ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು | 112 ತುರ್ತು ಸ್ಪಂದನೆ: ಸಾರ್ವಜನಿಕಲ್ಲಿ ಹೆಚ್ಚಿದ ವಿಶ್ವಾಸ

ಸರಾಸರಿ 22 ನಿಮಿಷದಲ್ಲಿ ಕ್ಷಿಪ್ರ ಸ್ಪಂದನೆ: ಡಿಸೆಂಬರ್ ಅಂತ್ಯದ ತನಕ 13 ಸಾವಿರ ಕರೆ
ರಘು ಕೆ.ಜಿ.
Published 11 ಜನವರಿ 2024, 7:37 IST
Last Updated 11 ಜನವರಿ 2024, 7:37 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಯಾವುದೇ ಸಾಮಾನ್ಯ ನಾಗರಿಕ ತೊಂದರೆಗೆ ಸಿಲುಕಿದಾಗ, ಆಕಸ್ಮಿಕ ಅಪಘಾತ, ದರೋಡೆ, ಮನೆ ಕಲಹ ಮೊದಲಾದ ಅಪರಾಧ ಕೃತ್ಯಗಳು ಸಂಭವಿಸಿದ್ದಲ್ಲಿ ನೆರವಿಗಾಗಿ ದೇಶವ್ಯಾಪಿ ಏಕಮಾದರಿ 112 ತುರ್ತು ಸ್ಪಂದನೆ ಸಹಾಯವಾಣಿ ಆರಂಭಿಸಿದೆ. ಈ ಸಹಾಯವಾಣಿಗೆ ಜಿಲ್ಲೆಯಲ್ಲಿ 2023 ಡಿ. ಅಂತ್ಯದವರೆಗೆ ಒಟ್ಟು 13,182 ಕರೆಗಳು ಬಂದಿದ್ದು, ಸರಾಸರಿ 22 ನಿಮಿಷದಲ್ಲಿ ಕ್ಷಿಪ್ರ ಸ್ಪಂದನೆ ಮೂಲಕ ಸಾರ್ವಜನಿಕರಲ್ಲಿ ವಿಶ್ವಾಸ ಹೆಚ್ಚಿಸಿದೆ.

ಜಿಲ್ಲೆಯ 30 ಪೊಲೀಸ್‌ ಠಾಣೆಗಳಲ್ಲಿ 16 ಇಆರ್‌ಎಸ್‌ಎಸ್‌ (ತುರ್ತು ಸ್ಪಂದನಾ ಸಹಾಯ ವ್ಯವಸ್ಥೆ) ವಾಹನಗಳಿವೆ. ಇವು ದಿನದ 24 ಗಂಟೆವರೆಗೂ ಕಾರ್ಯನಿರ್ವಹಿಸಲಿವೆ. ಅಗ್ನಿ ಅವಘಡ, ಅಪಘಾತ, ಕಳ್ಳತನ, ಅಪಹರಣ ಮೊದಲಾದ ತೊಂದರೆ ಆದಾಗ ಸಾರ್ವಜನಿಕರು ರಕ್ಷಣೆ ಕೋರಿ 112ಗೆ ಕರೆ ಮಾಡಿದರೆ ಅಧಿಕಾರಿ, ಸಿಬ್ಬಂದಿ ಘಟನಾ ಸ್ಥಳಕ್ಕೆ ವಾಹನದಲ್ಲಿ ತೆರಳಿ ಪರಿಶೀಲಿಸಿ ಸ್ಪಂದಿಸಲಿದ್ದಾರೆ.

ಜಿಲ್ಲೆಯಲ್ಲಿ 2023 ಡಿಸೆಂಬರ್‌ವರೆಗೆ ಇಆರ್‌ಎಸ್‌ಎಸ್‌ 112ಗೆ ಅಪಘಾತ ಹಾಗೂ ಸಂಚಾರ ಸಂಬಂಧಿತ ಘಟನೆಗಳ 1,225 ಕರೆಗಳು, ಸಾರ್ವಜನಿಕ ಸ್ಥಳದಲ್ಲಿ  ಜಗಳವಾಡುತ್ತಿರುವ ಕುರಿತು 10,117, ಅಗ್ನಿ ಅವಘಡ, ನದಿ ಹರಿವು, ಭೂಕುಸಿತ ಮುಂತಾದ ನೈಸರ್ಗಿಕ ವಿಪತ್ತು ಸಂಬಂಧ 83 ಕರೆಗಳು ಬಂದಿವೆ. ಜೂಜಾಟ, ಕಳ್ಳತನ, ಗಾಂಜಾ ಮಾರಾಟ ಮೊದಲಾದ ಕಾನೂನು ಬಾಹಿರ ಚಟುವಟಿಕೆಯ 520 ಹಾಗೂ ಅನುಮಾನಾಸ್ಪದ ವ್ಯಕ್ತಿಯ ಚಲನವಲನ, ಕಾಣೆಯಾದವರ ಕುರಿತು ಒಟ್ಟು 422 ಕರೆಗಳು ದಾಖಲಾಗಿವೆ. 112ಗೆ ಪ್ರತಿ ದಿನ ಕನಿಷ್ಠ 36 ಕರೆಗಳು ಬಂದಿವೆ. ಸರಾಸರಿ 22 ನಿಮಿಷದಲ್ಲಿ ಇಆರ್‌ಎಸ್‌ಎಸ್‌ ವಾಹನ ಸ್ಥಳಕ್ಕೆ ಹೋಗಿ ಸಾರ್ವಜನಿಕರಿಗೆ ಸ್ಪಂದನೆ ನೀಡಿದೆ.

2023 ಸೆ. 29ರಂದು ಶೃಂಗೇರಿ ಠಾಣಾ ವ್ಯಾಪ್ತಿಯ ತುಂಗಾನದಿ ನಡುಗಡ್ಡೆಯಲ್ಲಿ ಮೂರು ಜನ ಸಿಲುಕಿದ್ದಾಗ ಸಾರ್ವಜನಿಕರು 112ಗೆ ಕರೆ ಮಾಡಿದ್ದಾರೆ. 10 ನಿಮಿಷದಲ್ಲಿಯೇ ತುರ್ತು ಸ್ಪಂದನ ವಾಹನ ಸ್ಥಳಕ್ಕೆ ತೆರಳಿ ಅಗ್ನಿಶಾಮಕ ದಳ ಹಾಗೂ ಸಾರ್ವಜನಿಕರ ಸಹಾಯದೊಂದಿಗೆ ನಿರಂತರ ಕಾರ್ಯಾಚರಣೆ ನಡೆಸಿ ಮೂವರ ಪ್ರಾಣ ಉಳಿಸಿದೆ.

ಮೇ 29ರಂದು ಮೂಡಿಗೆರೆಯ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ವಿಷ ಸೇವಿಸಿ ಸಾವು ಬದುಕಿನ ಸ್ಥಿತಿಯಲ್ಲಿದ್ದಾಗ ಕರೆ ಬಂದ 7 ನಿಮಿಷದಲ್ಲಿ ಸಿಬ್ಬಂದಿ ಸ್ಥಳಕ್ಕೆ ತೆರಳಿ ವ್ಯಕ್ತಿಯನ್ನು ಬಣಕಲ್ ಆಸ್ಪತ್ರೆಗೆ ದಾಖಲಿಸಿ ಪ್ರಾಣ ಉಳಿವಿಗೆ ಕಾರಣರಾಗಿದ್ದರು.

ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ‘ಲೋಕಸ್ಪಂದನ’ ಜಾರಿಯಲ್ಲಿದೆ. ಸಾರ್ವಜನಿಕ ಅಭಿಪ್ರಾಯ ದಾಖಲಿಸುವಾಗ ಸ್ಟಾರ್‌ ರೇಂಟಿಂಗ್ ನೀಡುವ ವ್ಯವಸ್ಥೆ ಇದ್ದು ಎರಡು ಹಾಗೂ ಅದಕ್ಕಿಂತ ಕಡಿಮೆ ಸ್ಟಾರ್ ರೇಟಿಂಗ್ ಇರುವ ಠಾಣೆಗಳಿಂದ ಕಾರಣ ಪಡೆಯಲಾಗುತ್ತಿದೆ. ಸಾರ್ವಜನಿಕರಿಗೆ ಅರಿವು ಮೂಡಿಸಲು ಸೂಚನೆ ನೀಡಲಾಗಿದೆ.
ವಿಕ್ರಮ ಅಮಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಅಪರಾಧಗಳ ತಡೆಗೂ 112 ಸಹಕಾರಿ

ಸಾಮಾನ್ಯವಾಗಿ ಅವಘಡದ ತುರ್ತು ಸಂದರ್ಭಗಳಲ್ಲಿ ಯಾರಿಗೆ ಕರೆ ಮಾಡಬೇಕು ಎಂಬ ಗೊಂದಲ ಇರುತ್ತದೆ. ಅದನ್ನು ಪರಿಹರಿಸಲು ಪೊಲೀಸ್ ಇಲಾಖೆ ಗ್ರಾಮಾಂತರ ಪ್ರದೇಶ ಸಾಮಾಜಿಕ ಮಾಧ್ಯಮಗಳ ಮೂಲಕ 112 ತುರ್ತು ಸಂಖ್ಯೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಶಾಲಾ–ಕಾಲೇಜುಗಳಲ್ಲಿಯೂ ಸ್ಟೂಡೆಂಟ್ ಪೊಲೀಸ್‌ ಕೆಡೆಟ್ ಆರಂಭಿಸಲಾಗಿದೆ. ಯಾವುದೇ ಅಪಘಾತ ಕೌಟುಂಬಿಕ ದಯಾದಿಗಳ ಕಲಹ ಜೂಜಾಟ ಸಾರ್ವಜನಿಕವಾಗಿ ಯುವತಿಯರು ಚುಡಾಯಿಸುವುದು ಮೊದಲಾದ ಅಪರಾಧಗಳನ್ನು ತಡೆಯಲು 112 ಸಹಕಾರಿಯಾಗಿದೆ ಎಂದು ಕಂಟ್ರೋಲ್‌ ರೂಂ ವೈರ್‌ಲೆಸ್ ವಿಭಾಗದ ಪೊಲೀಸ್ ಇನ್‌ಸ್ಪೆಕ್ಟರ್‌ ಶಿವಪ್ಪ ಹೇಳಿದರು.

ಎಲ್ಲ ಠಾಣೆಗಳಲ್ಲಿ ‘ಲೋಕಸ್ಪಂದನ’ ಅನುಷ್ಠಾನ

ಜನಸ್ನೇಹಿ ಪೊಲೀಸ್ ವ್ಯವಸ್ಥೆ ಬಲಪಡಿಸಲು ಕ್ಯೂಆರ್ ಕೋಡ್ ಆಧಾರಿತ ಲೋಕಸ್ಪಂದನ ವ್ಯವಸ್ಥೆಯನ್ನು ಜಿಲ್ಲೆಯ 30 ಠಾಣೆಗಳಲ್ಲಿ ಜಾರಿಗೊಳಿಸಲಾಗಿದೆ. ಸಾರ್ವಜನಿಕರಿಗೆ ನ್ಯಾಯಬದ್ಧ ಹಾಗೂ ಗುಣಮಟ್ಟದ ಸೇವೆ ನೀಡಲು ಇಲಾಖೆ ಬದ್ಧವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಹೇಳಿದರು. ಗ್ರಾಮೀಣ ಭಾಗದಲ್ಲಿ ದೂರು ನೀಡಲು ಠಾಣೆಗೆ ಬರುವ ನಾಗರಿಕರು ರೈತರು ಸ್ಮಾರ್ಟ್‌ ಮೊಬೈಲ್ ಫೋನ್ ಹೊಂದಿಲ್ಲದ ಕಾರಣ ಕೆಲವು ಠಾಣೆಗಳಲ್ಲಿ ಸಾರ್ವಜನಿಕ ಅಭಿಫ್ರಾಯ ಪ್ರತಿಕ್ರಿಯೆ ಸಲಹೆ ಪಡೆಯಲು ಹಾಗೂ ರೇಂಟಿಗ್ ನೀಡುವಾಗ ತೊಂದರೆಯಾಗುತ್ತಿದೆ. ಲೋಕಸ್ಪಂದನ ಕ್ಯೂಆರ್ ಕೋಡ್‌ ವ್ಯವಸ್ಥೆ ಕುರಿತು ಎಲ್ಲ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT