ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಬಳಿಗೊಂದು ಮೇವಿನ ಬ್ಯಾಂಕ್ ಸ್ಥಾಪಿಸಿ: ಎನ್.ಎಚ್.ಶಿವಶಂಕರರೆಡ್ಡಿ ಸೂಚನೆ

ಬರ ನಿರ್ವಹಣೆ ಪ್ರಗತಿ ಪರಿಶೀಲನೆ ಮತ್ತು ಟಾಸ್ಕ್‌ಪೋರ್ಸ್‌ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸೂಚನೆ
Last Updated 4 ಜೂನ್ 2019, 12:12 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಬರಪೀಡಿತ ಜಿಲ್ಲೆಯಲ್ಲಿ ಅಧಿಕಾರಿಗಳು ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಜತೆಗೆ ಜಿಲ್ಲೆಯ 26 ಹೋಬಳಿಗಳಲ್ಲಿ ಮುಂದಿನ 10 ದಿನಗಳ ಒಳಗೆ ತಲಾ ಒಂದು ಮೇವಿನ ಬ್ಯಾಂಕ್ ಸ್ಥಾಪಿಸುವ ಮೂಲಕ ಮೇವಿನ ಕೊರತೆಯಾಗದಂತೆ ಕ್ರಮಕೈಗೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಬರ ನಿರ್ವಹಣೆ ಪ್ರಗತಿ ಪರಿಶೀಲನೆ ಮತ್ತು ಟಾಸ್ಕ್‌ಪೋರ್ಸ್‌ ಸಭೆಯಲ್ಲಿ ಮಾತನಾಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ‘ಪ್ರಸ್ತುತ ಜಿಲ್ಲೆಯಲ್ಲಿ 337 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಆ ಪೈಕಿ 136ಗ್ರಾಮಗಳಲ್ಲಿ ಟ್ಯಾಂಕರ್ ಮತ್ತು 201 ಕಡೆಗಳಲ್ಲಿ ಖಾಸಗಿ ಕೊಳವೆಬಾವಿಗಳ ನೆರವಿನಿಂದ ನೀರು ಪೂರೈಸಲಾಗುತ್ತಿದೆ’ ಎಂದು ಹೇಳಿದರು.

ಈ ವೇಳೆ ಶಾಸಕ ವಿ.ಮುನಿಯಪ್ಪ ಅವರು, ‘ನನ್ನ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ತುಂಬಾ ಇದೆ. ಸರ್ಕಾರ ಸರಿಯಾಗಿ ಸ್ಪಂದಿಸಿ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಕೊಳವೆಬಾವಿ ಕೊರೆಯುವ ಗುತ್ತಿಗೆದಾರರು ಡಿಸೇಲ್‌ಗೆ ಹಣವಿಲ್ಲದೆ ಪರದಾಡುವ ಸ್ಥಿತಿ ಉಂಟಾಗಿದೆ. ಹಿಂದಿನ ವರ್ಷ ಕೊಳವೆಬಾವಿಗಳನ್ನು ಕೊರೆದ ಬಿಲ್‌ಗಳು ಇಂದಿಗೂ ಬಾಕಿ ಇವೆ. ಹೀಗಾದರೆ ಯಾರು ತಾನೇ ಹೊಸದಾಗಿ ಕೊಳವೆಬಾವಿ ಕೊರೆಯಲು ಮುಂದೆ ಬರುತ್ತಾರೆ. ಸರ್ಕಾರದಲ್ಲಿ ಹಣ ಇದೆ ಎಂದರೆ ಸಾಲದು. ಕೆಲಸಗಳು ಆಗಬೇಕು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಅನೇಕ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದಾಗ ತುರ್ತಾಗಿ ಕೊಳವೆಬಾವಿ ಕೊರೆಯಿಸಬೇಕಾಗುತ್ತದೆ. ಆದರೆ ಅಧಿಕಾರಿಗಳು ಟೆಂಡರ್‌ ಕರೆಯದೆ ಕೊಳವೆಬಾವಿ ಕೊರೆಸಲು ಸಾಧ್ಯವಿಲ್ಲ ಎನ್ನುತ್ತಾರೆ. ಇದರಿಂದ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಈ ರೀತಿಯಾದರೆ ನೀರಿನ ಸಮಸ್ಯೆ ಬಗೆಹರಿಸಲು ಆಗುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಈ ವೇಳೆ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ‘ಟೆಂಡರ್‌ ಮೂಲಕವೇ ಹೊಸ ಕೊಳವೆಬಾವಿ ಕೊರೆಯಿಸಬೇಕು ಎನ್ನುವುದು ರಾಜ್ಯ ಸರ್ಕಾರದ ತೀರ್ಮಾನ. ಹೀಗಾಗಿ ನಾವು ನಿಯಮ ಉಲ್ಲಂಘಿಸಿ ಕೆಲಸ ಮಾಡಲು ಸಾಧ್ಯವಿಲ್ಲ. ಸರ್ಕಾರದ ಆದೇಶದಂತೆ ನಾವು ಕಾರ್ಯನಿರ್ವಹಿಸಬೇಕಾಗುತ್ತದೆ’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ ಮಾತನಾಡಿ, ‘ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ ಅಡಿ 2018–19ನೇ ಸಾಲಿಗೆ ರಾಜ್ಯ ವಲಯದ ಟಾಸ್ಕ್‌ಪೋರ್ಸ್‌ ಘಟಕದ ಅಡಿ ಮೂರು ಹಂತಗಳಲ್ಲಿ 368 ಕೊಳವೆಬಾವಿಗಳನ್ನು ಕೊರೆಯಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ನಮಗೆ ₹9.2 ಕೋಟಿ ಬಾಕಿ ಹಣ ಬರಬೇಕಿದೆ’ ಎಂದು ಹೇಳಿದರು.

ಈ ವೇಳೆ ಸಚಿವರು, ‘ತಾಲ್ಲೂಕುವಾರು ಟಾಸ್ಕ್‌ಪೋರ್ಸ್‌ ಘಟಕದ ಅಡಿ ಕೈಗೊಂಡ ಕಾಮಗಾರಿಗಳ ಎಷ್ಟು ಹಣ ಬಾಕಿ ಸರ್ಕಾರದಿಂದ ಬರಬೇಕಿದೆ ಎಂಬುದು ಮಾಹಿತಿ ನೀಡಿ. ಶೀಘ್ರದಲ್ಲಿಯೇ ನಡೆಯುವ ಸಂಪುಟಸಭೆಯಲ್ಲಿ ಈ ಬಗ್ಗೆ ಮಾತನಾಡಿ ಹಣ ಬಿಡುಗಡೆಗೆ ಕ್ರಮಕೈಗೊಳ್ಳುತ್ತೇನೆ. ಜತೆಗೆ ಜಿಲ್ಲೆಯ ಶಾಸಕರು ಮತ್ತು ಸಂಸದರೊಂದಿಗೆ ನಿಯೋಗ ಹೋಗಿ ಮುಖ್ಯಮಂತ್ರಿ ಅವರನ್ನು ಕಂಡು ಹೊಸ ಕೊಳವೆ ಬಾವಿ ಕೊರೆಯಿಸುವ ನಿಯಮಾವಳಿ ಸಡಿಲಗೊಳಿಸುವಂತೆ ಮನವಿ ಸಲ್ಲಿಸೋಣ’ ಎಂದು ತಿಳಿಸಿದರು.

ವಿಧಾನಸಭೆ ಉಪಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿ ಮಾತನಾಡಿ, ‘ಟ್ಯಾಂಕರ್‌ ನೀರು ಪೂರೈಸುವ ಗುತ್ತಿಗೆದಾರರಿಗೆ ಪ್ರತಿ ಟ್ಯಾಂಕರ್‌ಗೆ ₹500 ಬಾಡಿಗೆ ಪಾವತಿಸಲಾಗುತ್ತಿದೆ. ಈ ಮೊತ್ತ ಸಾಲದು ಎಂದು ಗುತ್ತಿಗೆದಾರರು ನೀರು ಪೂರೈಸಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಪ್ರತಿ ಟ್ಯಾಂಕರ್‌ಗೆ ಕನಿಷ್ಠ ₹700 ನಿಗದಿಪಡಿಸಬೇಕು’ ಎಂದು ಆಗ್ರಹಿಸಿದರು. ಈ ಬೇಡಿಕೆಗೆ ಸಚಿವರು ಮತ್ತು ಜಿಲ್ಲಾಧಿಕಾರಿ ಅವರು ಸಮ್ಮತಿ ಸೂಚಿಸಿದರು.

ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ ಮಾತನಾಡಿ, ‘ಅಧಿಕಾರಿಗಳು ಪ್ರತಿ ವ್ಯಕ್ತಿಗೆ 40 ಲೀಟರ್‌ನಂತೆ ಲೆಕ್ಕ ಹಾಕಿ ನೀರು ಪೂರೈಸುತ್ತಿದ್ದಾರೆ. ಅಷ್ಟು ನೀರಿನಲ್ಲಿ ಜನರು ಬದುಕಲು ಸಾಧ್ಯವೆ? ಹೀಗಾದರೆ ಜನ ಜಾನುವಾರಗಳ ಗತಿ ಏನಾಗಬೇಕು? ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಪಶು ಪಾಲನೆ ಮತ್ತು ಸಂಗೋಪನಾ ಇಲಾಖೆ ಉಪ ನಿರ್ದೇಶಕರು ಮಾತನಾಡಿ, ‘ಜಿಲ್ಲೆಯಲ್ಲಿ ಆರು ವಾರಗಳಿಗೆ ಸಾಕಾಗುವಷ್ಟು ಮೇವಿನ ದಾಸ್ತಾನು ಇದೆ. ಪ್ರಸ್ತುತ ಮೇವಿನ ಬೀಜದ ಕಿಟ್‌ಗಳಿಗೆ ತುಂಬಾ ಬೇಡಿಕೆ ಇದೆ’ ಎಂದರು. ಆಗ ಸಚಿವರು ಮೊದಲ ಹಂತದಲ್ಲಿ 10 ಸಾವಿರ ಕಿಟ್ ಕೊಡಿಸಲು ಪ್ರಯತ್ನಿಸೋಣ. ನಂತರ ಬೇಡಿಕೆಗೆ ತಕ್ಕಂತೆ ಪೂರೈಸಿ’ ಎಂದು ಹೇಳಿದರು.

ಇತ್ತೀಚೆಗೆ ಜಿಲ್ಲೆಯಲ್ಲಿ ಆಲಿಕಲ್ಲು ಮಳೆಗೆ ಹಾನಿಯಾದ ದ್ರಾಕ್ಷಿ, ಮಾವು ಬೆಳೆಗಳಿಗೆ ನಷ್ಟ ಪರಿಹಾರ ಕೊಡಿಸಬೇಕು ಎಂದು ಕೆಲಸ ಶಾಸಕರು ಸಚಿವರಿಗೆ ಆಗ್ರಹಿಸಿದರು. ಈ ಬಗ್ಗೆ ಬೇಗ ವರದಿ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಹಾಜರಿದ್ದ ತಾಲ್ಲೂಕು ಪಂಚಾಯಿತಿ ಸದಸ್ಯರ ಪೈಕಿ ಕೆಲವರು ಹೇಳಿಕೊಂಡ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಂಸದ ಬಿ.ಎನ್.ಬಚ್ಚೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್, ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT