕು ಎಂದು ಆಗ್ರಹಿಸಿ ರೈತಸಂಘದ ಪದಾಧಿಕಾರಿಗಳು ಸೋಮವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ರೈತಸಂಘದ ರಾಜ್ಯ ಘಟಕದ ಅಧ್ಯಕ್ಷ ಜಿಜಿಹಳ್ಳಿ ಬಿ.ನಾರಾಯಣಸ್ವಾಮಿ, ‘ರಾಜ್ಯ ಸರ್ಕಾರ ಜನಸಾಮಾನ್ಯರ ಹಿತ ಕಡೆಗಣಿಸಿ ರೈತರು, ಕಾರ್ಮಿಕರ ಹಿತ ಗಾಳಿಗೆ ತೂರಿ, ಕಾಯ್ದೆಗಳ ತಿದ್ದುಪಡಿ ಮೂಲಕ ಬಂಡವಾಳ ಶಾಹಿಗಳಿಗೆ ಅನುವು ಮಾಡಿಕೊಡಲು ಹೊರಟಿದೆ. ಕೂಡಲೇ ತಿದ್ದುಪಡಿಗಳನ್ನು ಕೈಬಿಡಬೇಕು’ ಎಂದು ಆಗ್ರಹಿಸಿದರು.

‘ಭೂಸುಧಾರಣಾ ಕಾಯ್ದೆಯ ತಿದ್ದುಪಡಿಯಿಂದ ಹಣದಾಸೆಗೆ ರೈತರು ಭೂಮಿ ಕಳೆದುಕೊಳ್ಳಲಿದ್ದಾರೆ. ಉಳ್ಳವರು, ಕಪ್ಪು ಹಣ ಹೊಂದಿದವರು ಯಥೇಚ್ಛವಾಗಿ ಭೂಮಿ ಖರೀದಿಸಿ ಬೇಲಿ ಹಾಕಿ, ರಿಯಲ್‌ ಎಸ್ಟೆಟ್‌ ಉದ್ಯಮದ ಮೂಲಕ ಹಣ ಮಾಡುವ ದಂಧೆ ಆರಂಭಿಸಲಿದ್ದಾರೆ. ಅನ್ನದಾತರಿಗೆ ಮಾರಕವಾದ ಈ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು’ ಎಂದು ಹೇಳಿದರು.

‘ಲಾಕ್‌ಡೌನ್‌ನಂತಹ ವಿಷಮ ಪರಿಸ್ಥಿತಿಯಲ್ಲಿ ಸರ್ಕಾರಗಳು ಕೃಷಿ ಕ್ಷೇತ್ರವನ್ನು ಕಳ್ಳರ ರೀತಿಯಲ್ಲಿ ಕಾರ್ಪೋರೆಟ್‌ ಕಂಪೆನಿಗಳಿಗೆ ಧಾರೆ ಎರೆದಿರುವುದು ಅತ್ಯಂತ ಅಮಾನವೀಯ ಕ್ರಮ. ಇದು ಕೃಷಿ ರಂಗಕ್ಕೆ ಕಂಟಕ. ಇದರಿಂದ ರೈತರು ಬೀದಿಗೆ ಬೀಳುವ ಸಂದರ್ಭ ಬಂದಿದೆ’ ಎಂದರು.

‘ಇಡೀ ಜನಜೀವನದ ಮೇಲೆ ಪರಿಣಾಮ ಬೀರುವಂತಹ ತಿದ್ದುಪಡಿಗಳನ್ನು ಶಾಸನಸಭೆ, ಸಂಸತ್ತಿನಲ್ಲಿ ಚರ್ಚಿಸದೆ ಸುಗ್ರಿವಾಜ್ಞೆ ಮೂಲಕ ಕಾಯ್ದೆ ಜಾರಿಗೆ ಮುಂದಾಗುತ್ತಿರುವುದು ಜನರನ್ನು ವಂಚಿಸುವ ಕೆಲಸವಾಗಿದೆ. ಬಡ ರೈತರನ್ನು ಭೂಮಿಯಿಂದ ಒಕ್ಕಲೆಬ್ಬಿಸಿ ದಿವಾಳಿ ಮಾಡುವುದು ಇದರ ಹಿಂದಿನ ಸಂಚು’ ಎಂದು ಆರೋಪಿಸಿದರು.

‘ಲಾಕ್‌ಡೌನ್‌ನಂತಹ ಸಂದರ್ಭದಲ್ಲಿ ಸರ್ವಾಧಿಕಾರಿ ಕ್ರಮದಿಂದ ಸುಗ್ರಿವಾಜ್ಞೆ ಮೂಲಕ ಹಲವು ಕಾಯ್ದೆಗಳಿಗೆ ತಿದ್ದುಪಡಿ ತರುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ಮತ್ತು ಜನವಿರೋಧಿ ನೀತಿಗಳನ್ನು ಖಂಡಿಸಬೇಕಿದೆ‘ ಎಂದು ಹೇಳಿದರು.

‘ರಾಜ್ಯ ಸರ್ಕಾರ ರೈತ ಸಮುದಾಯಕ್ಕೆ ಅನುಕೂಲವಾಗುವ ರೀತಿಯಲ್ಲಿ ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಖರೀದಿಗೆ ಇದ್ದ ನಿರ್ಬಂಧ ಸಡಿಲಿಸಲಿದೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿಯಿಂದ ಎಪಿಎಂಸಿ ಮುಚ್ಚಲಿವೆ. ವರ್ತಕರು, ನೌಕರರು, ಹಮಾಲರು ಮತ್ತು ಇತರೆ ಕಾರ್ಮಿಕರು ನಿರುದ್ಯೋಗಿಗಳಾಗಲಿದ್ದಾರೆ. ಜತೆಗೆ ರೈತರ ಶೋಷಣೆ ಹೆಚ್ಚಲಿದೆ’ ಎಂದು ಹೇಳಿದರು.

‘ರೈತರಲ್ಲದವರೂ ಭೂಮಿ ಖರೀದಿ ಮಾಡಲು ಅನುವು ಮಾಡುವ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ರೈತರ ಪಾಲಿನ ಮರಣ ಶಾಸನವಾಗಿದೆ. ಇದರಿಂದ ಕಾರ್ಪೋರೆಟ್‌ ಕಂಪೆನಿಗಳಿಗೆ, ಬಂಡವಾಳಶಾಹಿಗಳಿಗೆ ಅನುಕೂಲವಾದರೆ, ದೇಶದಲ್ಲಿ ಆಹಾರ ಸಮಸ್ಯೆ ಎದುರಾಗಲಿದೆ’ ಎಂದು ಹೇಳಿದರು.

ಜಿಲ್ಲಾ ಘಟಕದ ಅಧ್ಯಕ್ಷ ಹೆಣ್ಣೂರು ಬಸವರಾಜು, ಪದಾಧಿಕಾರಿಗಳಾದ ಸತ್ಯನಾರಾಯಣ, ಮಂಜುನಾಥ್, ಮುನಿರಾಜು, ಶ್ರೀನಿವಾಸಲು, ಮಂಜುನಾಥ್‌, ಎ.ಎನ್.ಅಶ್ವತ್ಥನಾರಾಯಣಗೌಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT