ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗೇರಿದ ಹಳ್ಳಿ ರಾಜಕೀಯ

ಗ್ರಾ. ಪಂ ಚುನಾವಣೆ: ಚಿಂತಾಮಣಿಯಲ್ಲಿ ಒಟ್ಟು 25 ಗ್ರಾಮ ಪಂಚಾಯಿತಿ; 572 ಸ್ಥಾನಗಳು
Last Updated 2 ಡಿಸೆಂಬರ್ 2020, 2:36 IST
ಅಕ್ಷರ ಗಾತ್ರ

ಚಿಂತಾಮಣಿ: ಗ್ರಾಮ ಪಂಚಾಯಿತಿ ಚುನಾವಣೆಯ ದಿನಾಂಕ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ವಿವಿಧ ರಾಜಕೀಯ ಪಕ್ಷಗಳು ಹಾಗೂ ಸ್ಪರ್ಧಾಕಾಂಕ್ಷಿಗಳಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಚುನಾವಣೆ ಘೋಷಣೆಯಾಗುತ್ತಿದ್ದಂತೆ ಹಳ್ಳಿಗಳ ರಾಜಕೀಯ ರಂಗೇರುತ್ತಿದೆ. ಮರಿ ನಾಯಕರು ಮತ್ತು ಸ್ಪರ್ಧಾಕಾಂಕ್ಷಿಗಳು ಚುರುಕಾಗಿ ಒಡಾಡುತ್ತಾ ತಮ್ಮ ತಮ್ಮ ನಾಯಕನ ಮನೆಗಳಿಗೆ ಎಡತಾಕುತ್ತಿದ್ದಾರೆ. ಸ್ಪರ್ಧೆಯ ಆಕಾಂಕ್ಷಿಗಳು ಜನರ ಬೆಂಬಲ, ವಿಶ್ವಾಸ ಗಳಿಸಲು ಜನಸಾಮಾನ್ಯರ ಬಗಗೆ ಎಲ್ಲಿಲ್ಲದ ಗೌರವ, ಅನುಕಂಪ ತೋರುತ್ತಿರುವುದು ಸಾಮಾನ್ಯವಾಗಿದೆ.

ಗ್ರಾಮ ಪಂಚಾಯಿತಿ ಚುನಾವಣೆ
ಗಳು ನೇರವಾಗಿ ಪಕ್ಷದ ಚಿಹ್ನೆಯ ಅಡಿಯಲ್ಲಿ ನಡೆಯದಿದ್ದರೂ ಪಕ್ಷಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ನಿಲ್ಲಿಸುತ್ತವೆ. ತಾಲ್ಲೂಕಿನಲ್ಲಿ 35 ಗ್ರಾಮ ಪಂಚಾಯಿತಿಗಳಿದ್ದು, ಡಿಸೆಂಬರ್ 22ರಂದು ಮತದಾನ ನಡೆಯಲಿದೆ.

ಹಾಲಿ ಮತ್ತು ಮಾಜಿ ಶಾಸಕರು ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಕ್ಷೇತ್ರದಲ್ಲಿ ಯಾವುದೇ ಚುನಾವಣೆ ನಡೆದರೂ ಪ್ರತಿಷ್ಠೆಯಾಗಿ ತೆಗೆದು ಕೊಳ್ಳಲಾಗುತ್ತದೆ. ವಿಧಾನಸಭೆಯ ಕಳೆದ ಎರಡು ಚುನಾವಣೆಗಳಲ್ಲಿ ಡಾ.ಎಂ.ಸಿ. ಸುಧಾಕರ್ ಪರಾಭವಗೊಂಡಿದ್ದರೂ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಟಿಎಪಿಸಿಎಂಎಸ್, ಕೋಚಿಮುಲ್, ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರ ಉಳಿಸಿಕೊಂಡಿದ್ದಾರೆ. ನಗರಸಭೆಯಲ್ಲೂ ಅವರ ಬೆಂಬಲಿಗರು ಅಧಿಕಾರ ವಹಿಸಿಕೊಂಡಿದ್ದಾರೆ.

ಜೆಡಿಎಸ್ ಪಕ್ಷದ ಶಾಸಕ ಎಂ.ಕೃಷ್ಣಾರೆಡ್ಡಿ ಎರಡು ಬಾರಿ ವಿಧಾನಸಭೆ ಸದಸ್ಯರಾಗಿದ್ದರೂ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಪಡೆಯಲು ಸಾಧ್ಯವಾಗಿಲ್ಲ. ಮಾಜಿ ಶಾಸಕರು ಅಧಿಕಾರ ಉಳಿಸಿಕೊಳ್ಳಲು ಹಾಗೂ ಹಾಲಿ ಶಾಸಕರು ಅಧಿಕಾರ ಕಿತ್ತುಕೊಳ್ಳಲು
ತಂತ್ರ ಪ್ರತಿತಂತ್ರಗಳನ್ನು ಎಣೆಯುತ್ತಿದ್ದಾರೆ.

ಬೇರುಮಟ್ಟದ ಗ್ರಾಮ ಪಂಚಾಯಿತಿಗಳಲ್ಲಿ ಶತಾಯಗತಾಯ ಅಧಿಕಾರ ಹಿಡಿಯಲು ಹಾಲಿ ಮತ್ತು ಮಾಜಿ ಶಾಸಕರು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಟಿಕೆಟ್ ಆಕಾಂಕ್ಷಿಗಳು ಅಧಿಕ ಸಂಖ್ಯೆಯಲ್ಲಿದ್ದು ಅಭ್ಯರ್ಥಿಗಳ ಆಯ್ಕೆಯೂ ಕಗ್ಗಂಟಾಗಿದೆ.

ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವುದರಿಂದ ಈ ಚುನಾವಣೆಯನ್ನು ಬಿಜೆಪಿಯೂ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದೆ. ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಸೇರಿದಂತೆ ಹಲವಾರು ಮುಖಂಡರು ಗ್ರಾಮ ಸ್ವರಾಜ್ ಹೆಸರಿನಲ್ಲಿ ನಗರದಲ್ಲಿ ಸಭೆ ನಡೆಸಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದಾರೆ.

ಶಾಸಕ ಎಂ.ಕೃಷ್ಣಾರೆಡ್ಡಿ ಹೋಬಳಿವಾರು ಪೂರ್ವಭಾವಿ ಸಭೆಗಳನ್ನು ಆಯೋಜಿಸಿದ್ದಾರೆ. ಪ್ರತಿದಿನ ಬೆಳಿಗ್ಗೆ 11ರಿಂದ 2ವರೆಗೆ ಎರಡು ಪಾಳಿಯಲ್ಲಿ ಎರಡು ಹೋಬಳಿಗಳ ಪಕ್ಷದ ಕಾರ್ಯಕರ್ತರು, ಮುಖಂಡರೊಡನೆ ಸಮಾಲೋಚನೆ ನಡೆಸಿ ಅಭ್ಯರ್ಥಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದಾರೆ. ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಸಹ ತನ್ನ ಬೆಂಬಲಿಗರ ಹೋಬಳಿವಾರು ಸಭೆಗಳನ್ನು ನಡೆಸುವ ಮೂಲಕ ಪಂಚಾಯಿತಿವಾರು ಅಭ್ಯರ್ಥಿಗಳ ಮಾಹಿತಿಯನ್ನು ಪಡೆಯುಲು ಸಿದ್ಧತೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT