ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೂರು: ಬಿರು ಬೇಸಿಗೆಯಲ್ಲಿ ತಂಪು ನೀಡುವ ಮಣ್ಣಿನ ಮಡಕೆ

Published 19 ಮಾರ್ಚ್ 2024, 5:41 IST
Last Updated 19 ಮಾರ್ಚ್ 2024, 5:41 IST
ಅಕ್ಷರ ಗಾತ್ರ

ಕಡೂರು: ಕಡೂರಿನ ಸಂತೆಯಲ್ಲಿ ಸಿಗುವ ಮಣ್ಣಿನ ಮಡಕೆಗಳಲ್ಲಿ ಸಂಗ್ರಹಿಸಿಡುವ ನೀರು ಬಿರು ಬೇಸಿಗೆಯಲ್ಲಿ ಜನರಿಗೆ ತಂಪಿನ ಅನುಭವ ನೀಡುತ್ತಿವೆ. ಉಪನ್ಯಾಸಕನಾಗಿದ್ದ ಬೀರೂರಿನ ಮಲ್ಲಿಕಾರ್ಜುನ್, ವಿವಿಧ ಆಕಾರದ ಮಣ್ಣಿನ‌ ಮಡಕೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಕೋವಿಡ್‌ ಸಮಯದಲ್ಲಿ ಕೆಲಸ ಕಳೆದುಕೊಂಡು, ಪರ್ಯಾಯ ಉದ್ಯೋಗದತ್ತ ಯೋಚಿಸಿದ ಮಲ್ಲಿಕಾರ್ಜುನ್‌, ತಂದೆ ಮಾಡುತ್ತಿದ್ದ ಕುಲಕಸುಬಾದ ಮಣ್ಣಿನ ಮಡಕೆ ಕಾಯಕವನ್ನೇ ವೃತ್ತಿಯನ್ನಾಗಿಸಿಕೊಂಡು  ಈಗ ಅದರಲ್ಲೇ ತೃಪ್ತಿ ಕಂಡಿದ್ದಾರೆ.

ಕಡೂರು ಸಂತೆ ದಿನವಾದ ಸೋಮವಾರ ಈ ಮಣ್ಣಿನ ಮಡಕೆಗಳು ಸಿಗುತ್ತವೆ. ವಾರವಿಡೀ ತಮ್ಮ ಮನೆಯಲ್ಲಿ ಮಡಕೆಗಳನ್ನು ತಯಾರಿಸುವ ಅವರು ಸಂತೆ ದಿನ ಸೀಮಿತ ಸಂಖ್ಯೆಯಲ್ಲಿ ಅವುಗಳನ್ನು ತಂದು ಮಾರಾಟ ಮಾಡುತ್ತಾರೆ. ಮಣ್ಣಿನ ಮಡಿಕೆಗಳನ್ನೇ ಬಳಸುವ ಜನರು ಇವರನ್ನು ಹುಡುಕಿಕೊಂಡು ಬಂದು ಖರೀದಿಸುತ್ತಾರೆ.

ಸುಮಾರು ಐದರಿಂದ ಎಂಟು ಕೊಡ ಹಿಡಿಸುವ ನೀರು ಕಾಯಿಸುವ ಮಡಕೆಗಳು, ಅಡುಗೆ ಮಾಡಲು ಬಳಸುವ ವಿವಿಧ ಗಾತ್ರದ ಪಾತ್ರೆಗಳು, ಹಕ್ಕಿ ನೀರು ಕುಡಿಯಲು ಬಳಸುವ ಮಣ್ಣಿನ ತಟ್ಟೆ, ಕೊಡಗಳು ಮಲ್ಲಿಕಾರ್ಜುನ್‌ ಬಳಿ ಲಭ್ಯವಿದೆ. ದೊಡ್ಡ ಗಾತ್ರದ ಮಡಿಕೆಗೆ ₹1200, ನಲ್ಲಿ ಅಳವಡಿಸಿರುವ ನೀರಿನ ಹೂಜಿಗೆ  ₹350 ರಿಂದ ₹600, ಮಣ್ಣಿನ ಪಾತ್ರೆಗಳಿಗೆ ₹100 ರಿಂದ ₹300 ತನಕ ಬೆಲೆಯಿದೆ. ಸ್ವಲ್ಪ ಜಾಗರೂಕತೆಯಿಂದ ನಿರ್ವಹಿಸಿದರೆ  ಈ ಮಡಕೆಗಳುನು 18 ರಿಂದ 20 ವರ್ಷದವರೆಗೆ  ಬಾಳಿಕೆ ಬರುತ್ತವೆ ಎನ್ನುತ್ತಾರೆ ಮಲ್ಲಿಕಾರ್ಜುನ್‌.

‘ಮಡಿಕೆಗಳ ಸ್ಥಾನವನ್ನು ಸ್ಟೀಲ್ ಪಾತ್ರೆಗಳು ಆಕ್ರಮಿಸಿಕೊಂಡಿವೆ. ಆದರೆ ಮಡಿಕೆ ನೀರು ತಂಪು. ಅಡುಗೆ ಮಾಡಿದರೆ ಬಹು ರುಚಿಕರ. ಅದರ ಮಹತ್ವವನ್ನು ಈಗಿನವರು ಅರಿತಿಲ್ಲ ಎಂಬ ಬೇಸರ ಮಲ್ಲಿಕಾರ್ಜುನ ಅವರದ್ದು.

ಮಡಕೆಗಳ ಜೊತೆ ಮಣ್ಣಿನ ಗಣಪತಿ ಮೂರ್ತಿಯನ್ನೂ ಮಲ್ಲಿಕಾರ್ಜುನ್‌ ಮಾಡುತ್ತಾರೆ. ಮದುವೆಗೆ ಬೇಕಾದ ಬಾಸಿಂಗವನ್ನೂ ತಯಾರಿಸುತ್ತಾರೆ.

ಈ ಮಣ್ಣಿನ ಮಡಕೆಗಳು ಸಿಗುವುದೇ ಅಪರೂಪ.
ಈ ಮಣ್ಣಿನ ಮಡಕೆಗಳು ಸಿಗುವುದೇ ಅಪರೂಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT