ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಝೀಕಾ ವೈರಸ್; ಆತಂಕ ಬೇಡ: ಶಾಸಕ ಬಿ.ಎನ್.ರವಿಕುಮಾರ್

ರೋಗ ಬರದಂತೆ ಕಡಿವಾಣ ಹಾಕಲು ಕ್ರಮ
Published 3 ನವೆಂಬರ್ 2023, 13:10 IST
Last Updated 3 ನವೆಂಬರ್ 2023, 13:10 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ರಾಜ್ಯದಲ್ಲಿಯೇ ಪ್ರಥಮ ಬಾರಿ ಝೀಕಾ ವೈರಸ್ ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟದಲ್ಲಿನ ಸೊಳ್ಳೆಯೊಂದರಲ್ಲಿ ಕಂಡು ಬಂದಿದೆ. ಈ ಬಗ್ಗೆ ಯಾರೂ ಆತಂಕಪಡಬಾರದು. ರೋಗ ಬರದಂತೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಥಳೀಯ ಜನರಿಗೆ ಅರಿವು ಮೂಡಿಸಿ ಕಾರ್ಯತತ್ಪರರಾಗಬೇಕಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ಹೇಳಿದರು.

ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಎಲ್ಲ ಗ್ರಾಮ ಪಂಚಾಯಿತಿಗಳ ಪಿಡಿಒಗಳು ಅಲ್ಲಿನ ಸ್ಥಳೀಯ ಜನಪ್ರತಿನಿಧಿಗಳ ಜತೆ ಸಮಾಲೋಚಿಸಿ, ಸಮರೋಪಾದಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕೆಂದು ತಾಲ್ಲೂಕು ಪಂಚಾಯಿತಿ ಇಒ ಮೂಲಕ ತಿಳಿಸಲಾಗಿದೆ. ನಗರಸಭೆ ಆಯುಕ್ತರು ನಗರದಲ್ಲಿ ಸ್ವಚ್ಛತೆ, ಧೂಮೀಕರಣ ಕ್ರಮಗಳ ಮೂಲಕ ಸೊಳ್ಳೆ ಹರಡದಂತೆ ಕ್ರಮವಹಿಸಬೇಕು ಎಂದರು.

ವೈದ್ಯರು ಹಾಗೂ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ತಂಡಗಳನ್ನು ರಚಿಸಿ ಮನೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಬೇಕು. ಕೀಟ ತಜ್ಞರು ಸೊಳ್ಳೆಯಲ್ಲಿ ಈ ವೈರಸ್ ಕಂಡುಬಂದಿರುವುದಾಗಿ ತಿಳಿಸಿದ್ದಾರೆ. ಅದು ಮನುಷ್ಯರಿಗೆ ಹರಡದಂತೆ ಮಾಡಲು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮನೆಗಳ ಬಳಿ ಸೊಳ್ಳೆ ಉತ್ಪತ್ತಿ ಆಗದಂತೆ ನೋಡಿಕೊಳ್ಳಬೇಕು. ಮಕ್ಕಳು ಇರುವಲ್ಲಿ ಹೆಚ್ಚು ನಿಗಾವಣೆ ಅಗತ್ಯ ಎಂದರು.

ಸರ್ಕಾರಿ ಶಾಲೆ, ವಸತಿ ಶಾಲೆಗಳಲ್ಲಿ ಸ್ವಚ್ಛತೆ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ಗಮನಿಸಬೇಕು. ಕ್ಷೇತ್ರದ 344 ಅಂಗನವಾಡಿ ಕೇಂದ್ರಗಳಲ್ಲಿ ಸ್ವಚ್ಛತೆಯಿರುವ ಬಗ್ಗೆ ಸಿಡಿಪಿಒ ಹಾಗೂ ಸಿಬ್ಬಂದಿ ಕ್ರಮ ವಹಿಸಬೇಕು ಎಂದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ಝೀಕಾ ವೈರಸ್ ಕಾಯಿಲೆ ಸೊಳ್ಳೆಗಳ ಮೂಲಕ ವಾಹಕಗಳಾಗಿ ಹರಡುತ್ತದೆ. ಈ ಈಡಿಸ್ ಸೊಳ್ಳೆಗಳು ಮನುಷ್ಯರನ್ನು ಕಚ್ಚಿದಾಗ ವೈರಸ್ ಮನುಷ್ಯರಿಗೆ ಹರಡುತ್ತದೆ. ಸೊಳ್ಳೆಗಳು ಹಗಲಿನಲ್ಲಿ ಕಚ್ಚುತ್ತವೆ. ಡೆಂಗಿ, ಚಿಕೂನ್‌ ಗುನ್ಯಾ ಮತ್ತು ಹಳದಿ ಜ್ವರವನ್ನು ಹರಡುವ ಸೊಳ್ಳೆಯೂ ಸಹ ಈಡಿಸ್‌ ಈಜಿಪ್ಟಿ. ತಲಕಾಲಬೆಟ್ಟ ಹಾಗೂ ಸುತ್ತಲಿನ ಐದೂ ಹಳ್ಳಿಗಳ ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡಿಸಲಾಗುತ್ತಿದೆ. ಶುಕ್ರವಾರ ಹತ್ತು  ಗರ್ಭಿಣಿಯರನ್ನು ಶಿಡ್ಲಘಟ್ಟಕ್ಕೆ ಕರೆತಂದು ಸ್ಕ್ಯಾನಿಂಗ್ ಮಾಡಿಸಿದ್ದೇವೆ ಎಂದರು.

ಸೊಳ್ಳೆಗಳಿಂದ ಈ ವೈರಸ್ ಹರಡದಂತೆ ಮುಂಜಾಗ್ರತೆ ವಹಿಸುವುದೇ ಇದನ್ನು ತಡೆಯುವ ವಿಧಾನ ಎಂದರು.

ವಿದ್ಯಾರ್ಥಿನಿಲಯಗಳಲ್ಲಿನ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರ ತಂಡಗಳನ್ನು ರಚಿಸಿದ್ದು, ಪ್ರತಿನಿತ್ಯ ಒಂದೊಂದು ತಂಡವೂ ಕನಿಷ್ಠ 50 ಮನೆಗಳಲ್ಲಿ ಆರೋಗ್ಯ ತಪಾಸಣೆ ನಡೆಸಿವೆ. ಜ್ವರದ ಲಕ್ಷಣಗಳು ಕಂಡುಬಂದರೆ ತಕ್ಷಣವೇ ರಕ್ತವನ್ನು ಪಡೆದು ಪರೀಕ್ಷೆಗೆ ಕಳುಹಿಸುತ್ತೇವೆ. ಆದರೆ ಸದ್ಯಕ್ಕೆ ಈ ಭಾಗದಲ್ಲಿ ಹೊಸ ಜ್ವರ ಪ್ರಕರಣಗಳಿಲ್ಲ. ಧೂಮೀಕರಣ, ತೊಟ್ಟಿ ಬ್ಯಾರೆಲ್ ಡ್ರಮ್ಮುಗಳಲ್ಲಿ ನೀರು ಬದಲಾಯಿಸುವಿಕೆ, ಲಾರ್ವ ತಿನ್ನುವ ಸೊಳ್ಳೆಗಳನ್ನು ಬಿಡುಗಡೆ ಮಾಡುವ ಕ್ರಮಗಳನ್ನು ಕೈಗೊಂಡಿರುವುದಾಗಿ ಹೇಳಿದರು.

ತಾಲ್ಲೂಕು ಪಂಚಾಯಿತಿ ಇಒ ಎಸ್.ನಾರಾಯಣ್, ನಗರಸಭೆ ಆಯುಕ್ತ ಮಂಜುನಾಥ್, ಬಂಕ್ ಮುನಿಯಪ್ಪ, ತಾದೂರು ರಘು, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆಯ ಜಗದೀಶ್, ಸಿಡಿಪಿಒ ನವತಾಜ್ ಇದ್ದರು.

ಸ್ಕ್ಯಾನಿಂಗ್: ತಲಕಾಯಲಬೆಟ್ಟ (6), ಟಿ.ವೆಂಕಟಾಪುರ (3), ದಿಬ್ಬೂರಹಳ್ಳಿ (1) ಒಟ್ಟು 10 ಗರ್ಭಿಣಿಯರನ್ನು ಆಸ್ಪತ್ರೆಯ ವಾಹನದಲ್ಲಿ ಕರೆತಂದು ಶುಕ್ರವಾರ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಲಾಯಿತು.

ಎಚ್ಚರಿಕೆ: ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ತಲಕಾಯಲಬೆಟ್ಟ ವ್ಯಾಪ್ತಿಯ ಹಳ್ಳಿಗಳಲ್ಲಿ ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಮತ್ತು ಸಮುದಾಯ ಆರೋಗ್ಯಾಧಿಕಾರಿಗಳು ನಡೆಸುತ್ತಿರುವ ಲಾರ್ವಾ ಸಮೀಕ್ಷೆ ಮತ್ತು ಜ್ವರ ಸಮೀಕ್ಷೆ ಕಾರ್ಯವನ್ನು ಅಡ್ಡ ಪರಿಶೀಲನೆ (ಕ್ರಾಸ್ ಚೆಕ್) ಮಾಡಿ ವರದಿ ಸಲ್ಲಿಸಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಸೂಚನೆ ನೀಡಿದ್ದಾರೆ.

ಆರೋಗ್ಯಾಧಿಕಾರಿ ಅಥವಾ ಮೇಲಧಿಕಾರಿಗಳು ಭೇಟಿ ನೀಡಿದಾಗ ಲಾರ್ವಾ ಕಂಡುಬಂದಲ್ಲಿ ಸಂಬಂಧಪಟ್ಟ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮತ್ತು ಸಮುದಾಯ ಆರೋಗ್ಯಾಧಿಕಾರಿ ನೇರ ಹೊಣೆಯಾಗುತ್ತೀರಿ ಎಂದು ಎಚ್ಚರಿಕೆ ನೀಡಿದರು.

ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಆರೋಗ್ಯ ಕೇಂದ್ರದಿಂದ ಗರ್ಭಿಣಿಯರನ್ನು ಸ್ಕ್ಯಾನಿಂಗ್‌ಗೆ ನಗರದ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು
ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಆರೋಗ್ಯ ಕೇಂದ್ರದಿಂದ ಗರ್ಭಿಣಿಯರನ್ನು ಸ್ಕ್ಯಾನಿಂಗ್‌ಗೆ ನಗರದ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು

ತಲಕಾಯಲಬೆಟ್ಟ ಗ್ರಾಮಕ್ಕೆ ಶಾಸಕ ಭೇಟಿ

ತಲಕಾಯಲಬೆಟ್ಟ ಗ್ರಾಮದಲ್ಲಿ ಸೊಳ್ಳೆಯಲ್ಲಿ ಝೀಕಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಶುಕ್ರವಾರ ತಲಕಾಯಲಬೆಟ್ಟ ಗ್ರಾಮಕ್ಕೆ ಶಾಸಕ ರವಿಕುಮಾರ್ ಭೇಟಿ ನೀಡಿದರು. ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿ ತಲಕಾಯಲಬೆಟ್ಟ ವಡ್ಡಹಳ್ಳಿ ಬಚ್ಚನಹಳ್ಳಿ ದಿಬ್ಬೂರಹಳ್ಳಿ ಟಿ.ವೆಂಕಡಾಪುರ ಗ್ರಾಮಗಳಲ್ಲಿ ಪಂಚಾಯಿತಿಯಿಂದ ಫಾಗಿಂಗ್ ಮಾಡುವಂತೆ ತಿಳಿಸಿದರು. ಗರ್ಭಿಣಿಯರು ಪುಟ್ಟ ಮಕ್ಕಳು ಹಾಗೂ ಶಾಲೆಗೆ ಹೋಗುವ ಮಕ್ಕಳಿರುವ ಮನೆಗಳಿಗೆ ಆರೋಗ್ಯ ಸಿಬ್ಬಂದಿ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಬೇಕು. ಯಾರಿಗೇ ಜ್ವರ ಬಂದರೂ ತಕ್ಷಣ ಪರೀಕ್ಷಿಸಿಕೊಳ್ಳಿ ಎಂದು ಹೇಳಿದರು. ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆ ಸಿಬ್ಬಂದಿ ತಾವು ಕೈಗೊಂಡ ಕ್ರಮದ ಬಗ್ಗೆ ಶಾಸಕರಿಗೆ ವಿವರಿಸಿದರು. ಗ್ರಾಮಸ್ಥರು ಸ್ವಚ್ಛತೆ ಶುದ್ಧ ಕುಡಿಯುವ ನೀರು ಮತ್ತು ಬೀದಿ ದೀಪಗಳ ಸಮಸ್ಯೆಗಳ ಬಗ್ಗೆ ಶಾಸಕರಿಗೆ ತಿಳಿಸಿದಾಗ ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ತಾಲ್ಲೂಕು ಪಂಚಾಯಿತಿ ಇಒ ಅವರಿಗೆ ಶಾಸಕರು ಸೂಚಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ್ ಕುಮಾರ್ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT