ಬುಧವಾರ, ಅಕ್ಟೋಬರ್ 28, 2020
18 °C

ಮಳೆ, ಮೋಡದ ಜುಗಲ್ ಬಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕಳೆದ ಎರಡು  ದಿನಗಳಿಂದ ಕಾಣಿಸಿಕೊಂಡ ಜಡಿಮಳೆ, ಮುಸುಕಿದ ಮೋಡದ ಜುಗಲ್ ಬಂದಿ ಮಳೆಗಾಲದ ನಡುವೆ ಚಳಿಗಾಲದ ನೆನಪು ತರಿಸುತ್ತಿದೆ. ಜಿಲ್ಲೆಯಲ್ಲಿ ಭಾನುವಾರ ದಿನವಿಡೀ, ಮುಸುಕು ಹಾಕಿದ ಮೋಡ ಆಗಾಗ ಇಬ್ಬನಿಯಂತಹ ಮಳೆ ಸಿಂಚನ ಮಾಡುತ್ತ, ನಾಗರಿಕರಲ್ಲಿ ನಡುಕ ಹುಟ್ಟಿಸಿತ್ತು.

ಮೋಡ, ಮಳೆಯ ಈ ಜುಗಲ್ಬಂದಿಯ ಪರಿಣಾಮ ತಂಗಾಳಿ ಚಳಿಯನ್ನು ಹೆಚ್ಚಿಸಿದೆ. ಬೆಳಿಗ್ಗೆಯಿಂದಲೇ ಕವಿದ ಮೋಡಗಳು ಸಂಜೆಯಾದರೂ ಕರಗಲೇ ಇಲ್ಲ. ಆಗಾಗ ಸುರಿಯುವ ಮಳೆ, ಸುಳಿ ಸುಳಿದು ಬರುವ ತಂಗಾಳಿ ಬೆಚ್ಚನೆಯ ಉಡುಗೆಗಳನ್ನು ಹೊರಗೆ ತೆಗೆಯುವಂತೆ ಮಾಡಿವೆ.

ದಿಢೀರ್‌ನೇ ಉಂಟಾದ ಈ ಹವಾಮಾನ ವೈಪರೀತ್ಯ ಹುಟ್ಟಿಸಿದ ಮೈ ಕೊರೆಯುವ ಚಳಿಯಿಂದ ರಕ್ಷಿಸಿಕೊಳ್ಳಲು ಜನರು ಬೆಚ್ಚನೆಯ ಉಡುಪುಗಳ ಮೊರೆ ಹೋಗಿದ್ದರು. ಮನೆಯಿಂದ ಹೊರಗಡೆ ಹೋಗುವವರೆಲ್ಲ ಸ್ವೆಟರ್‌, ಟೋಪಿ, ರೇನ್‌ಕೋಟ್‌ ಧರಿಸಿಕೊಂಡು ಹೋಗುತ್ತಿದ್ದ ದೃಶ್ಯ ಕಂಡುಬಂತು.

ಬೆಳಿಗ್ಗೆಯಿಂದಲೇ ಕವಿದ ಮೋಡಗಳು ಕರಗಿ ಬಿಸಿಲು ಹರಿಯಲೇ ಇಲ್ಲ. ಆಗಾಗ ಹನಿಯುತ್ತಿದ್ದ ಮಳೆಯ ಕಾರಣಕ್ಕೆ ವಾರಾಂತ್ಯದ ರಜೆಯನ್ನು ಬಹುತೇಕರು ಮನೆಯಲ್ಲೇ ಕಳೆದರು.

ಕೆಲ ದಿನಗಳ ಹಿಂದಷ್ಟೇ ಸೆಕೆಯ ಬಾಧೆಗೆ ಮನೆಯಲ್ಲಿ ಬೆವರು ಹರಿಸುತ್ತಿದ್ದ ಜನರು ಭಾನುವಾರ ಆಗಾಗ ಜೋರಾಗಿ ಬೀಸುತ್ತಿದ್ದ ತಣ್ಣನೆಯ ಗಾಳಿ ಮೈ ನಡುಕ ಉಂಟು ಮಾಡುತ್ತಿದ್ದ ಕಾರಣಕ್ಕೆ ಜನರು ದಿನವೀಡಿ ಮನೆ ಕಿಟಕಿ, ಬಾಗಿಲುಗಳನ್ನು ಮುಚ್ಚಿಯೇ ಇದ್ದರು. ಆಗಾಗ ಮಳೆಯೊಂದಿಗೆ ಕಾಣಿಸಿಕೊಳ್ಳುತ್ತಿದ್ದ ಮಂಜು ನಗರದ ಸುತ್ತಲಿನ ಬೆಟ್ಟ, ಗುಡ್ಡಗಳಲ್ಲಿ ಪ್ರಕೃತಿಯ ದೃಶ್ಯ ಕಾವ್ಯಗಳನ್ನು ಸೃಷ್ಟಿಸುತ್ತಿತ್ತು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು