ಶುಕ್ರವಾರ, ಜೂನ್ 18, 2021
28 °C

ಜೆಡಿಎಸ್‌ನಿಂದ ಆ.19 ರಂದು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ‘ಸುಗ್ರೀವಾಜ್ಞೆಯ ಮೂಲಕ ಭೂಸ್ವಾಧೀನ, ಕಾರ್ಮಿಕ, ಎಪಿಎಂಸಿ ಸೇರಿ ಹಲವು ಕಾಯ್ದೆಗಳನ್ನು ತಿದ್ದುಪಡಿ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ಜೆಡಿಎಸ್‌ ವತಿಯಿಂದ ಬುಧವಾರ (ಆ.19) ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಮುನೇಗೌಡ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರವು ರೈತರು, ಕಾರ್ಮಿಕರ ಹಿತ ಗಾಳಿಗೆ ತೂರಿ, ಕಾಯ್ದೆಗಳ ತಿದ್ದುಪಡಿ ಮೂಲಕ ಬಂಡವಾಳ ಶಾಹಿಗಳಿಗೆ ಅನುವು ಮಾಡಿಕೊಡಲು ಹೊರಟಿದೆ’ ಎಂದು ಆರೋಪಿಸಿದರು.

‘ಕೊರೊನಾದಂತಹ ಸಂಕಷ್ಟದ ಸಮಯದಲ್ಲೂ ಕೋಚಿಮುಲ್ ರೈತರಿಗೆ ನೀಡುತ್ತಿದ್ದ ಪ್ರತಿ ಲೀಟರ್ ಹಾಲಿನ ದರದಲ್ಲಿ ₹4 ಕಡಿತಗೊಳಿಸಿದೆ. ಇನ್ನೊಂದೆಡೆ ಪಶು ಆಹಾರ ದರ ಏರಿಕೆಯಾಗಿ ಹೈನುಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದು ತಿಳಿಸಿದರು.

ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಮಾತನಾಡಿ, ‘ರಾಜ್ಯದಲ್ಲಿ ಜನಾದೇಶ ಧಿಕ್ಕರಿಸಿ ವಾಮಮಾರ್ಗದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ಬಿಜೆಪಿಗರು ಕೊರೊನಾದಂತಹ ಸಂಕಷ್ಟದ ಸಮಯದಲ್ಲೂ ಹಣ ಲೂಟಿ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ರಾಜ್ಯಪಾಲರು ಕೂಡಲೇ ರಾಜ್ಯ ಸರ್ಕಾರ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು’ ಎಂದು ಹೇಳಿದರು.

‘ಕೊರೊನಾ ವೈರಸ್ ಸೋಂಕು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಸರ್ಕಾರದಲ್ಲಿ ಅನೇಕ ಸಚಿವರು ಕೋವಿಡ್‌ ಹೆಸರಿನಲ್ಲಿ ಖಜಾನೆ ಕೊಳ್ಳೆ ಹೊಡೆಯುವಲ್ಲಿ ನಿರತರಾಗಿದ್ದಾರೆ. ಕೋವಿಡ್ ನಿರ್ವಹಿಸಲು ಮಾಡಿರುವ ಖರ್ಚಿನ ಬಗ್ಗೆ ರಾಜ್ಯ ಸರ್ಕಾರ ಸಮಗ್ರ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ರಾಜಾಕಾಂತ್, ನಗರಸಭೆ ಸದಸ್ಯ ಆರ್.ಮಟಮಪ್ಪ, ಮುಖಂಡರಾದ ವೀಣಾ ರಾಮು, ರವಿಕುಮಾರ್ ಹಾಜರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು