ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಕೈತಪ್ಪುವ ಆತಂಕದಲ್ಲಿ ಬೆಳೆಗಾರರು

ಅಜ್ಜಂಪುರದಲ್ಲಿ ಮಳೆ ಕೊರತೆ– ತೇವಾಂಶವಿಲ್ಲದೆ ಒಣಗುವ ಈರುಳ್ಳಿ ಬೆಳೆ
Last Updated 10 ಜುಲೈ 2021, 4:51 IST
ಅಕ್ಷರ ಗಾತ್ರ

ಅಜ್ಜಂಪುರ: ತಾಲ್ಲೂಕಿನಲ್ಲಿ ಮುಂಗಾರು ಮಳೆ ಮರೆಯಾಗಿದೆ. ತೇವಾಂಶದ ಕೊರತೆಯಿಂದ ಈರುಳ್ಳಿ ಬೆಳೆ ಒಣಗುವ ಹಂತ ತಲುಪಿದೆ. ರೈತರಿಗೆ ಆದಾಯ ಕೈತಪ್ಪುವ ಭೀತಿ ಎದುರಾಗಿದೆ.

‘ಆರಿದ್ರ’ ಮಳೆ ಹನಿಯಲಿಲ್ಲ. ವಾರದ ಹಿಂದೆ ಹುಟ್ಟಿದ ‘ಪುನರ್ವಸು’ ಕೂಡಾ ಮಳೆಯ ಸಿಂಚನ ಮೂಡಿ ಸಿಲ್ಲ. ಆಗಸದಲ್ಲಿ ಮೋಡದ ಸುಳಿವೂ ಇಲ್ಲವಾಗಿದೆ. ಮಳೆಯ ವಾತಾವರಣ ವಂತೂ ಸೃಷ್ಟಿಯಾಗಿಲ್ಲ. ಬೆಳೆ ಬರುತ್ತದೆ ಎನ್ನುವ ಭರವಸೆಯೇ ಕಮರಿದೆ ಎನ್ನು ತ್ತಾರೆ ಗೌರಾಪುರದ ರೈತ ಪ್ರಶಾಂತ್.

‘15-20 ದಿನಗಳಿಂದ ಮಳೆಯಾಗಿಲ್ಲ. ಭೂಮಿ ಒಣಗಿದೆ, ಮಣ್ಣು ಸಡಿಲವಾಗಿದೆ. 30-40 ದಿನಗಳ ಈರುಳ್ಳಿ ಸಸಿಗಳ ಬೇರು ಭದ್ರತೆಯಿಲ್ಲದೆ ಉರುಳುತ್ತಿವೆ. ತೀವ್ರ ಗಾಳಿ ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಈಗಾಗಲೇ ಶೇ 10-20 ರಷ್ಟು ಸಸಿಗಳು ಸತ್ತಿವೆ. ಮಳೆ ವಿಳಂಬವಾದರೆ ಈ ಪ್ರಮಾಣ ಮತ್ತಷ್ಟು ಹೆಚ್ಚಲಿದೆ. ಇದು, ಮುಂದೆ ಇಳವರಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ’ ಎಂದು ಪಟ್ಟಣದ ರೈತ ತಿಮ್ಮಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

‘ಈರುಳ್ಳಿ ಸಸಿ ಬೇರು ಭದ್ರವಾಗಲು, ಬೆಳೆ, ಬೆಳವಣಿಗೆಯಾಗಲು ಮಳೆ ಅತ್ಯವಶ್ಯಕ. ಈಗ ಮಳೆ ಬಂದರೂ ಶೇ60-70 ರಷ್ಟು ಬೆಳೆಯಾಗುತ್ತದೆ. ಮಳೆ ಬರದೇ ಬೆಳೆಗೆ ಜೀವ ಬಾರದು. ಮುಂದಿನ ಹತ್ತು ದಿನ ಮಳೆಯಾಗದಿದ್ದರೆ ಈರುಳ್ಳಿ ಬೆಳೆಯನ್ನು ಮರೆಯಬೇಕಾಗುತ್ತದೆ’ ಎಂದು ಶಿವನಿ ರೈತ ಷಡಾಕ್ಷರಿ ಬೇಸರ ವ್ಯಕ್ತಪಡಿಸಿದ್ದಾರೆ.

‘ಪ್ರತಿ ಎಕರೆ ಈರುಳ್ಳಿಗೆ ಈವರೆಗೆ ಬೇಸಾಯಕ್ಕೆ ₹ 3,000, ಬಿತ್ತನೆ ಬೀಜಕ್ಕೆ ₹ 8,000, ಗೊಬ್ಬರಕ್ಕೆ ₹ 3,000, ಕಳೆನಾಶಕಕ್ಕೆ ₹ 1,000 ಹಾಗೂ ಕಳೆ ತೆಗೆಸಲು ₹ 2,000 ವೆಚ್ಚ ಮಾಡಿದ್ದೇವೆ. ಮಳೆಯಾಗದೆ ಬೆಳೆ ಒಣಗುತ್ತಿದ್ದು, ಬೆಳೆಗಾಗಿ ಹಾಕಿದ ಬಂಡವಾಳ ವಾಪಸ್‌ ಸಿಗುವುದೋ, ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ’ ಎನ್ನುತ್ತಾರೆ ಗಡೀಹಳ್ಳಿಯ ರೈತ ಉಮೇಶಣ್ಣ.

‘ಈರುಳ್ಳಿ, ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ. ತಾಲ್ಲೂಕಿನ ವಾರ್ಷಿಕ ಆರ್ಥಿಕತೆ ಈರುಳ್ಳಿ ಬೆಳೆ ಮೇಲೆ ನಿಂತಿದೆ. ಬೆಳೆ ಕೈಕೊಟ್ಟರೆ ಬಹುತೇಕ ಎಲ್ಲಾ ವ್ಯವಹಾರಗಳು ಕುಂಠಿತಗೊಳ್ಳಲಿವೆ’ ಎನ್ನುತ್ತಾರೆ ವರ್ತಕರ ಸಂಘದ ಮಂಜುನಾಥ್.

‘ತಾಲ್ಲೂಕಿನ 4,500 ಹೆಕ್ಟೇರ್‌ ಜಾಗದಲ್ಲಿ ಈರುಳ್ಳಿ ಕೃಷಿ ನಡೆದಿದೆ. ಇದರಲ್ಲಿ 500-800 ಹೆಕ್ಟೇರಿನಲ್ಲಿ ರೈತರು ತುಂತುರು ನೀರಾವರಿ ಕೈಗೊಂಡಿದ್ದಾರೆ. ಈರುಳ್ಳಿ ವರಟು ಬೆಳೆ. ಮಳೆ ವಿಳಂಬವಾದರೂ ತಡೆಯುವ ಶಕ್ತಿಯಿದೆ. ಪ್ರಸ್ತುತ ಪೈರು ಚೆನ್ನಾಗಿದೆ. ಹತ್ತು ದಿನಗಳಲ್ಲಿ ಸ್ವಲ್ಪ ಮಳೆಯಾದರೂ ಬೆಳೆಯಾಗುತ್ತದೆ. ಮಳೆ ಬಿದ್ದ ಬಳಿಕ ಗೊಬ್ಬರ, ಬೆಳವಣಿಗೆ ಟಾನಿಕ್ ನೀಡಿದರೆ ಬೆಳೆ ಉತ್ತಮವಾಗಿ ಬರುತ್ತದೆ. ರೈತರು, ಆತಂಕ ಪಡಬೇಕಿಲ್ಲ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಅವಿನಾಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT