ಶುಕ್ರವಾರ, ಏಪ್ರಿಲ್ 3, 2020
19 °C
ನಗರದಲ್ಲಿ ಎರಡು ಪ್ರಕರಣಗಳು ವರದಿ, ಅಧಿಕಾರಿಗಳಿಂದ ಕಟ್ಟುನಿಟ್ಟಿನ ಕ್ರಮ

ಗೌರಿಬಿದನೂರು | ಕೋವಿಡ್‌ ಭೀತಿಗೆ ನಗರ ತಲ್ಲಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ನಗರದ ಮತ್ತೊಬ್ಬ ಮಹಿಳೆಯಲ್ಲಿ ಸೋಮವಾರ ಕೋವಿಡ್‌–19 ಸೋಂಕು ಇರುವುದು ದೃಢಪಟ್ಟ ಬೆನ್ನಲ್ಲೇ ನಗರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಇತ್ತೀಚೆಗಷ್ಟೇ ಮೆಕ್ಕಾ ಯಾತ್ರೆಯಿಂದ ಹಿಂದಿರುಗಿದ್ದ ನಗರದ ಚೌಡೇಶ್ವರಿ ಬಡಾವಣೆಯ ಮೂರು ಜನರ ಪೈಕಿ ತಾಯಿ ಮತ್ತು ಮಗ ಇಬ್ಬರಿಗೆ ಸೋಂಕು ತಗಲಿರುವುದು ವಿಚಾರ ಆ ಬಡಾವಣೆಯ ಜನರಲ್ಲಿ ತಲ್ಲಣ ಮೂಡಿಸಿದೆ.

ಆರೋಗ್ಯ ಇಲಾಖೆ ಸಿಬ್ಬಂದಿ ಕೂಡ ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಗೃಹ ಬಂಧನದಲ್ಲಿರಿಸಿ ನಿಗಾ ವಹಿಸುವ ಜತೆಗೆ ನಗರಾದ್ಯಂತ ಸೋಂಕು ನಾಶಕ ದ್ರಾವಣ ಸಿಂಪಡಿಸುವ ಕಾರ್ಯ ಮುಂದುವರಿಸಿದ್ದಾರೆ.

ಜತೆಗೆ ಆರೋಗ್ಯ ಇಲಾಖೆ ಮತ್ತು ನಗರಸಭೆಯ ಅಧಿಕಾರಿಗಳು ನಗರದೆಲ್ಲೆಡೆ ಮನೆ ಮನೆಗೆ ತೆರಳಿ ನಾಗರಿಕರಲ್ಲಿ‌ ಜಾಗೃತಿ ‌ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ನಗರಸಭೆ ವತಿಯಿಂದ ಎಲ್ಲಾ ಕಡೆಗಳಲ್ಲಿ ಫಾಗಿಂಗ್ ಕಾರ್ಯ ಚುರುಕಾಗಿದೆ.

ಅಗತ್ಯ ವಸ್ತುಗಳಾದ ತರಕಾರಿ, ಹಾಲು ಹಾಗೂ ಹಣ್ಣುಗಳ‌ ಮಾರಾಟ ಸ್ಥಳಗಳನ್ನು ಪೌರ ಕಾರ್ಮಿಕರು ಸೋಂಕು ನಿವಾರಕ ಬಳಸಿ ಸ್ವಚ್ಛಗೊಳಿಸುತ್ತಿದ್ದು, ನಗರದ ಪ್ರತೀ ವಾರ್ಡಿಗೆ ತೆರಳಿ ನಾಗರಿಕರಿಗೆ ಉಚಿತವಾಗಿ‌ ಮುಖಗವಸುಗಳನ್ನು ನೀಡಿ ಜಾಗರೂಕತೆಯನ್ನು ವಹಿಸುವಂತೆ ಮನವಿ ಮಾಡುತ್ತಿದ್ದಾರೆ.

ವಿದೇಶಗಳೊಂದಿಗೆ ಹೆಚ್ಚಿನ ನಂಟು ಹೊಂದಿರುವ ಅಲೀಪುರ ಪ್ರದೇಶದತ್ತ ಆರೋಗ್ಯ ಇಲಾಖೆ ಸಿಬ್ಬಂದಿ ಹೆಚ್ಚಿನ ನಿಗಾ ವಹಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಸುಮಾರು 80 ಜನರನ್ನು ಪ್ರತ್ಯೇಕ ನಿರ್ಬಂಧನಕ್ಕೆ ಒಳಪಡಿಸಿದ್ದಾರೆ.

ನಗರದಲ್ಲಿ ಎರಡು ಕೋವಿಡ್‌ ಸೋಂಕಿನ ಪ್ರಕರಣಗಳು ವರದಿಯಾಗುತ್ತಿದ್ದಂತೆ, ಸೋಮವಾರ ನಗರಸಭೆ ಆಯುಕ್ತ ಜಿ.ಎನ್.ಚಲಪತಿ ಅವರು ಮುಸ್ಲಿಂ ಮುಖಂಡರ ಜತೆಗೆ ಸಭೆ ನಡೆಸಿ ಮಸೀದಿಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಒಟ್ಟಾಗಿ ಸೇರಿ ಪ್ರಾರ್ಥನೆ ಸಲ್ಲಿಸುವುದರಿಂದ ಸೋಂಕು ಹರಡುವ ಸಾಧ್ಯತೆ ಇದೆ. ಆದ್ದರಿಂದ ಸರ್ಕಾರದ ಮುಂದಿನ ಆದೇಶದ ವರೆಗೆ ಪ್ರತಿಯೊಬ್ಬರೂ ಮಸೀದಿಗೆ ತೆರಳದೆ ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಬೇಕು ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)