ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿವಿಲಾಸಕ್ಕೆ ಎತ್ತಿನಹೊಳೆ ನೀರು: ಆಕ್ರೋಶ

ಹೊಸ ಬದಲಾವಣೆಗೆ ಸಂಬಂಧಿಸಿದ ‍ಪರಿಷ್ಕೃತ ಡಿಪಿಆರ್ ಸಾರ್ವಜನಿಕರ ಮುಂದಿಡುವಂತೆ ನೀರಾವರಿ ಹೋರಾಟಗಾರರ ಆಗ್ರಹ
Last Updated 2 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಲಸಂಪನ್ಮೂಲ ಇಲಾಖೆ ಎತ್ತಿನಹೊಳೆ ಯೋಜನೆಯಿಂದ ಲಭ್ಯವಾಗುವ ನೀರನ್ನು ಈ ವರ್ಷ ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಸಾಗರ ಜಲಾಶಯಕ್ಕೆ ಹರಿಸಲು ತಯಾರಿ ನಡೆಸಿರುವುದು ಯೋಜನೆಯ ಫಲಾನುಭವಿ ಜಿಲ್ಲೆಗಳಲ್ಲಿ ಒಂದಾದ ಚಿಕ್ಕಬಳ್ಳಾಪುರ ಜಿಲ್ಲೆಯ ನೀರಾವರಿ ಹೋರಾಟಗಾರರಲ್ಲಿ ಆಕ್ರೋಶ ಉಂಟು ಮಾಡಿದೆ.

ಬಯಲುಸೀಮೆಯ ಏಳು ಜಿಲ್ಲೆಗಳ ಜಲದಾಹ ನೀಗಿಸುವ ಉದ್ದೇಶದಿಂದ ಸುಮಾರು ಎಂಟು ವರ್ಷಗಳ ಹಿಂದೆ ರೂಪಿಸಿದ ಎತ್ತಿನಹೊಳೆ ಯೋಜನೆಗೆ ಸಂಬಂಧಪಟ್ಟಂತೆ ಜಿಲ್ಲೆಯಲ್ಲಿ ಈವರೆಗೆ ಒಂದೇ ಒಂದು ಇಂಚು ಭೂಸ್ವಾಧೀನ ಪ್ರಕ್ರಿಯೆಯಾಗಲಿ, ಒಂದೇ ಒಂದು ನಯಾಪೈಸೆ ಕಾಮಗಾರಿ ಕೂಡ ನಡೆದಿಲ್ಲ. ಇಂತಹ ಸಂದರ್ಭದಲ್ಲಿ ಯೋಜನೆಯ ‘ವಿಸ್ತೃತ ಯೋಜನಾ ವರದಿ’ಯಲ್ಲಿಯೇ (ಡಿಪಿಆರ್) ಇಲ್ಲದ ವಾಣಿವಿಲಾಸ ಸಾಗರ ಜಲಾಶಯಕ್ಕೆ ಹರಿಸಲು ಮುಂದಾಗಿರುವ ಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ತವಾಗುತ್ತಿದೆ.

‘ಎತ್ತಿನಹೊಳೆ ಯೋಜನೆಗೆ ಹಾಕಿದ ಪೈಪ್‌ಲೈನ್‌ ಮಾರ್ಗದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಗಳಿಗೆ ಏರ್‌ (ಗಾಳಿ) ತರಬಹುದೆ ವಿನಾ ನೀರು ತರಲು ಸಾಧ್ಯವಿಲ್ಲ’ ಎಂದು ಯೋಜನೆಯ ಆರಂಭದಿಂದಲೂ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಟಿ.ವಿ.ರಾಮಚಂದ್ರ ಅವರು ಪ್ರತಿಪಾದಿಸುತ್ತ ಬಂದಿದ್ದಾರೆ.

ಇದೇ ರೀತಿಯ ಸಂದೇಹ ವ್ಯಕ್ತಪಡಿಸುತ್ತ ಬಂದಿರುವ ಜಿಲ್ಲೆಯ ರಾಜಕಾರಣಿಗಳು, ನೀರಾವರಿ ಹೋರಾಟಗಾರರು ಜಿಲ್ಲೆ ಸಮರ್ಪಕವಾಗಿ ನೀರು ಹರಿಸಬೇಕಾದರೆ ಜಲತಜ್ಞ ಜಿ.ಎಸ್.ಪರಮಶಿವಯ್ಯ ಅವರ ವರದಿ ಅನುಷ್ಠಾನದ ಕಡೆಗೆ ಸರ್ಕಾರ ಗಮನ ಕೊಡಬೇಕು ಎಂದು ಆಗ್ರಹಿಸುತ್ತ ಬಂದಿದ್ದಾರೆ.

ಯೋಜನೆ ಕುರಿತಾದ ಅನುಮಾನಗಳನ್ನು ದೂರ ಮಾಡಿ, ಬಯಲು ಸೀಮೆ ಜಿಲ್ಲೆಗಳ ಜನರಲ್ಲಿ ವಿಶ್ವಾಸ ಮೂಡಿಸುವ ಉದ್ದೇಶದಿಂದಲೇ ಈ ಮಳೆಗಾಲದಲ್ಲೇ ವಾಣಿವಿಲಾಸ ಸಾಗರ ಜಲಾಶಯಕ್ಕೆ ಎತ್ತಿನಹೊಳೆ ನೀರು ಹರಿಸಲು ಯೋಜಿಸಲಾಗಿದೆ ಎಂದು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಸರ್ಕಾರದ ಈ ಕ್ರಮಕ್ಕೆ ಇದೀಗ ಹೋರಾಟಗಾರರು ‘ಇದು ಮತ್ತೊಂದು ಹೊಸ ನಾಟಕ’ ಎಂದು ಆರೋಪಿಸುತ್ತಿದ್ದಾರೆ.

‘ಎತ್ತಿನಹೊಳೆ ಯೋಜನೆಯ ಮೂಲ ಡಿಪಿಆರ್‌ನಲ್ಲಿ ವಾಣಿವಿಲಾಸ ಸಾಗರದ ಪ್ರಸ್ತಾಪವೇ ಇಲ್ಲ. ವಾಣಿವಿಲಾಸ ಸಾಗರ ಇರುವುದು ನಮ್ಮಷ್ಟೇ ಬರಪೀಡಿತವಾದ ಚಿತ್ರದುರ್ಗ ಜಿಲ್ಲೆಯಲ್ಲಿ. ಅಲ್ಲಿಗೆ ನೀರು ಹರಿಸಬೇಕಾದರೆ ಎತ್ತಿನಹೊಳೆ ಯೋಜನೆಯ ಇಡೀ ಡಿಪಿಆರ್ ಬದಲಾಯಿಸಬೇಕು. ಜನರ ಅನುಮಾನ ಪರಿಹರಿಸಬೇಕಾದವರು ಯೋಜನೆಯ ಉದ್ದೇಶಿತ 570 ಕೆರೆಗಳಿಗೆ ನೀರು ತುಂಬಿ ತೋರಿಸಬೇಕಿತ್ತು. ಅದನ್ನು ಬಿಟ್ಟು ಇದೀಗ ಮತ್ತೊಂದು ಹೊಸ ನಾಟಕ ಶುರು ಮಾಡಿದ್ದಾರೆ’ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

‘ಎತ್ತಿನಹೊಳೆಯಲ್ಲಿ ಸಿಗುವ ಅಲ್ಪಪ್ರಮಾಣದ ನೀರನ್ನು ಕಾಗದದ ಮೇಲೆ ಏಳು ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ. ಈ ಯೋಜನೆ ಅಡಿ ಯೋಜನೆಯ ಕಟ್ಟಕಡೆಯ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಒಂದೇ ಒಂದು ಹನಿ ನೀರೂ ಹರಿದುಬರಲಾರದು ಎಂದು 2010ರಲ್ಲೇ ಜಲ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ನೀರು ಹರಿಯದಿದ್ದರೂ ಚಿಂತೆಯಿಲ್ಲ ಪೈಪುಗಳನ್ನು ಹಾಕುವುದರಿಂದ ಕೋಟಿಗಟ್ಟಲೇ ಕಮಿಷನ್ ಬರಲಿ ಎಂದು ದುರಾಸೆಯಿಂದ ರಾಜಕಾರಣಿಗಳು ತೆಪ್ಪಗಿದ್ದಾರೆ. ಅದನ್ನು ಮರೆಮಾಚಲು ಸುಳ್ಳಿನ ಕಂತೆ ಪೋಣಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಕಳೆದ 10 ವರ್ಷಗಳಿಂದ ಎತ್ತಿನಹೊಳೆ ಯೋಜನೆಯ ಜಲವಿಜ್ಞಾನ ಅಧ್ಯಯನದ ದತ್ತಾಂಶವನ್ನು ಗುತ್ತಿಗೆದಾರರಿಗೆ ಸಹಕಾರಿಯಾಗುವಂತೆ ತಿರುಚುತ್ತ, ಯೋಜನೆಯ ಅಂದಾಜು ವೆಚ್ಚವನ್ನು ಮೇಲಿಂದ ಮೇಲೆ ಹೆಚ್ಚಿಸುತ್ತ ನೀರಿನ ಆಸೆ ತೋರಿಸುತ್ತಲೇ ಜನರನ್ನು ಮೂರ್ಖರನ್ನಾಗಿ ಕಾಣುತ್ತ ಬರುತ್ತಿದ್ದಾರೆ. ಈಗಲಾದರೂ ಎತ್ತಿನಹೊಳೆ ನೀರು ವಾಣಿವಿಲಾಸ ಸಾಗರಕ್ಕೆ ಹರಿಸಲು ರೂಪಿಸಿರುವ ಪರಿಷ್ಕೃತ ಪರಿಷ್ಕೃತ ಡಿಪಿಆರ್ ಸಾರ್ವಜನಿಕರ ಮುಂದೆ ಇಡಲಿ’ ಎಂದು ಆಗ್ರಹಿಸಿದರು.

‘ಅಧಿಕಾರಿಗಳು ಹೇಳುವಷ್ಟು ನೀರು ಎತ್ತಿನಹೊಳೆಯಲ್ಲಿ ಲಭ್ಯವಿಲ್ಲ. ಹೀಗಾಗಿ, ಯೋಜನೆಯ ಆರಂಭದ ದಿನದಿಂದಲೂ ನಾನು ಆ ನೀರು ನಮಗೆ ಬರುವುದಿಲ್ಲ ಎಂದೇ ಹೇಳುತ್ತಿರುವೆ. ಈಗಲೂ ಹೇಳುವೆ. ವಾಸ್ತವವೇ ಬೇರೆ, ನಂಬಿಸುವುದು ಬೇರೆ. ಇಂತಹ ಕಥೆಗಳನ್ನು ನಾವು ನಂಬುವುದಿಲ್ಲ’ ಎಂದು ಹಿರಿಯ ಹೋರಾಟಗಾರ ಜಿ.ವಿ.ಶ್ರೀರಾಮರೆಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT