ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಗರೇಕಾನು ಗಿರಿ ಸಂರಕ್ಷಣೆಗೆ ಕ್ರಮ ವಹಿಸಿ: ಅನಂತ ಹೆಗಡೆ ಆಶೀಸರ

ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ
Last Updated 19 ಸೆಪ್ಟೆಂಬರ್ 2020, 11:52 IST
ಅಕ್ಷರ ಗಾತ್ರ

ಬೀರೂರು: ‘ರಾಜ್ಯದ ನಾಲ್ಕು ಸಂರಕ್ಷಿತ ಜೀವ ವೈವಿಧ್ಯ ತಾಣಗಳಲ್ಲಿ ಹೊಗರೇಕಾನು ಗಿರಿಯೂ ಒಂದಾಗಿದ್ದು, ಇದರ ಸಂರಕ್ಷಣೆಗೆ ಅರಣ್ಯ ಇಲಾಖೆ ಸೂಕ್ತಕ್ರಮ ವಹಿಸಬೇಕು’ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಸೂಚಿಸಿದರು.

ಬೀರೂರು ಹೋಬಳಿ ಹೊಗರೇಹಳ್ಳಿಯಲ್ಲಿ ಗ್ರಾಮಸ್ಥರು, ತಾಲ್ಲೂಕು ಜೀವ ವೈವಿಧ್ಯಮಂಡಳಿ ಪದಾಧಿಕಾರಿಗಳು, ಅರಣ್ಯ ಇಲಾಖೆ, ತಾಲ್ಲೂಕು, ಗ್ರಾಮ ಪಂಚಾಯಿತಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

‘ಸರ್ಕಾರ 2009ರಲ್ಲಿ ಜೀವ ವೈವಿಧ್ಯ ಕಾಯ್ದೆ ರೂಪಿಸಿ, 2010ರಲ್ಲಿ ಹೊಗರೇಕಾನು ಗಿರಿಯನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಿದೆ. ಜನರೊಂದಿಗೆ ಸೇರಿ ಹೋರಾಟ ನಡೆಸಿದ ಫಲವಾಗಿ ಇಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ಮುಚ್ಚಲ್ಪಟ್ಟಿದೆ. ಅದಕ್ಕಾಗಿ ಇಲ್ಲಿನ ರೈತರನ್ನು ಶ್ಲಾಘಿಸುತ್ತೇನೆ. ಆದರೆ, ರೈತರಿಂದ ಇಲ್ಲಿ ಭೂಮಿ ಒತ್ತುವರಿಯಾಗಿದೆ. ಉಳಿದಿರುವ ಪ್ರದೇಶವನ್ನಾದರೂ ರಕ್ಷಿಸಲು ಅರಣ್ಯ ಇಲಾಖೆ ಜತೆಗೆ ಎಲ್ಲರೂ ಕೈ ಜೋಡಿಸಬೇಕು. ಈಗಾಗಲೇ ಒತ್ತುವರಿ ಮಾಡಿರುವ ರೈತರು ಮುಂದಿನ ದಿನಗಳಲ್ಲಿ ಏನಾದರೂ ತೆರವು ಪ್ರಕ್ರಿಯೆಗೆ ಕಾನೂನು ಬಂದರೆ ಅದಕ್ಕೆ ಬದ್ಧರಾಗಿರಬೇಕು. ತಮ್ಮ ಜಮೀನುಗಳ ಬದುಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸಿ, ವನೀಕರಣ ಪ್ರಕ್ರಿಯೆಗೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಈ ಹಂತದಲ್ಲಿ ಹಲವು ಗ್ರಾಮಸ್ಥರು, ‘ಗಿರಿ ಪ್ರದೇಶಕ್ಕೆ ಅಪರಿಚಿತರು ತೆರಳಿ ಕಲ್ಲುಗಳನ್ನು ಸಾಗಿಸುತ್ತಾರೆ. ಅಕ್ರಮ ಪ್ರವೇಶ ಮಾಡುತ್ತಾರೆ’ ಎಂದು ದೂರಿದರು.

ಇಲ್ಲಿ ಯಾವುದೇ ರೀತಿಯ ಗಣಿಗಾರಿಕೆಗೆ ಅವಕಾಶವಿಲ್ಲ. ಅರಣ್ಯ ಇಲಾಖೆ ಇಲ್ಲಿ ಒಂದು ಚೆಕ್‍ಪೋಸ್ಟ್ ಸ್ಥಾಪಿಸಿ ಅನಗತ್ಯ ಚಟುವಟಿಕೆಗೆ ನಿರ್ಬಂಧ ಹೇರುವಂತೆ ಸೂಚಿಸಿ, ಇಲ್ಲಿ ಶೋಲಾ ಕಾಡು ಸಂರಕ್ಷಿಸಲು ಮುಂದಾಗುವಂತೆ ಅನಂತ ಹೆಗಡೆ ಆಶೀಸರ ತಾಕೀತು ಮಾಡಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಹೊಗರೇಕಾನು ಗಿರಿ ಸಮಗ್ರ ಅಭಿವೃದ್ಧಿ ವಿಷಯವಾಗಿ ವಿಸ್ಕೃತ ವರದಿ ತಯಾರಿಸಿ, ಮೇಲಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದರು.

ನಂತರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಆಶೀಸರ, ‘ನಾನು 1983ರಿಂದಲೂ ಪಶ್ಚಿಮಘಟ್ಟ ಉಳಿಸಿ, ವೃಕ್ಷಲಕ್ಷ ಆಂದೋಲನ, ಪಾರಂಪರಿಕ ವೃಕ್ಷಗಳ ಸಂರಕ್ಷಣೆ, ಅಂಬಾರಗುಡ್ಡ ಗಣಿಗಾರಿಕೆ ಸ್ಥಗಿತಕ್ಕೆ ಒತ್ತಾಯಿಸಿ ಚಳವಳಿಗಳ ಮೂಲಕ ಹೋರಾಟ ನಡೆಸಿದ್ದೆ. 2008ರಲ್ಲಿ ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷನಾಗಿ ಕೆಲಸ ಮಾಡಲು ದೊರೆತ ಅವಕಾಶದಲ್ಲಿ ಸರ್ಕಾರದ ಭಾಗವಾಗಿ ಹಲವಾರು ವಿಧಾಯಕ ಕಾರ್ಯಕ್ರಮಗಳನ್ನು ರೂಪಿಸಿದ್ದೇನೆ. ಕರಾವಳಿ ಹಸಿರು ಕವಚ, ಕಾನು ರಕ್ಷಣಾ ಅಭಿಯಾನ, ದೇವರಕಾಡು ಸಂರಕ್ಷಣೆ ಮೊದಲಾದ ನೇರ ಕ್ರಿಯಾಯೋಜನೆಗಳನ್ನು ರೂಪಿಸಿ, ಶಿವಮೊಗ್ಗ ಜಿಲ್ಲೆ ಒಂದರಲ್ಲಿಯೇ ಸುಮಾರು 50 ಸಾವಿರ ಎಕರೆ ವನಪ್ರದೇಶ ರಕ್ಷಿಸುವ ಕೆಲಸ ಮಾಡಿದ ಪರಿಣಾಮವಾಗಿ ‘ಪಶ್ಚಿಮಘಟ್ಟ ಉಳಿಸಿ’ ಹೋರಾಟಕ್ಕೆ ಸಾಕಷ್ಟು ಮಟ್ಟಿಗೆ ನ್ಯಾಯ ಒದಗಿಸಿದ್ದೇನೆ’ ಎಂದು ಹೇಳಿದರು.

‘2010ರಲ್ಲಿಯೇ ಸಂರಕ್ಷಿತ ತಾಣವಾಗಿ ಘೋಷಿಸಲ್ಪಟ್ಟಿರುವ ಬಾಸೂರು ಅಮೃತಮಹಲ್ ಕಾವಲು ರಕ್ಷಿಸುವುದೂ ನಮ್ಮ ಧ್ಯೇಯ. ಅಲ್ಲಿರುವ ಅಮೃತಮಹಲ್ ತಳಿ, ಕುರುಚಲು ಕಾಡು, ಕೃಷ್ಣಮೃಗ, ಪಕ್ಷಿ ಸಂತತಿ, ಹುಲ್ಲುಗಾವಲು ರಕ್ಷಣೆ ಎಲ್ಲವೂ ನಮ್ಮ ಕರ್ತವ್ಯವೇ ಆಗಿದೆ. ಪರಿಸರ ಮತ್ತು ಅಭಿವೃದ್ಧಿ ಕಾರ್ಯಗಳ ನಡುವಿನ ತಾಕಲಾಟ ಇದ್ದದ್ದೇ, ಕಾವಲಿನಲ್ಲಿ ಹಾದುಹೋಗುವ ಭದ್ರಾ ಮೇಲ್ದಂಡೆ ವಿಷಯವಾಗಿ ನ್ಯಾಯಾಲಯದ ಆದೇಶ ಇರುವ ಕಾರಣ ಹೆಚ್ಚು ಹೇಳುವುದಿಲ್ಲ. ಇನ್ನು ‘ಮುಳ್ಳಯ್ಯನಗಿರಿ ಉಳಿಸಿ’ ವಿಷಯವಾಗಿ ಹೆಚ್ಚು ಮಾಹಿತಿ ಇಲ್ಲದ ಕಾರಣ ಪ್ರತಿಕ್ರಿಯಿಸುವುದಿಲ್ಲ. ಪಶ್ಚಿಮಘಟ್ಟ ಉಳಿಸಿ ಆಂದೋಲನದಲ್ಲಿ ಕೇವಲ 50 ಹಳ್ಳಿಗಳೊಡನೆ ಸಂವಹನ ನಡೆಸುತ್ತಿದ್ದ ನನಗೆ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಸ್ಥಾನದ ಮೂಲಕ ರಾಜ್ಯದ 6 ಸಾವಿರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೈಸರ್ಗಿಕ ಸಂಪತ್ತು ಸಂರಕ್ಷಿಸುವ ಸದವಕಾಶ ಒದಗಿಬಂದಿದೆ. ಬದ್ಧತೆಯಿಂದ ಈ ಕರ್ತವ್ಯ ನಿರ್ವಹಿಸುತ್ತೇನೆ’ ಎಂದರು.

ವಲಯ ಅರಣ್ಯಾಧಿಕಾರಿ ತನುಜ್ ಕುಮಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದೇವರಾಜ ನಾಯ್ಕ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪ್ರೇಮಾಬಾಯಿ, ಬಳ್ಳಿಗನೂರು ಪಿಡಿಒ ಮತ್ತು ಜೀವ ವೈವಿಧ್ಯ ಮಂಡಳಿ ಸಹಾಯಕ ಕಾರ್ಯದರ್ಶಿ ಶಿವಕುಮಾರ್, ಸದಸ್ಯರಾದ ಹರಿಶ್ಚಂದ್ರ ಕುಮಾರ್, ರಾಕೇಶ್, ಬೀರೂರು ಠಾಣೆ ಪಿಎಸ್‍ಐ ಬಸವರಾಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT