ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಯ ಅಂದ ಹೆಚ್ಚಿಸಿದ ಗೋಡೆ ಬರಹ

ಮಕ್ಕಳ ಕಲಿಕಾ ಆಸಕ್ತಿ ವೃದ್ಧಿಗೆ ಚಿತ್ರಕಲೆ ಸಹಕಾರಿ
Last Updated 30 ಜುಲೈ 2022, 4:59 IST
ಅಕ್ಷರ ಗಾತ್ರ

ಗೌರಿಬಿದನೂರು: ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ವಾತಾವರಣ ಕಲ್ಪಿಸಲು ಸ್ಥಳೀಯ ಗ್ರಾಮ ಪಂಚಾಯಿತಿಗಳು ಚಿತ್ರಕಲೆಯ ಮೊರೆ ಹೋಗಿವೆ.

ಶಾಲಾ ಆವರಣದಲ್ಲಿ ಕಲಿಕಾ ಪರಿಕರಗಳು, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆ, ಉತ್ತಮ ಪರಿಸರದ ಜತೆಗೆ ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗುವಂತಹ ವಿವಿಧ ಚಿತ್ರಗಳನ್ನು ಶಾಲಾ ಕಟ್ಟಡದ ಮತ್ತು ತಡೆಗೋಡೆಗಳ ಮೇಲೆ ಬರೆಸುವ ಮೂಲಕ ಮಕ್ಕಳಲ್ಲಿ ಕಲಿಕಾ ಆಸಕ್ತಿಯನ್ನು ಹೆಚ್ಚಿಸಲಾಗುತ್ತಿದೆ.

ತಾಲ್ಲೂಕಿನ ಅಲಕಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಲ್ಲಿ ಕಲಿಕಾಸಕ್ತಿಯ ಜತೆಗೆ ಸಾಮಾಜಿಕ ಮತ್ತು ವೈಜ್ಞಾನಿಕ ವಿಚಾರಗಳನ್ನು ಕಲಿಯಲು ಅನುಕೂಲ ಆಗುವಂತೆ ಸ್ಥಳೀಯ ಪಂಚಾಯಿತಿಯ ವಿಶೇಷ ಅನುದಾನದಲ್ಲಿ ಶಾಲೆಯ ತರಗತಿ ಕೋಣೆಗಳ ಮತ್ತು ತಡೆಹಗೋಡೆ ಮೇಲೆ ಬಣ್ಣಬಣ್ಣದ ಚಿತ್ರಗಳನ್ನು ಬಿಡಿಸಲಾಗಿದೆ. ಇದರಿಂದ ಶಾಲೆಯ ಅಂದ ಹೆಚ್ಚಾಗುವ ಜತೆಗೆ ಸರ್ಕಾರಿ ಶಾಲೆಯತ್ತ ಮಕ್ಕಳು ಆಕರ್ಷಿತರಾಗುತ್ತಿದ್ದಾರೆ.

ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿಯವರೆಗೆ ಒಟ್ಟು 81 ವಿದ್ಯಾರ್ಥಿಗಳಿದ್ದು, ನಾಲ್ಕು ಮಂದಿ ಶಿಕ್ಷಕರಿದ್ದಾರೆ. ನೆರೆಯ ಅಲಕಾಪುರ, ಬರ್ಜಾನುಕುಂಟೆ, ನಂದಿಗಾನಹಳ್ಳಿ ಸೇರಿದಂತೆ ವಿವಿದೆಡೆಗಳಿಂದ ಮಕ್ಕಳು ಶಾಲೆಗೆ ಆಗಮಿಸುತ್ತಾರೆ. ಅವರ ಕಲಿಕೆಗೆ ಪೂರಕ ಉತ್ತಮ ವಾತಾವರಣ ನಿರ್ಮಾಣ ಮಾಡಲು ಶಿಕ್ಷಣ ಇಲಾಖೆಯ ‌ಜತೆಗೆ ಸ್ಥಳೀಯ ಗ್ರಾ.ಪಂ, ಚುನಾಯಿತ ಜನಪ್ರತಿನಿಧಿಗಳು, ಸಂಘಸಂಸ್ಥೆಗಳು ಸಹಕಾರ ನೀಡುತ್ತಿವೆ.

ನರೇಗಾ ಯೋಜನೆಯಡಿಯಲ್ಲಿ ಶಾಲಾ ಆವರಣ ಮತ್ತು ಕಾಂಪೌಂಡ್ ‌ನಿರ್ಮಾಣ ಮಾಡಿದ್ದು, ಮಕ್ಕಳ ಸುರಕ್ಷಿತ ಕಲಿಕೆಯ ಜತೆಗೆ ಕ್ರೀಡಾ ಚಟುವಟಿಕೆಗಳಿಗೂ ಸಹಕಾರಿಯಾಗಿದೆ. ನೂತನವಾಗಿ ನಿರ್ಮಾಣ ಮಾಡಿರುವ ಗೋಡೆಗಳ ಮೇಲೆ ವಿಜ್ಞಾನಿಗಳು, ಕವಿಗಳು, ಸಾಹಿತಿಗಳು, ಸ್ವಾತಂತ್ರ್ಯ ಹೋರಾಟಗಾರರು, ರಾಷ್ಟ್ರದ ಪ್ರಮುಖರು, ಶಿಕ್ಷಣ ತಜ್ಞರು, ಖ್ಯಾತ ಕ್ರೀಡಾಪಟುಗಳು, ವಚನಕಾರರು ಸೇರಿದಂತೆ ರಾಷ್ಟ್ರ ಹಾಗೂ ರಾಜ್ಯದ ಲಾಂಛನ, ಪ್ರಾಣಿ, ಪಕ್ಷಿಗಳ ಚಿತ್ರಗಳನ್ನು ಆಕರ್ಷಕವಾಗಿ ಬಿಡಿಸಲಾಗಿದೆ. ಶಾಲೆಗೆ ಬರುವ ಮಕ್ಕಳು ನಿತ್ಯ ಚಿತ್ರಗಳನ್ನು ನೋಡುವುದರಿಂದ ಕಲಿಕೆಗೆ ಪೂರಕ ಮಾಹಿತಿ ದೊರೆಯುತ್ತಿದೆ. ‌

ಗ್ರಾಮೀಣ ‌ಭಾಗದ ವಿದ್ಯಾರ್ಥಿಗಳಲ್ಲಿ ಪಠ್ಯ ವಿಷಯಗಳ ಜತೆಗೆ ಸಾಮಾನ್ಯ ಜ್ಞಾನ ಅರಿಯಲು ಶಾಲೆಯ ಗೋಡೆಗಳ ಮೇಲೆ ಚಿತ್ರ ಬಿಡಿಸಲಾಗಿದೆ. ಇದು ಮಕ್ಕಳಲ್ಲಿನ ಜ್ಞಾನ ವಿಕಸನಕ್ಕೆ ಸಹಕಾರಿ ಯಾಗಿದೆ. ಈ ಕಾರ್ಯಕ್ಕೆ ಕೈಜೋಡಿಸಿದ ಪಂಚಾಯಿತಿಯ ಕಾರ್ಯ ಶ್ಲಾಘನೀಯ ಎನ್ನುತ್ತಾರೆ ಮುಖ್ಯ ಶಿಕ್ಷಕಿ ಬ್ರಾಹ್ಮಿಲ.

ಗ್ರಾ.ಪಂ, ದಾನಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಸ್ಥಳೀಯ ಕಲಾವಿದರಾದ ಜಾಲಿಜಗದೀಶ್ ಮತ್ತು ಅವರ ತಂಡವು ಸರ್ಕಾರಿ ಶಾಲೆಗಳ ಗೋಡೆಗಳಲ್ಲಿ ತಮ್ಮ ಕೈ ಚಳಕ ತೋರುತ್ತಿದೆ. ಇದರ ಜತೆಗೆ ನೈರ್ಮಲ್ಯ, ಪರಿಸರ ಸಂರಕ್ಷಣೆ, ಸುರಕ್ಷಿತ ಆರೋಗ್ಯ, ಸಾಂಕ್ರಾಮಿಕ ರೋಗಗಳ ಮುನ್ನೆಚ್ಚರಿಕೆ ಬಗ್ಗೆ ಜಾಗೃತಿ ಮೂಡಿಸುವುದು, ಕಲಿಕಾ ವಾತಾವರಣ, ದೇಶ ವಿದೇಶಗಳಲ್ಲಿನ ಪ್ರವಾಸಿ ತಾಣಗಳು,‌ ಪಾರಂಪರಿಕ ಘಟನಾವಳಿಗಳು ಸೇರಿ ಇನ್ನಿತರ ವಿಷಯಗಳನ್ನಾಧರಿತವಾದ ಚಿತ್ರ ಬರೆಯುವ ಮೂಲಕ ಶಾಲಾ ಅಂದವನ್ನು ಹೆಚ್ಚಿಸಲಾಗುತ್ತಿದೆ. ಇದರಿಂದ ಮಕ್ಕಳಲ್ಲಿ ಕಲಿಕಾಸಕ್ತಿಯೂ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT