ಶನಿವಾರ, ಜೂನ್ 6, 2020
27 °C

ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ್ ಚಿಕ್ಕಬಳ್ಳಾಪುರಕ್ಕೆ ನಾಳೆ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಕೊನೆಗೂ ಜಿಲ್ಲೆಯನ್ನು ನೆನಪಿಸಿಕೊಂಡಿದ್ದಾರೆ! ಶುಕ್ರವಾರ (ಏಪ್ರಿಲ್ 3) ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ರಾಮನಗರ ಜಿಲ್ಲೆಯ ಜತೆಗೆ ಚಿಕ್ಕಬಳ್ಳಾಪುರ ಜಿಲ್ಲೆ ಹೆಚ್ಚುವರಿ ಹೊಣೆಗಾರಿಕೆಯನ್ನೂ ವಹಿಸಿಕೊಂಡಿದ್ದ ಅಶ್ವತ್ಥನಾರಾಯಣ್ ಅವರು, ಜಿಲ್ಲೆಯಲ್ಲಿ ಕಳೆದ ಆರೂವರೆ ತಿಂಗಳಲ್ಲಿ ಒಂದೇ ಒಂದು ಬಾರಿ ಸಭೆ ನಡೆಸಿದ್ದರು. ಅದನ್ನು ಹೊರತುಪಡಿಸಿದಂತೆ ಈವರೆಗೆ ಯಾವೊಂದು ರಾಷ್ಟ್ರೀಯ ಹಬ್ಬಗಳು, ಜಯಂತಿ ಕಾರ್ಯಕ್ರಮದಲ್ಲೂ ಸಚಿವರು ಕಾಣಿಸಿಕೊಂಡಿಲ್ಲ. ಅವರು ಹೆಸರು ಆಹ್ವಾನ ಪತ್ರಿಕೆಗೆ ಮಾತ್ರ ಸೀಮಿತವಾಗಿತ್ತು.

ಜಿಲ್ಲೆಯಲ್ಲಿ ಮಾರಣಾಂತಿಕ ಕೋವಿಡ್– 19 ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿ ಜನರು ಆತಂಕದಲ್ಲಿ ದಿನದೂಡುತ್ತಿದ್ದರೂ ಉಸ್ತುವಾರಿ ಸಚಿವರು ಜಿಲ್ಲೆಯತ್ತ ತಲೆ ಹಾಕಿರಲಿಲ್ಲ. ಈ ಕುರಿತಂತೆ ‘ಪ್ರಜಾವಾಣಿ’ ಏಪ್ರಿಲ್ 1 ರಂದು ‘ಜಿಲ್ಲೆಯತ್ತ ತಲೆ ಹಾಕದ ಉಸ್ತುವಾರಿ’ ಎಂಬ ಶೀರ್ಷಿಕೆ ಅಡಿ ವಿಶೇಷ ವರದಿ ಪ್ರಕಟಿಸಿತ್ತು.

ಈ ಹಿಂದೆ ಉಸ್ತುವಾರಿ ಸಚಿವರಾಗಿದ್ದ ಎನ್.ಎಚ್.ಶಿವಶಂಕರರೆಡ್ಡಿ ಅವರು ಆಗಾಗ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿ ಜನರು ಸಮಸ್ಯೆಗಳನ್ನು ಆಲಿಸುವ ಕೆಲಸ ಮಾಡುವ ಜತೆಗೆ ಪ್ರಗತಿ ಪರಿಶೀಲನೆ ನಡೆಸುವ ಜತೆಗೆ ಅಭಿವೃದ್ಧಿಯ ವಿಚಾರವಾಗಿ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಆದರೆ, ಹೊಸ ಉಸ್ತುವಾರಿ ಸಚಿವರ ಅಸಡ್ಡೆ ಜಿಲ್ಲೆಯ ಪ್ರಜ್ಞಾವಂತ ಜನರಲ್ಲಿ ಬೇಸರ ಮೂಡಿಸಿ, ಚರ್ಚೆಗೆ ಎಡೆ ಮಾಡಿತ್ತು.

'ವರದಿ ಪ್ರಕಟವಾದ ಬೆನ್ನಲ್ಲೆ ಎಚ್ಚೆತ್ತುಕೊಂಡ ಉಸ್ತುವಾರಿ ಸಚಿವರು ಜಿಲ್ಲೆಗೆ ಭೇಟಿ ನೀಡಲು ಮುಂದಾಗಿದ್ದಾರೆ. ಶುಕ್ರವಾರ ಬೆಳಿಗ್ಗೆ 10.30ಕ್ಕೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯಲ್ಲಿರುವ ವಿಟಿಯು ಕೇಂದ್ರದಲ್ಲಿ ತೆರೆದ ಕ್ವಾರೆಂಟೈನ್ ಕೇಂದ್ರಕ್ಕೆ ಭೇಟಿ ನೀಡುವ ಸಚಿವರು ಬಳಿಕ ಕಂದವಾರ ಬಳಿ ಇರುವ ನಿರಾಶ್ರಿತರ ಟೆಂಟ್‌ಗಳಿಗೆ ಭೇಟಿ ನೀಡಲಿದ್ದಾರೆ.

ನಂತರ ಸಚಿವರು ಚದುಲಪುರದಲ್ಲಿ ತೆರೆದ ಕ್ವಾರೆಂಟೈನ್ ಕೇಂದ್ರಕ್ಕೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಲಿದ್ದು, ಬೆಳಿಗ್ಗೆ 12ಕ್ಕೆ ಕೋವಿಡ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ಪರಿಸ್ಥಿತಿ ಅವಲೋಕಿಸಲು ಸಭೆ ನಡೆಸಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು