ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು: ದೇವರಿಗೆ ಹಣ ನೀಡದ ಕಾರಣ ಶವಸಂಸ್ಕಾರಕ್ಕೆ ಅಡ್ಡಿ!

₹6 ಸಾವಿರ ಸಾಲ ಮಾಡಿ ದೇವಸ್ಥಾನಕ್ಕೆ ದೇಣಿಗೆ ಕೊಟ್ಟ ಕುಟುಂಬ
Published 28 ಏಪ್ರಿಲ್ 2024, 16:32 IST
Last Updated 28 ಏಪ್ರಿಲ್ 2024, 16:32 IST
ಅಕ್ಷರ ಗಾತ್ರ

ಗೌರಿಬಿದನೂರು (ಚಿಕ್ಕಬಳ್ಳಾಪುರ): ದೇವರಿಗೆ ₹25 ಸಾವಿರ ದೇಣಿಗೆ ಹಣ ನೀಡಲಿಲ್ಲ ಎಂದು ಪರಿಶಿಷ್ಟ ಮಹಿಳೆಯ ಶವಸಂಸ್ಕಾರಕ್ಕೆ ಅವಕಾಶ ನೀಡದ ಅಮಾನವೀಯ ‍ಘಟನೆಯೊಂದು ಭಾನುವಾರ ಪಟ್ಟಣದಲ್ಲಿ ನಡೆದಿದೆ.

ಮೃತ ಮಹಿಳೆಯ ಸಂಬಂಧಿಕರು ₹6 ಸಾವಿರ ಸಾಲ ತಂದು ದೇವಸ್ಥಾನಕ್ಕೆ ಒಪ್ಪಿಸಿದ ನಂತರವಷ್ಟೇ ಸಮುದಾಯದ ಮುಖಂಡರು ಶವ ಸಂಸ್ಕಾರಕ್ಕೆ ಅವಕಾಶ ನೀಡಿದ್ದಾರೆ.

ಗೌರಿಬಿದನೂರು ಪಟ್ಟಣದ 26ನೇ ವಾರ್ಡ್‌ ಗೊಟಕನಾಪುರದಲ್ಲಿ ಭಾನುವಾರ ಆದಿ ಕರ್ನಾಟಕ ಸಮುದಾಯದ ಹನುಮಕ್ಕ ಮೃತಪಟ್ಟಿದ್ದರು. ಶವ ಸಂಸ್ಕಾರ ನಡೆಸಲು ಸಂಪ್ರದಾಯದಂತೆ ಗೊಟಕನಾಪುರದ ದೇವತೆ ಸತ್ಯಮ್ಮ ದೇವಸ್ಥಾನಕ್ಕೆ ₹25 ಸಾವಿರ ದೇಣಿಗೆ ನೀಡಬೇಕು. ಇಲ್ಲದಿದ್ದರೆ ಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಮುದಾಯದ ಹಿರಿಯರು ಹೇಳಿದರು.

ತಮ್ಮ ಬಳಿ ಹಣ ಇಲ್ಲ ಎಂದು ಹನುಮಕ್ಕನ ಕುಟುಂಬದವರು ಪರಿಪರಿಯಾಗಿ ಬೇಡಿಕೊಂಡರು ಸಮುದಾಯದ ಮುಖಂಡರು ಸೊಪ್ಪು ಹಾಕಲಿಲ್ಲ. ಇದರಿಂದ ಮಧ್ಯಾಹ್ನ 12ರವರೆಗೂ ಶವ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡಲಿಲ್ಲ.

ಕೊನೆಗೆ ಕುಟುಂಬದವರು ಕಷ್ಟಪಟ್ಟು ₹6 ಸಾವಿರ ಹೊಂದಿಸಿ ಸತ್ಯಮ್ಮ ದೇವಸ್ಥಾನಕ್ಕೆ ದೇಣಿಗೆ ನೀಡಿದರು. ಆ ನಂತರವಷ್ಟೇ ಸಮುದಾಯ ಮುಖಂಡರು ಸಂಸ್ಕಾರಕ್ಕೆ ಅವಕಾಶ ಮಾಡಿಕೊಟ್ಟರು.

ಆದಿ ಕರ್ನಾಟಕ ಜನಾಂಗದಲ್ಲಿ ಯಾರೇ ಮರಣ ಹೊಂದಿದರೂ ಗೊಟಕನಾಪುರದ ಸತ್ಯಮ್ಮ ದೇವಿಯ ದೇವಸ್ಥಾನಕ್ಕೆ ಹಣ ಸಂದಾಯ ಮಾಡಬೇಕು. ನಂತರ ಸಮುದಾಯದ ಎಲ್ಲರೂ ಸಂಸ್ಕಾರದಲ್ಲಿ ಭಾಗವಹಿಸುತ್ತಾರೆ. ಈ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.  

‘ಮೊದಲಿನಿಂದಲೂ ನಾವು ಒಗ್ಗಟ್ಟಾಗಿ ಇದ್ದೇವೆ. ಒಬ್ಬೊರನ್ನೊಬ್ಬರು ಬಿಟ್ಟುಕೊಡಬಾರದು ಎನ್ನುವ ಕಾರಣಕ್ಕೆ ಆದಿ ಕರ್ನಾಟಕ ಸಂಘ ಮಾಡಿಕೊಂಡಿದ್ದೇವೆ. ನೂರು ವರ್ಷದಿಂದ ನಾವು ಇದೇ ರೀತಿ, ರಿವಾಜು ಪಾಲಿಸಿಕೊಂಡು ಬಂದಿದ್ದೇವೆ. ದೇವಸ್ಥಾನಕ್ಕೆ ಚಂದಾ ಕೊಡದಿದ್ದರೆ ಹೇಗೆ’ ಎಂದು ಆದಿ ಕರ್ನಾಟಕ ಸಂಘದ ಮುಖಂಡ ಗಂಗಯ್ಯ ಪ್ರಶ್ನಿಸಿದ್ದಾರೆ.

‘ಮೂಢನಂಬಿಕೆ ಇನ್ನೂ ಜೀವಂತವಾಗಿದೆ. ಗ್ರಾಮದಲ್ಲಿ ಹಣ ಇರುವವರೂ ಇರುತ್ತಾರೆ, ಇಲ್ಲದಿರುವವರೂ ಇರುತ್ತಾರೆ. ಮೂಢನಂಬಿಕೆಗಳ ಬಗ್ಗೆ ಇಂದಿಗೂ ಅರಿವು ಬರಲಿಲ್ಲ ಎಂದರೆ ಹೇಗೆ?’ ಎಂದು ಮೃತ ಹನುಮಕ್ಕನ ಪುತ್ರಿ ಮಂಜುಳಾ ‘ಪ್ರಜಾವಾಣಿ’ ಜೊತೆ ಅಳಲು ತೋಡಿಕೊಂಡರು.

‘ಸಂಬಂಧಪಟ್ಟ ಅಧಿಕಾರಿಗಳು, ಸಂಘ ಸಂಸ್ಥೆಗಳು ಇಂತಹ ಮೂಢನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸಬೇಕು. ಇಂತಹ ಸಂಪ್ರದಾಯದಿಂದ ಬಡವರು ಕಷ್ಟ ಅನುಭವಿಸಬೇಕಾಗುತ್ತದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT