ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಬೇಸಿಗೆಗೂ ಮುನ್ನವೇ ನೀರಿನ ಸಮಸ್ಯೆ

ಸಮಸ್ಯೆ ನೀಗಿಸಲು ತಾಲ್ಲೂಕು ಪಂಚಾಯಿತಿ ಸಿದ್ಧತೆ l ಕಾರ್ಯಪಡೆ ಯೋಜನೆಯಡಿ ₹50 ಲಕ್ಷ ಬಿಡುಗಡೆ
Published 20 ಫೆಬ್ರುವರಿ 2024, 4:32 IST
Last Updated 20 ಫೆಬ್ರುವರಿ 2024, 4:32 IST
ಅಕ್ಷರ ಗಾತ್ರ

ಚಿಂತಾಮಣಿ: ಮುಂಗಾರು ಮಳೆ ಕೈಕೊಟ್ಟಿದ್ದರಿಂದಾಗಿ ಬೇಸಿಗೆ ಹತ್ತಿರವಾಗುತ್ತಿರುವ ನಡುವೆಯೇ, ತಾಲ್ಲೂಕಿನ ವಿವಿಧೆಡೆ ನೀರಿನ ಸಮಸ್ಯೆ ಉಲ್ಬಣಿಸಿದೆ. ಮಳೆಯ ಕೊರತೆ ಕಾರಣಕ್ಕೆ ತಾಲ್ಲೂಕು ಅನ್ನು ಬರಗಾಲಪೀಡಿತ ಎಂದು ಘೋಷಣೆ ಮಾಡಲಾಗಿದೆ. ಬೇಸಿಗೆ ಆರಂಭಕ್ಕೂ ಮುನ್ನವೇ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಬವಣೆ ಎದುರಾಗಿದೆ. 

ತಾಲ್ಲೂಕಿನಲ್ಲಿ ನದಿ, ನಾಲೆಗಳು ಸೇರಿದಂತೆ ಯಾವುದೇ ನೈಸರ್ಗಿಕ ನೀರಿನ ಮೂಲಗಳಿಲ್ಲ. ಮಳೆಯ ಕೊರತೆಯಿಂದ ಕೆರೆ, ಕುಂಟೆಗಳು ಬತ್ತಿಹೋಗುತ್ತಿವೆ. ಅಂತರ್ಜಲದ ಕುಸಿತದಿಂದ ನೀರಿನ ಏಕೈಕ ಮೂಲವಾಗಿರುವ ಕೊಳವೆ ಬಾವಿಗಳು ಬತ್ತಿ ಹೋಗುತ್ತಿವೆ. 1,500 ಅಡಿಗಳಷ್ಟು ಆಳಕ್ಕೆ ಕೊರೆದರೂ, ನೀರು ಸಿಗುತ್ತಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊರೆದ ಬಾವಿಗಳು ಕೆಲವೇ ತಿಂಗಳುಗಳಲ್ಲಿ ಒಣಗುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ. 

ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದ್ದು, ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಜಿಲ್ಲಾ ಪಂಚಾಯಿತಿ ಮುಂದಾಗಿದೆ. ಗ್ರಾಮ ಪಂಚಾಯಿತಿಯ ಕೊಳವೆ ಬಾವಿಯನ್ನು ಬಾಡಿಗೆ ಆಧಾರದಲ್ಲಿ ಪಡೆದಿರುವ ಖಾಸಗಿ ವ್ಯಕ್ತಿಗಳು ಕೊಳವೆ ಬಾವಿ ಮೂಲಕ ಗ್ರಾಮಗಳಿಗೆ ನೀರು ಒದಗಿಸುತ್ತಿದ್ದಾರೆ. 

‘ತಾಲ್ಲೂಕಿನಲ್ಲಿ ಒಟ್ಟು 407 ಗ್ರಾಮಗಳಿವೆ. 6 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗಿದೆ. ಕಂಚಿನಾಯಕನಹಳ್ಳಿ, ವಡ್ಡಹಳ್ಳಿ, ಎ.ಗುಟ್ಟಹಳ್ಳಿ, ದಿನ್ನಮಿಂದಹಳ್ಳಿ, ಮುನುಗನಹಳ್ಳಿ, ಯಶವಂತಪುರ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೇಳತೀರದಾಗಿದೆ. ಈ ಗ್ರಾಮಗಳ ನೀರಿನ ಖಾಸಗಿ ಕೊಳವೆ ಬಾವಿಗಳ ಮೂಲಕ ನೀಗಿಸಲಾಗುತ್ತಿದೆ. ಖಾಸಗಿ ಕೊಳವೆ ಬಾವಿಗಳಿಗೆ ತಿಂಗಳಿಗೆ 14-18 ಸಾವಿರ ಬಾಡಿಗೆ ನಿಗದಿಪಡಿಸಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ ಪ್ರಜಾವಾಣಿಗೆ ತಿಳಿಸಿದರು.

ಕೈವಾರದ ಬ್ಲಾಕ್–1, ಬ್ಲಾಕ್–2, ಬ್ಲಾಕ್–3, ಕೆಂಪದೇನಹಳ್ಳಿ, ಅಮಿಟಗಾನಹಳ್ಳಿ, ಉಪ್ಪರಪೇಟೆ, ಕದಿರಾಪುರ, ಬಚ್ಚಪ್ಪನಹಳ್ಳಿ, ಕೊರುಕೋನಪ್ಪಲ್ಲಿ, ಪಾತಕೋಟೆ, ಅಮಿಟಹಳ್ಳಿ, ಕೋರ್ಲಪರ್ತಿ, ಮುರುಗಮಲ್ಲ, ಬಟ್ಲಹಳ್ಳಿ, ಶೆಟ್ಟಹಳ್ಳಿ, ಜಿ.ಕೋಡಿಹಳ್ಳಿ, ಕೃಷ್ಣಮ್ಮನಹೊಸಹಳ್ಳಿ, ಹುಸ್ಮಾನ್ ಪುರ, ಮಲ್ಲಿಕಾಪುರ, ಶಿಂಗನಹಳ್ಳಿ, ವೈ.ಕುರುಪ್ಪಲ್ಲಿ, ಯಗವಕೋಟೆ ಗ್ರಾಮಗಳಲ್ಲಿ ಮುಂದೆ ‍ಜೀವಜಲದ ಸಮಸ್ಯೆ ತಲೆದೋರಬಹುದು ಎಂದು ಗುರುತಿಸಲಾಗಿದೆ. 

ನೀರಿನ ಸಮಸ್ಯೆ ಉದ್ಭವವಾಗಬಹುದು ಎಂದು ಗುರುತಿಸಲಾದ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳಿಂದ ನೀರು ಸರಬರಾಜು ಮಾಡುವ ಮಾಲೀಕರನ್ನು ಗುರುತಿಸಿ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರಸ್ತುತ ದೊರೆಯುತ್ತಿರುವ ನೀರು ಸ್ಥಗಿತಗೊಂಡರೆ ತಕ್ಷಣದಿಂದಲೇ ಅವರು ನೀರು ಸರಬರಾಜು ಮಾಡುತ್ತಾರೆ. ಕಾರ್ಯಪಡೆ ಯೋಜನೆಯಲ್ಲಿ ತಲಾ ₹25 ಲಕ್ಷದಂತೆ 2 ಕಂತುಗಳಲ್ಲಿ ₹50 ಲಕ್ಷ ಬಿಡುಗಡೆಯಾಗಿದೆ. ಬರಗಾಲದಲ್ಲಿ ಕುಡಿಯುವ ನೀರಿನ ಬವಣೆ ತಪ್ಪಿಸಿ ಸಮರ್ಪಕವಾಗಿ ನೀರು ಪೂರೈಸಲು ಸಮರೋಪಾದಿಯಲ್ಲಿ ಕೆಲಸ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

‘ಬವಣೆ ನೀಗಿಸಲು ಹಣದ ಕೊರತೆ ಇಲ್ಲ’
ನೀರಿನ ಸಮಸ್ಯೆ ಉಂಟಾಗದಂತೆ ಆಯಾ ಗ್ರಾಮ ಪಂಚಾಯಿತಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಜಿಲ್ಲಾ ಪಂಚಾಯಿತಿಯಿಂದಲೂ ಕಾಲ ಕಾಲಕ್ಕೆ ನೀರಿನ ಸಮಸ್ಯೆ ಕುರಿತು ಸ್ಪಂದನೆ ದೊರೆಯುತ್ತಿದೆ. ಪಿಡಿಒಗಳ ಸಭೆಗಳಲ್ಲೂ ಈ ಕುರಿತು ಸೂಚನೆ ನೀಡಲಾಗಿದೆ. ಸಮಸ್ಯಾತ್ಮಕ ಗ್ರಾಮಗಳಲ್ಲಿ ನೀರು ಸರಬರಾಜಿಗಾಗಿ ಖಾಸಗಿ ಕೊಳವೆಬಾವಿಗಳ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.  ಕಾರ್ಯಪಡೆಯ ತಹಶೀಲ್ದಾರ್ ಖಾತೆಯಲ್ಲಿ ₹50 ಲಕ್ಷ ಹಣವಿದೆ. ಕುಡಿಯುವ ನೀರಿನ ಪೂರೈಕೆಗೆ ಹಣದ ಕೊರತೆ ಇಲ್ಲ. ಒಟ್ಟಾರೆ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ನೀರಿನ ಸಮಸ್ಯೆ ಪರಿಹಾರಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.  ಎಸ್.ಆನಂದ್ ತಾ.ಪಂ.ಕಾರ್ಯನಿರ್ವಹಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT