ಮಂಗಳವಾರ, ಜನವರಿ 28, 2020
22 °C
‘ಸ್ವಚ್ಛ ಸರ್ವೇಕ್ಷಣ’ ಸಮೀಕ್ಷೆಯಲ್ಲಿ ಚಿಕ್ಕಬಳ್ಳಾಪುರ ನಗರಸಭೆಗೆ ರಾಜ್ಯದಲ್ಲಿ 2ನೇ ಸ್ಥಾನ, ಬದಲಾಗಲೇ ಇಲ್ಲ ನಗರದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುವ ಚಿತ್ರಣ

ಚಿಕ್ಕಬಳ್ಳಾಪುರ | ಮೇಲೇರಿದ ಸ್ಥಾನ, ಗಲ್ಲಿಗಳಲ್ಲಿ ಅಧ್ವಾನ!

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಸ್ವಚ್ಛ ಸರ್ವೇಕ್ಷಣ’ ಸಮೀಕ್ಷೆಯಲ್ಲಿ ಇತ್ತೀಚೆಗೆ ಚಿಕ್ಕಬಳ್ಳಾಪುರ ನಗರಸಭೆ ಉತ್ತಮ ಸ್ಥಾನಗಳಿಸಿದೆ ಎಂದು ಒಂದೆಡೆ ನಗರಸಭೆ ಅಧಿಕಾರಿಗಳು ಹೆಮ್ಮೆಪಟ್ಟುಕೊಂಡು ಹೇಳಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ನಗರದಲ್ಲಿ ಇಂದಿಗೂ ಗಲ್ಲಿಗಲ್ಲಿಯಲ್ಲಿ ಎದುರಾಗುವ ಕಸದ ರಾಶಿಗಳು ಬದಲಾಗದ ವಾಸ್ತವ ಚಿತ್ರಣಕ್ಕೆ ಹಿಡಿದ ಕೈಗನ್ನಡಿಯಂತೆ ತೋರುತ್ತವೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ‘ಸ್ವಚ್ಛ ಭಾರತ್ ಮಿಷನ್’ ಯೋಜನೆ ಅಡಿಯಲ್ಲಿ ದೇಶದ ನಗರ, ಪಟ್ಟಣಗಳಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಈ ‘ಸ್ವಚ್ಛ ಸರ್ವೇಕ್ಷಣ’ ಸಮೀಕ್ಷೆ ನಡೆಸುತ್ತಿದೆ.

ಇತ್ತೀಚೆಗೆ ಬಿಡುಗಡೆಯಾದ ‘ಸ್ವಚ್ಛ ಸರ್ವೇಕ್ಷಣ’ ಸಮೀಕ್ಷೆಯ ಅಕ್ಟೋಬರ್‌–ಡಿಸೆಂಬರ್‌ ತ್ರೈಮಾಸಿಕ ವರದಿಯಲ್ಲಿ ಚಿಕ್ಕಬಳ್ಳಾಪುರ ನಗರಸಭೆ 50 ಸಾವಿರದಿಂದ 1 ಲಕ್ಷ ಜನಸಂಖ್ಯೆ ಹೊಂದಿರುವ ನಗರಸಭೆಗಳ ವಿಭಾಗದಲ್ಲಿ 1,145 ಅಂಕ ಗಳಿಸುವ ಮೂಲಕ ರಾಜ್ಯದಲ್ಲಿ 2ನೇ ಸ್ಥಾನ ಹಾಗೂ ದಕ್ಷಿಣ ಭಾರತದಲ್ಲಿ 4ನೇ ಸ್ಥಾನ ಪಡೆದಿದೆ.

ಈ ಸಂಗತಿ ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳಲ್ಲಿ ಪ್ರಚಾರ ಪಡೆದಿತ್ತು. ಅದರ ಬೆನ್ನಲ್ಲೇ ನಗರದಲ್ಲಿನ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯ ವಾಸ್ತವ ಚಿತ್ರಣ ಅರಿಯುವ ನಿಟ್ಟಿನಲ್ಲಿ ‘ಪ್ರಜಾವಾಣಿ’ ನಡೆಸಿದ ಸುತ್ತಾಟದಲ್ಲಿ ಅನೇಕ ಕಡೆಗಳಲ್ಲಿ ಎಂದಿನಂತೆ ಕಸದ ರಾಶಿಗಳು ದರ್ಶನವಾದವು.

ನಗರಸಭೆ ಪ್ರತಿ ವರ್ಷ ನಗರದ ತ್ಯಾಜ್ಯ ವಿಲೇವಾರಿಗಾಗಿ ಕೋಟಿಗಟ್ಟಲೇ ಅನುದಾನ ಬಳಕೆ ಮಾಡಿದರೂ, ಜನರಿಗೆ ಎಷ್ಟೇ ಜಾಗೃತಿ, ಎಚ್ಚರಿಕೆ ನೀಡಿದರೂ, ಎಲ್ಲೆಂದರಲ್ಲಿ ಕಸ ಎಸೆಯುವ ಚಾಳಿ ಬಿಟ್ಟಿಲ್ಲ. ಪರಿಣಾಮ, ನಗರದಲ್ಲಿ ನಾಗರಿಕರಿಗೆ ಬೇಕಾಬಿಟ್ಟಿ ಸುರಿದ ಕಸದ ರಾಶಿಗಳ ‘ದರ್ಶನ ಭಾಗ್ಯ’ ತಪ್ಪಿಸಲು ಸಾಧ್ಯವಾಗಲಿಲ್ಲ ಎನ್ನುವ ಬೇಸರ ಪ್ರಜ್ಞಾವಂತ ಜನರದಾಗಿದೆ.  

ನಗರದ ಸ್ವಚ್ಛತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ತೆಗೆದುಕೊಂಡಿರುವ ನಗರಸಭೆ ಕೆಲ ತಿಂಗಳ ಹಿಂದಷ್ಟೇ ಇನ್ನೊಂದು ಹೆಜ್ಜೆ ಮುಂದೆ ಹೋಗಿ ನಗರದ ಜನದಟ್ಟಣೆ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಸ್ತೆ ಬದಿಗಳಲ್ಲಿ ಹೊಸದಾಗಿ ಪ್ಲಾಸ್ಟಿಕ್ ಕಸದ ತೊಟ್ಟಿಗಳನ್ನು ಅಳವಡಿಸಿದೆ. ಮೂರೇ ತಿಂಗಳಲ್ಲಿ ತೊಟ್ಟಿಗಳು ಸರಿಯಾಗಿ ನಿರ್ವಹಣೆ ಕಾಣದೆ ಮತ್ತಷ್ಟು ಗಲೀಜು ವಾತಾವಾರಣ ಸೃಷ್ಟಿಗೆ ಕಾರಣವಾಗುತ್ತಿವೆ.

ನಗರಸಭೆ ಅಧಿಕಾರಿಗಳು ನಗರದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಒಣ ಮತ್ತು ಹಸಿ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಲು ಬಹುತೇಕ ಮನೆಗಳಿಗೆ ಬಕೆಟ್ ನೀಡಿದರೂ, ಕಸ ಸಂಗ್ರಹಿಸಲು ಆಟೋ, ಟಿಪ್ಪರ್ ತೆರಳಿದರೂ, ಸಿ.ಸಿ ಕ್ಯಾಮೆರಾ ಅಳವಡಿಸಿದರೂ, ಕಸ ಸುರಿಯುವವರಿಗೆ ಸ್ಥಳದಲ್ಲೇ ದಂಡ ವಿಧಿಸುವುದಾಗಿ ಹೆದರಿಸಿದರೂ ಕಸ ರಾಶಿಗಳು ಮಾತ್ರ ಕಾಣೆಯಾಗುತ್ತಿಲ್ಲ.

‘ಸ್ವಚ್ಛ ನಗರ’ದ ಪರಿಕಲ್ಪನೆ ಅಡಿ ಹಿಂದಿನ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರು ಸ್ವಚ್ಛತೆ ಮಹತ್ವ ನೀಡುವ ನಿಟ್ಟಿನಲ್ಲಿ ವಿವಿಧ ಪ್ರಯೋಗಗಳಿಗೆ ಮುಂದಾಗಿದ್ದರು. ಅವರ ವರ್ಗಾವಣೆ ಬೆನ್ನಲ್ಲೇ ಆ ಪ್ರಯತ್ನ ಮುಂದುವರಿಯಲೇ ಇಲ್ಲ ಎಂಬ ಬೇಸರ ಪ್ರಜ್ಞಾವಂತರದು. ಎಲ್ಲೆಂದರಲ್ಲಿ ಕಸ ಸುರಿಯುವವರ ಮೇಲೆ ಸಿ.ಸಿ ಟಿ.ವಿ ಕಣ್ಗಾವಲು ಹಾಕುವ ನಗರದ ಒಂಬತ್ತು ಕಡೆಗಳಲ್ಲಿ ನಗರಸಭೆ ಅಧಿಕಾರಿಗಳು ಅತ್ಯಾಧುನಿಕ ಮಾದರಿ ಕ್ಯಾಮೆರಾಗಳನ್ನು ಅಳವಡಿಸುವ ‘ಶಾಸ್ತ್ರ’ ಮಾಡಿ, ಕೆಲ ತಿಂಗಳಲ್ಲೇ ಕ್ಯಾಮೆರಾ ತೆಗೆದರು. ಕಸ ಸುರಿಯುವವರಲ್ಲಿ ಭಯ ಬರಲೇ ಇಲ್ಲ ಎನ್ನುವುದಕ್ಕೆ ವಾಸ್ತವವೇ ಸಾಕ್ಷಿ.

ನಗರ ತ್ಯಾಜ್ಯದ ಸಮಸ್ಯೆ ತಹಬದಿಗೆ ತರುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಂಗ್ರಹವಾಗುವ ಕಸವನ್ನು ಆಯಾ ಸ್ಥಳದಲ್ಲಿಯೇ ವೈಜ್ಞಾನಿಕ ರೀತಿಯಲ್ಲಿ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸಲು ಅನಿರುದ್ಧ್ ಶ್ರವಣ್ ಅವರು ಚಿಂತನೆ ನಡೆಸಿದ್ದರು. ಅವರ ಆಸಕ್ತಿಯ ಫಲವಾಗಿ ಪ್ರಾಯೋಗಿಕವಾಗಿ ಜಿಲ್ಲಾಧಿಕಾರಿ ಅವರ ಸರ್ಕಾರಿ ನಿವಾಸದ ಆವರಣದಲ್ಲಿ ಎರಡು ‘ಮೆಶ್ ಕಾಂಪೋಸ್ಟ್‌ ಘಟಕ’ಗಳನ್ನು ಕೂಡ ಅಳವಡಿಸಲಾಗಿತ್ತು. ಆ ಪ್ರಯತ್ನ ಕೂಡ ಮುಂದುವರಿಯಲೇ ಇಲ್ಲ. ಪರಿಣಾಮ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಕಸ ರಾಶಿಗಳು ಗೋಚರಿಸುವ ಚಿತ್ರಣ ಬದಲಾಗಲೇ ಇಲ್ಲ.

ಈ ಬಗ್ಗೆ ನಗರಸಭೆ ಆಯುಕ್ತ ಡಿ.ಲೋಹಿತ್ ಅವರನ್ನು ವಿಚಾರಿಸಿದರೆ, ‘ನಾವು ವೈಜ್ಞಾನಿಕ ರೀತಿಯ ತ್ಯಾಜ್ಯ ವಿಲೇವಾರಿ ವಿಚಾರವಾಗಿ ನಗರದಲ್ಲಿ ಅರಿವು ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ನಗರದ ಶೇ 90ರಷ್ಟು ಜನ ನಮ್ಮ ವಾಹನಗಳಿಗೆ ಕಸ ಕೊಡುತ್ತಿದ್ದಾರೆ. ಶೇ10 ರಷ್ಟು ಜನರು ಮಾತ್ರ ಬೇಕಾಬಿಟ್ಟಿ ಎಸೆಯುತ್ತಾರೆ. ಇದನ್ನು ನಿಯಂತ್ರಿಸಲು ಸಮಯಾವಕಾಶ ಬೇಕಾಗುತ್ತದೆ. ಹಂತಹಂತವಾಗಿ ನಿಯಂತ್ರಣಕ್ಕೆ ತರುತ್ತೇವೆ. ಕಸ ಎಸೆಯುವವರಿಗೆ ಈವರೆಗೆ ದಂಡ ಹಾಕಿಲ್ಲ. ಇನ್ನು ಮೇಲೆ ಹಾಕುತ್ತೇವೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು