ಶುಕ್ರವಾರ, ಮಾರ್ಚ್ 24, 2023
22 °C
ಭವಿಷ್ಯ ಭದ್ರಕ್ಕೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯ ಮೇಲೆ ದೃಷ್ಟಿ

ಬೆಂಬಲಿಗರ ಕಣಕ್ಕಿಳಿಸಲು ಸಮಾಜ ಸೇವಕರ ಸಿದ್ಧತೆ?

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಗೌರಿಬಿದನೂರು, ಚಿಂತಾಮಣಿ ಮತ್ತು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ 2023ರ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಸಮಾಜ ಸೇವೆ ಹೆಸರಿನಲ್ಲಿ ಹಲವು ಮುಖಂಡರು ಕಾರ್ಯತತ್ಪರರಾಗಿದ್ದಾರೆ.

ಕೋವಿಡ್‌ನ ಸಂದರ್ಭದಲ್ಲಿ ದಿನಸಿ ಕಿಟ್ ವಿತರಣೆ, ಆಂಬುಲೆನ್ಸ್ ಸೇವೆ, ಮುಂಗಾರು ಚಟುವಟಿಕೆ ಹಿನ್ನೆಲೆಯಲ್ಲಿ ರೈತರಿಗೆ ಉಚಿತವಾಗಿ ಉಳುಮೆಗೆ ಟ್ರಾಕ್ಟರ್ ಕೊಡುಗೆ...ಹೀಗೆ ವಿವಿಧ ಕಾರ್ಯಗಳಲ್ಲಿ ತೊಡಗಿದ್ದಾರೆ.

ಈ ನಡುವೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯ ಮೀಸಲಾತಿ ಸಹ ಪ್ರಕಟವಾಗಿದೆ. ಮೀಸಲಾತಿ ಪ್ರಕಟವಾಗಿರುವುದು ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಆಂತರಿಕ ಮತ್ತು ಬಹಿರಂಗವಾಗಿ ಮುಖಂಡರು ಮತ್ತು ಕಾರ್ಯಕರ್ತರ ನಡುವೆ ಹುರುಪು ಸಹ ಹೆಚ್ಚಿಸಿದೆ.

ಸಮಾಜ ಸೇವಕರು ಬೆಂಬಲಿಗರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳಬೇಕಾದ ಅಥವಾ ತಮ್ಮ ಶಕ್ತಿ ತೋರಬೇಕಾದ ಸಮಯ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಮೂಲಕ ಎದುರಾಗಿದೆ. ಕೆಲವು ಸಮಾಜ ಸೇವಕರು ಈಗಾಗಲೇ ಬೆಂಬಲಿಗರನ್ನು ಕಣಕ್ಕಿಳಿಸಲು ಸಿದ್ಧತೆಗಳನ್ನು ಆರಂಭಿಸಿದ್ದಾರೆ.

ಈ ಎರಡೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾಜ ಸೇವಕರು ತಮ್ಮ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳಲು ಸೂಕ್ತವಾಗಿ ಒದಗಿಬಂದಿದೆ. ಅಲ್ಲದೆ ಇಲ್ಲಿಯವರೆಗೂ ತಾವು ಮಾಡಿರುವ ಸಮಾಜ ಸೇವೆ ಮತ್ತು ಹೂಡಿಕೆಯ ಫಲಿತಾಂಶಕ್ಕೂ ವೇದಿಕೆಯಾಗಿದೆ.

ಕೆಎಚ್‌ಪಿ ಫೌಂಡೇಶನ್ ಮೂಲಕ ಸೇವಾ ಚಟುವಟಿಕೆಯಲ್ಲಿ ತೊಡಗಿರುವ ಕೆ.ಎಚ್‌.ಪುಟ್ಟಸ್ವಾಮಿ ಗೌಡ ಅವರು ಈಗಾಗಲೇ ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ತಮ್ಮದೇ ಆದ ಬೆಂಬಲಿಗರ ಪಡೆ ಕಟ್ಟಿದ್ದಾರೆ. ಕಾಂಗ್ರೆಸ್, ಜೆಡಿಎಸ್‌ ಮತ್ತು ಬಿಜೆಪಿಯಲ್ಲಿದ್ದ  ಹಲವು ನಾಯಕರನ್ನು ಬೆಂಬಲಿಗರನ್ನಾಗಿಸಿಕೊಂಡಿದ್ದಾರೆ. ಉದ್ಯಮದ ಮೂಲಕ ತಾಲ್ಲೂಕು ಪ್ರವೇಶಿಸಿದ ಕೆ.ಎಚ್.ಪುಟ್ಟಸ್ವಾಮಿ ಅವರು ಗೌರಿಬಿದನೂರಿನಲ್ಲಿ ಸಕ್ರಿಯ ನಾಯಕರಾಗಿದ್ದಾರೆ.

ಗೌರಿಬಿದನೂರು ತಾಲ್ಲೂಕಿನಲ್ಲಿ ಬೆಂಗಳೂರಿನ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಕೆಂಪರಾಜು, ಕೆ.ಆರ್.ಸ್ವಾಮಿ ವಿವೇಕಾನಂದ ಫೌಂಡೇಶನ್‌ ಮೂಲಕ ಒಂದೂವರೆ ವರ್ಷದಿಂದ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಕೆಂಪರಾಜು ಸಹ ವಿಧಾನಸಭಾ ಚುನಾವಣೆಯ ಮೇಲೆ ದೃಷ್ಟಿಯನ್ನು ಇಟ್ಟವರು. ಈ ಇಬ್ಬರು ನಾಯಕರು ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿಯೂ ಬೆಂಬಲಿಗರನ್ನು ಕಣಕ್ಕಿಳಿಸಿದ್ದರು.

ಎಬಿಡಿ ಟ್ರಸ್ಟ್ ಮೂಲಕ ಶಿಡ್ಲಘಟ್ಟ ತಾಲ್ಲೂಕಿನ ಹಳ್ಳಿಹಳ್ಳಿಗಳಲ್ಲಿಯೇ ಆಹಾರದ ಕಿಟ್ ಹಂಚುತ್ತಿರುವ ರಾಜೀವ್‌ಗೌಡ ಸಹ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಯ ಆಸಕ್ತಿ ಹೊಂದಿದ್ದಾರೆ ಎನ್ನುವ ಸುದ್ದಿ ಕ್ಷೇತ್ರದಲ್ಲಿ ವ್ಯಾಪಕವಾಗಿಯೇ ಇದೆ. ಆರಂಭದಿಂದಲೂ ಚುನಾವಣಾ ರಾಜಕೀಯವನ್ನು ರಾಜೀವ್‌ಗೌಡ ನಿರಾಕರಿಸುತ್ತಿದ್ದಾರೆ.

ಎಸ್‌.ಎನ್‌.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜನಪ್ಪ ಪುಟ್ಟು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿಡ್ಲಘಟ್ಟ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ಗೆ ಪ್ರಯತ್ನಿಸಿ ವಿಫಲರಾಗಿದ್ದರು. ಪಕ್ಷೇತರವಾಗಿ ಸ್ಪರ್ಧಿಸಿ 10 ಸಾವಿರ ಮತಗಳನ್ನು ಪಡೆದಿದ್ದರು. ಕೋವಿಡ್‌ ಸಂದರ್ಭದಲ್ಲಿ ಅವರೂ ಸಹ ದಿನಸಿ ಕಿಟ್ ಹಂಚಿಕೆದ್ದಾರೆ. ಕೈ ಬಿಚ್ಚಿ ಕೊಡುಗೆಯನ್ನು ಉದಾರವಾಗಿ ನೀಡಿದ್ದಾರೆ.

ಚಿಂತಾಮಣಿ ತಾಲ್ಲೂಕಿನಲ್ಲಿ ಕೆ.ಎಂ.ಕೆ ಟ್ರಸ್ಟ್ ಮೂಲಕ ಜಿ.ಎನ್.ವೇಣುಗೋಪಾಲ್ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ದೇವನಹಳ್ಳಿಯವರಾದ ವೇಣುಗೋಪಾಲ್ ಗ್ರಾಮಗಳಲ್ಲಿ ದಿನಸಿ ಕಿಟ್‌ಗಳನ್ನು ವಿತರಿಸುತ್ತಿದ್ದಾರೆ. ಸಮಾಜ ಸೇವೆಯ ಮೂಲಕ ರಾಜಕೀಯ ಪ್ರವೇಶಿಸಿ ಯಶಸ್ಸು ಸಾಧಿಸಬಹುದು ಎನ್ನುವುದು ಈಗಾಗಲೇ ಈ ಕ್ಷೇತ್ರದಲ್ಲಿ ಸಾಬೀತಾಗಿದೆ. ಶಾಸಕ ಎಂ.ಕೃಷ್ಣಾರೆಡ್ಡಿ ಅವರು ಇಲ್ಲಿಗೆ ಸಮಾಜ ಸೇವಕರಾಗಿಯೇ ಪ್ರವೇಶ ಪಡೆದಿದ್ದರು.

ಇವರಲ್ಲಿ ಯಾರು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ಬೆಂಗಲಿಗರನ್ನು ಕಣಕ್ಕಿಳಿಸುವರು, ಯಾರು ಅಭ್ಯರ್ಥಿ ಆಗಬಹುದು  ಎನ್ನುವುದು ಆಯಾ ಕ್ಷೇತ್ರದಲ್ಲಿ ಈಗ ಚರ್ಚೆಯ ವಿಷಯವೂ ಆಗಿದೆ.

ಚುನಾವಣೆಯ ದಿನಾಂಕ ಪ್ರಕಟವಾದ ತರುವಾಯ ಸಮಾಜ ಸೇವಕರು ತಮ್ಮ ಬೆಂಬಲಿಗರ ಮೂಲಕ ಚುನಾವಣಾ ಕಣವನ್ನು ರಂಗೇರಿಸುವ ಸಾಧ್ಯತೆ ದಟ್ಟವಾಗಿದೆ. ವಿವಿಧ ಪಕ್ಷಗಳಲ್ಲಿ ಟಿಕೆಟ್ ವಂಚಿತರು, ಅಸಮಾಧಾನಿತರು ಸಹ ಇವರ ತೆಕ್ಕೆ ಸೇರುವ ಸಾಧ್ಯತೆ ಸಹ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.