‘ಏಯ್ ಅಲ್ಲಿ ನೋಡು... ಜೋಕರ್ ಮಾಮಾ. ತಲೆಯ ಮೇಲೆ ಉದ್ದ ಟೋಪಿ. ಕಾಲುಗಳು ತುಂಬಾ ಉದ್ದ. ಮೈ ಮೇಲೆ ಬಣ್ಣ–ಬಣ್ಣದ ಉದ್ದನೆಯ ಚೆಂದದ ಗೌನು. ತಮಟೆ ಬಾರಿಸುವ ಮಗುವನ್ನು ಹೆಗಲ ಮೇಲೆ ನಿಲ್ಲಿಸಿಕೊಂಡು ನೃತ್ಯ ಮಾಡುವುದು ನೋಡು. ಬೇಗನೇ ಹೋಗಿ ‘ಶೇಕ್ ಹ್ಯಾಂಡ್’ ಮಾಡಿ ಬಾ. ಮುದ್ದಿನ ಮಾಮಾಗೆ ಹಾಯ್, ಹೆಲೋ ಅಂತ ಹೇಳಿ ಬಾ’.

ಚಿಕ್ಕಬಳ್ಳಾಪುರದ ಬಿ.ಬಿ. ರಸ್ತೆಯಲ್ಲಿ ಜನಸಾಗರದಿಂದ ಕೂಡಿದ್ದ ಮೆರವಣಿಗೆಯಲ್ಲಿ ಮುಂದೆ ನಡೆದುಕೊಂಡು ಹೋಗುತ್ತಿದ್ದ ಜೋಕರ್ ಮಾಮಾನನ್ನು ತೋರಿಸಿ ತಾಯಿಯೊಬ್ಬರು ತಮ್ಮ 10 ವರ್ಷದ ಮಗಳನ್ನು ಕಳುಹಿಸಿಕೊಟ್ಟಿದ್ದು ಹೀಗೆ.

ಆ ಮಗಳು ಓಡಿ ಹೋಗಿ ಮಾಮಾ ಪಕ್ಕದಲ್ಲೇ ನಿಂತು ಮೊಬೈಲ್ ಫೋನ್ ಕ್ಯಾಮೆರಾದಲ್ಲಿ ಚಿತ್ರ ತೆಗೆಸಿಕೊಂಡು ಕುಣಿದಾಡಿಬಿಟ್ಟಳು!
ಮಕ್ಕಳನ್ನು ಬೆರಗುಗೊಳಿಸುವ ಮತ್ತು ನಕ್ಕುನಲಿಸುವ ಮುದ್ದಿನ ಜೋಕರ್ ಮಾಮಾ ಹೆಸರು ಜಿ.ಎನ್.ಮಂಜುನಾಥ್. ಚಿಕ್ಕಬಳ್ಳಾಪುರ ತಾಲ್ಲೂಕಿನ ಎಸ್.ಗೊಲ್ಲಹಳ್ಳಿಯವರು. ಹಲವು ವರ್ಷಗಳಿಂದ ಗಾರುಡಿಗೊಂಬೆ, ಡೊಳ್ಳು ಕುಣಿತ, ವೀರಗಾಸೆ, ಕೀಲುಕುದುರೆ ಮುಂತಾದ ಕಲೆಗಳಲ್ಲಿ ನೈಪುಣ್ಯತೆ ಪಡೆದಿದ್ದಾರೆ.

‘ಯಾವುದೇ ಕಲೆಯಾಗಿರಬಹುದು, ಪ್ರೇಕ್ಷಕನ ಮನಸ್ಸು ಗೆದ್ದಾಗ ಕಲಾವಿದನಿಗೆ ಜಗತ್ತನ್ನು ಗೆದ್ದಷ್ಟು ಸಂತಸವಾಗುತ್ತದೆ. ಜೋಕರ್ ಎಂದರೆ ಸಂತಸದ ಸಂಕೇತ. ಅದಕ್ಕಾಗಿ ನಾನು ಎಲ್ಲ ಕಡೆಗಳಲ್ಲೂ ಜೋಕರ್ ವೇಷದಲ್ಲಿ ತೆರಳುತ್ತೇನೆ. ನನ್ನ ನೋಡಿ ಜನರು ತಮ್ಮ ಸಮಸ್ಯೆ ಮತ್ತು ಸಂಕಷ್ಟಗಳನ್ನು ಮರೆಯುತ್ತಾರೆ. ಕೆಲ ಹೊತ್ತಾದರೂ ಜನರು ನೋವು ಮರೆತರೆ, ಕಲಾವಿದನ ಕಲಾ ಪ್ರದರ್ಶನ ಸಾರ್ಥಕ’ ಎಂದು ಜಿ.ಎನ್.ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಂದೆ ನಾರಾಯಣಪ್ಪ ಕಲಾವಿದರಾಗಿದ್ದು, ಅವರು ಬೇರೆ ಹಲವೆಡೆ ತಿರುಗಾಡಿ ಸ್ವಯಂ–ಆಸಕ್ತಿಯಿಂದ ವಿವಿಧ ಕಲೆಗಳನ್ನು ಕಲಿತರು. ನನಗೂ ನಿರಂತರ ಅಭ್ಯಾಸ ಮಾಡಿಸಿ, ಕಲಾವಿದನಾಗಿ ತಿದ್ದಿದರು. ಅವರು ಮರಗಾಲು ಜೋಕರ್, ಗಾರುಡಿಗೊಂಬೆ, ಡೊಳ್ಳು ಕುಣಿತ, ವೀರಗಾಸೆ, ಕೀಲುಕುದುರೆ ಮತ್ತಿತರ ನೃತ್ಯ ಮತ್ತು ಆಟಗಳಿಗೆ ಬೇಕಾಗುವ ಉಡುಪು, ವಸ್ತ್ರ ವಿನ್ಯಾಸ ಮಾಡುತ್ತಾರೆ. ಬೇರೆ ಬೇರೆ ಆಟಗಳಿಗೆ ಬೇಕಾಗುವ ಬೊಂಬೆ, ಆಯುಧ ತಯಾರಿಸುತ್ತಾರೆ’ ಎಂದು ಅವರು ತಿಳಿಸಿದರು.

‘ನಾನು ಮರಗಾಲು ಜೋಕರ್ ಒಂದೇ ದಿನದಲ್ಲಿ ಆಗಲಿಲ್ಲ. ಅದಕ್ಕಾಗಿ ತುಂಬಾ ಶ್ರಮಪಟ್ಟೆ. ಸುಮಾರು 5 ಅಡಿ ಎತ್ತರದ ಮರಗಾಲುಗಳ ಮೇಲೆ ನಿಲ್ಲಲು ಆರಂಭದಲ್ಲಿ ತುಂಬಾ ಭಯವಾಯಿತು. ಕ್ರಮೇಣ ಎಲ್ಲವನ್ನೂ ನಿಧಾನವಾಗಿ ರೂಢಿಸಿಕೊಂಡೆ. ನಂತರದ ದಿನಗಳಲ್ಲಿ ಕೋಲಾರ, ಚಿತ್ರದುರ್ಗ, ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ತಂದೆಯವರ ಮಾರ್ಗದರ್ಶನದಲ್ಲಿ ಕಲಾ ಪ್ರದರ್ಶನ ನೀಡಿದೆ. ಮರಗಾಲು ತೊಟ್ಟು ಪ್ರೇಕ್ಷಕನ ಎದುರು ನಿಂತಾಗ, ಇಡೀ ಪ್ರಪಂಚದಲ್ಲಿ ನಾನೇ ಎತ್ತರದ ವ್ಯಕ್ತಿಯೆಂದು ಭಾವಿಸಿ ಹಲವು ಬಾರಿ ಭಾವುಕನಾಗಿದ್ದೇನೆ ಎಂದು ಅವರು ತಿಳಿಸಿದರು.

ಇತ್ತೀಚಿನ ದಿನಗಳ ಮೆರವಣಿಗೆ, ದೇವರ ಜಾತ್ರಾ ಮಹೋತ್ಸವ ಮತ್ತು ಇತರೆ ಕಾರ್ಯಕ್ರಮಗಳಲ್ಲಿ ಜನರು ದೇವರು ಮತ್ತು ಪ್ರಮುಖರನ್ನು ನೋಡುವುದಕ್ಕಿಂತ ನಮ್ಮ ಆಟ ಮತ್ತು ಕಲೆಯ ಕಡೆಗೆ ಹೆಚ್ಚು ಗಮನಹರಿಸುತ್ತಾರೆ. ಮಕ್ಕಳ ಸಂಭ್ರಮವಂತೂ ತಾರಕಕ್ಕೇರುತ್ತದೆ. ನಾವು ಸುಮಾರು 30 ವಿವಿಧ ಜಾನಪದ ಕಲಾವಿದರಿದ್ದು, ಬಂಡೆಮ್ಮ ಕಲಾ ಮತ್ತು ಸಾಂಸ್ಕೃತಿಕ ತಂಡ ಕಟ್ಟಿಕೊಂಡಿದ್ದೇವೆ. ಕಷ್ಟಪಟ್ಟು ಬದುಕು ನಡೆಸಿದ್ದೇವೆ ಎಂದು ತಿಳಿಸಿದರು.

ಗಾರುಡಿಗ ಮನೆ ಬೊಂಬೆ ಆಟಗಾರ ನಾರಾಯಣಪ್ಪ ಕುಟುಂಬದವರು ಮತ್ತು ಕಲಾವಿದರು ಬದುಕಿಗಾಗಿ ತುಂಬಾ ಶ್ರಮಪಡುತ್ತಾರೆ. ಕಲೆ ಕುರಿತು ಅವರಿಗೆ ಅಗಾಧ ಪ್ರೀತಿಯಿದೆ. ಕಲೆಯನ್ನೇ ಉಸಿರಾಗಿಸಿಕೊಂಡಿದ್ದಾರೆ. ಆದರೆ ಅವರ ಕಲೆಯನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸದಿರುವುದು ಶೋಚನೀಯ. ಇತರೆ ಕಲಾವಿದರಿಗೆ ನೀಡಿದಷ್ಟೇ ಆದ್ಯತೆ ಈ ಕಲಾವಿದರಿಗೂ ನೀಡಲು ಸರ್ಕಾರ ಆಸಕ್ತಿ ತೋರಬೇಕು ಎಂದು ಕಲಾಭಿಮಾನಿ ಶಶಿಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.