ಗುರುವಾರ , ಏಪ್ರಿಲ್ 15, 2021
30 °C

ಕೃಷಿ ಕಾಯ್ದೆಗಳ ಫಲ ಏನು ಎಂಬುದನ್ನು ಕಾದು ನೋಡಲಿ: ಸಿ.ಟಿ.ರವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ‘ಕೃಷಿ ಕಾಯ್ದೆಗಳ ಫಲ ಏನು ಎಂಬುದನ್ನು ಕಾದು ನೋಡಬೇಕು. ಫಲ ರೈತರಿಗೆ ವಿರುದ್ಧ ಇದ್ದರೆ ತಿದ್ದುಪಡಿ ಮಾಡಲು, ಹಿಂಪಡೆಯಲು ಅವಕಾಶ ಇದೆ. ಈ ಕಾಯ್ದೆಗಳು ರೈತ ವಿರೋಧಿ ಎಂಬುದನ್ನು ಒಪ್ಪಲು ಸಾಧ್ಯ ಇಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾನನಾಡಿ, ‘ಕಾಂಗ್ರೆಸ್‌ ಬೂಟಾಟಿಕೆ ಪ್ರದರ್ಶಿಸುತ್ತಿದೆ. ರಾಹುಲ್‌ ಗಾಂಧಿ ಅವರು ಲೋಕಸಭೆಯಲ್ಲಿ ಆಲೂಗಡ್ಡೆ ಬಗ್ಗೆ ಏನು ಮಾತಾಡಿದ್ದರು ಎಂಬ ವಿಡಿಯೊ ತುಣುಕುಗಳು ಹರಿದಾಡುತ್ತಿವೆ. ಕಾಂಗ್ರೆಸ್‌ 2019ರ ಪ್ರಣಾಳಿಕೆಯಲ್ಲಿ ಏನು ಹೇಳಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. 2014ರಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಪಿಎಂಸಿ ಬಗ್ಗೆ ಬರೆದ ಪತ್ರ ಅವರ ಬಣ್ಣವನ್ನು ಬಯಲು ಮಾಡಿದೆ. ಬಿಜೆಪಿ ರೈತ ವಿರೋಧಿ ಎಂಬ ಅಭಿಪ್ರಾಯ ರೂಪಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ’ ಎಂದು ದೂಷಿಸಿದರು.

‘ಅರಾಜಕತೆ ಹುಟ್ಟು ಹಾಕುವ ಸಂಚು ರೂಪಿಸುವ ಜನ ರೈತರ ಹೆಸರಿನಲ್ಲಿ ಚಳವಳಿಯಲ್ಲಿ ತೊಡಗಿದ್ದಾರೆ. ಕೇಂದ್ರ ಸರ್ಕಾರ ರೂಪಿಸಿರುವ ಮೂರೂ ಕಾಯ್ದೆಗಳಲ್ಲಿ ರೈತ ವಿರೋಧಿ ಯಾವ ಅಂಶಗಳು ಯಾವುವು ಎಂಬುದನ್ನು ಸ್ಪಷ್ಟಪಡಿಸಬೇಕು. ರೈತ ವಿರೋಧಿ ಅಂಶಗಳಿದ್ದರೆ ಅವುಗಳನ್ನು ತೆಗೆಯಲು ಕ್ರಮ ವಹಿಸಲಾಗುವುದು’ ಎಂದು ಹೇಳಿದರು.

‘ಇಷ್ಟು ವರ್ಷ ಕಾಲ ಇದ್ದ ವ್ಯವಸ್ಥೆಯಲ್ಲಿ ರೈತರಿಗೆ ನ್ಯಾಯ ಒದಗಿಸಲು ಸಾಧ್ಯವಾಗಿಲ್ಲ ಎಂಬುದಕ್ಕೆ ರೈತರ ಆತ್ಯಹತ್ಯೆಗಳು ಸಾಕ್ಷಿಯಾಗಿವೆ. ಉತ್ಪನ್ನಗಳನ್ನು ಎಲ್ಲಿ ಬೇಕಾದರು ಮಾರಾಟ ಮಾಡುವುದು ನಮ್ಮ ಹಕ್ಕು, ಅದನ್ನು ಕೊಡಿ ಎಂದು ರೈತರು ಬೇಡಿಕೆ ಇಟ್ಟಿದ್ದರು. ರೈತರಿಗೆ ಆ ಹಕ್ಕನ್ನು ಕೊಡುವ ಕೆಲಸವನ್ನು ಪ್ರಧಾನಿ ಮೋದಿ ಮಾಡಿದ್ದಾರೆ’ ಎಂದು ಸಮರ್ಥಿಸಿಕೊಂಡರು.

ಮುಜುಗರದ ಸಂಗತಿ: ಸಿ.ಟಿ.ರವಿ

‘ಕಂದಾಯ ಸಚಿವ ಆರ್‌.ಅಶೋಕ್‌ ಅವರ ಆಪ್ತ ಸಹಾಯಕ ಶೃಂಗೇರಿಯ ಸಬ್ ರಿಜಿಸ್ಟ್ರಾರ್‌ನಿಂದ ಹಣ ಕೇಳಿದ್ದರೆ ಅದು ತಪ್ಪು. ಮುಜುಗರ ಉಂಟು ಮಾಡುವ ಸಂಗತಿ’ ಎಂದು ಸಿ.ಟಿ.ರವಿ ಪ್ರತಿಕ್ರಿಯಿಸಿದರು.

‘ಅಶೋಕ್ ಅವರನ್ನು ಹತ್ತಿರದಿಂದ ಬಲ್ಲೆ. ಅವರಿಗೆ ಸಬ್‌ ರಿಜಿಸ್ಟ್ರಾರ್‌, ರೆವಿನ್ಯೂ ಇನ್‌ಸ್ಪೆಕ್ಟರ್‌ ಅವರ ಬಳಿ ದುಡ್ಡು ಕೇಳುವ ಸ್ಥಿತಿ ಯಾವತ್ತು ಬಂದಿಲ್ಲ, ಬರುವುದೂ ಇಲ್ಲ. ಆ ಜಾಯಮಾನದವರು ಅಲ್ಲ. ವಿಷಯ ಗಮನಕ್ಕೆ ಬಂದ ತಕ್ಷಣ ಆ ಆಪ್ತ ಸಹಾಯಕನನ್ನು ಸ್ಥಾನದಿಂದ ಕಿತ್ತು ಹಾಕಲಾಗಿದೆ’ ಎಂದು ಉತ್ತರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು