ಶನಿವಾರ, ಜನವರಿ 23, 2021
19 °C

ಇಂದು ವಿದ್ಯಾಗಮ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಜ.1ರಿಂದ ಜಿಲ್ಲೆಯಾದ್ಯಂತ ವಿದ್ಯಾಗಮ ಕಾರ್ಯಕ್ರಮ ಮತ್ತು 10ನೇ ತರಗತಿ ಶಾಲೆಗಳ ಪುನಾರಂಭಕ್ಕೆ ಸರ್ಕಾರದ ಮಾರ್ಗಸೂಚಿಯಂತೆ ಶಿಕ್ಷಣ ಇಲಾಖೆಯ ಜತೆಗೆ ಜಿಲ್ಲಾಡಳಿತ ಹಾಗೂ ಜಿ.ಪಂ.ನಿಂದ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಶಾಲೆಗಳಿಗೆ ಬರಬಹುದು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ. ಚಿಕ್ಕನರಸಿಂಹಯ್ಯ ಹೇಳಿದರು.

ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶಾಲೆಗಳ ಪುನಾರಂಭ ಸಂಬಂಧ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಾದ್ಯಂತ ಒಟ್ಟು 1,797 ಪ್ರಾಥಮಿಕ ಹಾಗೂ 287 ಪ್ರೌಢಶಾಲೆ(ಸರ್ಕಾರಿ, ಅನುದಾನಿತ, ಅನುದಾನರಹಿತ ಮತ್ತು ವಸತಿ ಶಾಲೆಗಳು)ಗಳಲ್ಲಿ ಶೈಕ್ಷಣಿಕ ಕಾರ್ಯ ಚಟುವಟಿಕೆ ಆರಂಭಗೊಳ್ಳುತ್ತಿದೆ. ಈ ಸಂಬಂಧ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಈಗಾಗಲೇ ಶಾಲೆಗಳ ಮುಖ್ಯಸ್ಥರ ಮಾರ್ಗದರ್ಶನ ಸಭೆ ನಡೆಸಿ, ಕೈಗೊಳ್ಳಬೇಕಾದ ಅಂಶಗಳ ಬಗ್ಗೆ ತಿಳಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಶಾಲೆಗಳ ಆರಂಭಕ್ಕೂ ಮುನ್ನ ಗ್ರಾಮ ಪಂಚಾಯಿತಿ ಮತ್ತು ನಗರಸಭೆಯಿಂದ ಎಲ್ಲಾ ಶಾಲಾ ಕಟ್ಟಡ, ಶಾಲಾವರಣ, ತರಗತಿ ಕೊಠಡಿಗಳು, ಅಡುಗೆ ಕೋಣೆ ಮತ್ತು ಶೌಚಾಲಯಗಳ ಸ್ವಚ್ಛತೆ ಹಾಗೂ ಸ್ಯಾನಿಟೈಜ್‌ ಮಾಡಲಾಗಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರಿಂದ ಒಪ್ಪಿಗೆ ಪತ್ರವನ್ನು ಈಗಾಗಲೇ ಪಡೆಯಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಆರ್. ಲತಾ ಮಾತನಾಡಿ, ಶಾಲೆಗಳ ಆರಂಭ ಸಂಬಂಧ ಜಿಲ್ಲಾ ಮತ್ತು ತಾಲ್ಲೂಕುಮಟ್ಟದಲ್ಲಿ ಎಲ್ಲಾ ಮುಖ್ಯಶಿಕ್ಷಕರ ಸಭೆ ಆಯೋಜಿಸಿ ಮಾರ್ಗದರ್ಶನ ನೀಡಲಾಗಿದೆ. ಪೋಷಕರು ಮತ್ತು ಎಸ್‍ಡಿಎಂಸಿ ಸಮನ್ವಯ ಸಭೆ ನಡೆಸಲಾಗಿದೆ. ಜಿಲ್ಲೆಯ 6 ತಾಲ್ಲೂಕಿನ ಆರೋಗ್ಯಾಧಿಕಾರಿಗಳ ಸಹಯೋಗದೊಂದಿಗೆ ಕ್ಲಸ್ಟರ್‌ವಾರು ಎಲ್ಲಾ ಶಿಕ್ಷಕರಿಗೆ ಈಗಾಗಲೇ ಕೋವಿಡ್ ಪರೀಕ್ಷೆ ಮಾಡಲಾಗಿದೆ ಎಂದು ತಿಳಿಸಿದರು.

ಶಿಕ್ಷಕರು ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಂಡು ಶಾಲೆ ಪ್ರಾರಂಭವಾಗುವ 72 ಗಂಟೆಗಳ ಮುಂಚೆ ನೆಗೆಟಿವ್ ವರದಿ ತೆಗೆದುಕೊಂಡು ಶಾಲಾ ಕರ್ತವ್ಯಕ್ಕೆ ಹಾಜರಾಗಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆರೋಗ್ಯದ ದೃಷ್ಟಿಯಿಂದ ವಿದ್ಯಾರ್ಥಿಗಳು ಮನೆಯಿಂದ ನೀರು ತರಲು ತಿಳಿಸಲಾಗಿದೆ. ಅದರ ಜತೆಗೆ ಶಾಲೆಯಲ್ಲಿ ಬಿಸಿನೀರನ್ನು ಒದಗಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಸಿಇಒ ಪಿ. ಶಿವಶಂಕರ್‍ ಮಾತನಾಡಿ, ಜ. 1ರಂದು ಮಕ್ಕಳನ್ನು ಸ್ವಾಗತಿಸಲು ಪ್ರತಿ ಶಾಲೆಯಲ್ಲಿ ಹಬ್ಬದ ವಾತಾವರಣ ನಿರ್ಮಿಸಲು ಶಿಕ್ಷಕರಿಗೆ ಸೂಚಿಸಲಾಗಿದೆ ಎಂದರು.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಜಿ. ನಾಗೇಶ್‍ ಮಾತನಾಡಿ, ಶಾಲಾ ಆವರಣದಲ್ಲಿ ಕೋವಿಡ್ ಎಸ್‍ಓಪಿ ಪ್ರಕಾರ ಮಾಸ್ಕ್, ಸ್ಯಾನಿಟೈಸರ್/ ಸೋಪಿನೊಂದಿಗೆ ಕೈ ತೊಳೆಯುವುದು, ಭೌತಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಪ್ರತಿ ವಿದ್ಯಾರ್ಥಿಯ ಆರೋಗ್ಯ ಗಮನಿಸಲು ಎಲ್ಲಾ ಶಿಕ್ಷಕರಿಗೆ ತಿಳಿಸಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು