ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಪಂ: ಕಮಲ ಅರಳಿಸಲು ತಾಲೀಮು

ಚುನಾವಣೆ ಘೋಷಣೆಗೆ ಮುನ್ನವೇ ಅನ್ಯಪಕ್ಷಗಳ ಮುಖಂಡರಿಗೆ ಗಾಳ?
Last Updated 6 ಮಾರ್ಚ್ 2021, 3:26 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯಿತಿ ಚುನಾವಣೆ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಆದರೆ ಕಮಲ ಪಾಳಯದಲ್ಲಿ ಈಗಾಗಲೇ ಆಂತರಿಕವಾಗಿ ಚಟುವಟಿಕೆಗಳು ಗರಿಗೆದರಿವೆ. ಈ ಬಾರಿ ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿಯ ಕಮಲದ ಬಾವುಟ ಹಾರಿಸಲು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಪ್ರಮುಖವಾಗಿ ದೃಷ್ಟಿ ನೆಟ್ಟಿದ್ದಾರೆ. ಈ ಚುನಾವಣೆಯಲ್ಲಿ ಆ ಪಕ್ಷದ ದಂಡನಾಯಕರೂ ಅವರೇ.

28 ಸದಸ್ಯ ಬಲದ ಜಿಲ್ಲಾ ಪಂಚಾಯಿತಿ ಈಗ 31 ಸ್ಥಾನಕ್ಕೆ ಹೆಚ್ಚಿದೆ. ಸದ್ಯ 21 ಕಾಂಗ್ರೆಸ್‌ ಸದಸ್ಯರು, 5 ಜೆಡಿಎಸ್‌, ಬಿಜೆಪಿ ಮತ್ತು ಸಿಪಿಎಂನ ತಲಾ ಒಬ್ಬ ಸದಸ್ಯರು ಇದ್ದಾರೆ.

ಈ ಹಿಂದಿನ ಚುನಾವಣೆಗಳಲ್ಲಿ ಬಿಜೆಪಿಯಲ್ಲಿ ಜಿಲ್ಲಾ ಮಟ್ಟದಲ್ಲಿ ನಾಯಕತ್ವದ ಕೊರತೆ ಕಾಡುತ್ತಿತ್ತು. ಸಂಘಟನೆ, ಸಂಪನ್ಮೂಲದ ಕೊರತೆಯ ಕಾರಣ ಬಿಜೆಪಿ ತಳವೂರಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಸಂಘಟನೆ ಮತ್ತು ಸಂಪನ್ಮೂಲದಲ್ಲಿಯೂ ಪಕ್ಷ ಪ್ರಬಲವಾಗಿದೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತರು ಹೆಚ್ಚು ಸ್ಥಾನಗಳಲ್ಲಿ ಅಧಿಕಾರ ಹಿಡಿದಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನು ಅವಲೋಕಿಸಿದರೆ ಈ ಹಿಂದಿನ ಚುನಾವಣೆಗಳಿಗಿಂತ ಈ ಬಾರಿ ಕಮಲ ಪುಟಿಯುವ ಲಕ್ಷಣಗಳಿವೆ.

ಅನ್ಯಪಕ್ಷದವರಿಗೆ ಗಾಳ: ಚಿಕ್ಕಬಳ್ಳಾಪುರ ಹೊರತುಪಡಿಸಿ ಉಳಿದ ತಾಲ್ಲೂಕುಗಳ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ಸಮರ್ಥ ಅಭ್ಯರ್ಥಿಗಳ ಕೊರತೆ ಇದೆ. ಈ ಕ್ಷೇತ್ರಗಳಲ್ಲಿ ಅನ್ಯಪಕ್ಷಗಳ ಪ್ರಬಲ ನಾಯಕರನ್ನು ಸೆಳೆದು ಅವರಿಗೆ ಟಿಕೆಟ್ ನೀಡುವ ಚಿಂತನೆ ಬಿಜೆಪಿಯಲ್ಲಿ ಇದೆ. ಟಿಕೆಟ್ ಪಡೆಯುವ ಉದ್ದೇಶದಿಂದಲೇ ಕೆಲವು ಮುಖಂಡರು ಜೆಡಿಎಸ್ ಮತ್ತು ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಮೀಸಲಾತಿ ಘೋಷಣೆಯಾದ ತರುವಾಯ ಈ ಆಪರೇಷನ್ ಕಮಲ ಗರಿಗೆದರುವುದು ಪಕ್ಕ. ಈ ಎಲ್ಲ ಕಾರಣಗಳು ಬಿಜೆಪಿಯ ಬಲವನ್ನು ಹೆಚ್ಚಿಸಲು ಪೂರಕವಾಗಿವೆ.

ಹೆಚ್ಚಿನ ಸ್ಥಾನಗಳಲ್ಲಿ ಗೆಲುವು: ’ಜೆಡಿಎಸ್ ಮತ್ತು ಕಾಂಗ್ರೆಸ್‌ ಕಾಯಕರ್ತರು ಬಿಜೆಪಿಗೆ ಹೆಚ್ಚಿನ ಸಂಖ್ಯೆಯಲ್ಲಿಯೇ ಸೇರುತ್ತಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿಯೂ ಗರಿಷ್ಠ ಸಂಖ್ಯೆಯ ಸ್ಥಾನಗಳನ್ನು ಗೆದ್ದಿದ್ದೇವೆ. ಈ ಎಲ್ಲ ದೃಷ್ಟಿಯಿಂದ ಈ ಬಾರಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುತ್ತೇವೆ‘ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ರಾಮಲಿಂಗಪ್ಪ ’ಪ್ರಜಾವಾಣಿ‘ಗೆ ತಿಳಿಸಿದರು.

ಚಿಕ್ಕಬಳ್ಳಾಪುರ, ಗೌರಿಬಿದನೂರು, ಚಿಂತಾಮಣಿಯಲ್ಲಿ ಬಿಜೆಪಿ ಪರವಾದ ಒಲವುಗಳು ಹೆಚ್ಚಿದೆ. ಶಿಡ್ಲಘಟ್ಟ ಮತ್ತು ಬಾಗೇಪಲ್ಲಿಯಲ್ಲೂ ಪಕ್ಷ ದೃಢವಾಗಿದೆ. ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈಗಾಗಲೇ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮಗಳು ನಡೆಯುತ್ತಿವೆ. ಶೀಘ್ರದಲ್ಲಿಯೇ ಸರ್ಕಾರದ ಯೋಜನೆಗಳನ್ನು ಜನರಿಗೆ ಮತ್ತಷ್ಟು ಪರಿಣಾಮಕಾರಿಯಗಿ ತಲುಪಿಸುವ ಕೆಲಸವನ್ನು ಪಕ್ಷ ಮಾಡಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT