ಬುಧವಾರ, ಮಾರ್ಚ್ 29, 2023
25 °C
ಅಗ್ನಿಕುಂಡ ಹೊತ್ತ ಮಹಿಳೆಯರು, ದೇಗುಲ ಪ್ರದಕ್ಷಿಣೆ, ಗುಗ್ಗುಳ ಸೇವೆ

ಬೀರೂರು: ಸಂಭ್ರಮದ ಅಂತರಘಟ್ಟಮ್ಮ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀರೂರು: ‘ಜನ-ಜಾನುವಾರುಗಳ ರಕ್ಷಕಿ’ ಅಭಿದಾನದ ಬೀರೂರು ಗ್ರಾಮದೇವತೆ ಅಂತರಘಟ್ಟಮ್ಮನವರ ರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ಸಂಭ್ರಮದಿಂದ ನೆರವೇರಿತು.

ಸೋಮವಾರ ರಾತ್ರಿ ಕರಗಲ್ ಬೀದಿಯಲ್ಲಿರುವ ಅಮ್ಮನವರ ಸನ್ನಿಧಾನದಲ್ಲಿ ಅಭಿಷೇಕ, ಪುಷ್ಪಾಲಂಕಾರದ ನಂತರ ರಾತ್ರಿ ಬ್ರಹ್ಮ ರಥಾರೋಹಣ ನೆರವೇರಿತು. ಬಳಿಕ ಹರಕೆ ಸಲುವಾಗಿ ನೂರಾರು ಮಹಿಳೆಯರು ಅಗ್ನಿಕುಂಡಗಳನ್ನು ಹೊತ್ತು ಪವಾಡದ ರುದ್ರಸ್ವಾಮಿ ದೇಗುಲದ ಪ್ರದಕ್ಷಿಣೆ ಮೂಲಕ ಅಮ್ಮನವರ ರಥಕ್ಕೆ ಸುತ್ತು ಬಂದು ಗುಗ್ಗಳ ಸೇವೆ ಸಲ್ಲಿಸಿದರು.

ಮಂಗಳವಾರ ಬೆಳಗ್ಗೆ ಬೇವಿನಸೀರೆ ಸೇವೆ, ಅಮ್ಮನವರಿಗೆ ಮನೆಗಳಲ್ಲಿ ವಿಶೇಷವಾಗಿ ತಯಾರಿಸಲಾದ ಖಾದ್ಯಗಳ ನೈವೇದ್ಯ ಸಮರ್ಪಿಸಿದ ಭಕ್ತರು, ನಂತರ ಮನೆಗೆ ಬಂದಿದ್ದ ನೆಂಟರಿಷ್ಟರಿಗೆ ‘ಬಾಡೂಟದ ಔತಣ’ ನೀಡಿದರು.

ಸಿಂಗರಿಸಿದ ಎತ್ತಿನ ಬಂಡಿಗಳನ್ನು ಹೂಡಿ ಅದರಲ್ಲಿ ಪಾನಕ ಇರಿಸಿ ಅಂತರಘಟ್ಟಮ್ಮ ದೇವಾಲಯದ ಬಳಿ ಬಂದರು. ಮಧ್ಯಾಹ್ನದ ಬಿರು ಬಿಸಿಲು ಲೆಕ್ಕಿಸದೆ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ಕರಿಗಲ್ ಬೀದಿಯ ದೇವಾಲಯದಿಂದ ಜಾನಪದ ವಾದ್ಯಗಳು, ಅಸಾದಿ ಮೇಳ, ಚೋಮನ ಕುಣಿತ ಮೊದಲಾದ ವೈಶಿಷ್ಟ್ಯಪೂರ್ಣ ಮೇಳಗಳೊಡನೆ ಹೊರಟ ರಥೋತ್ಸವವು ಹಳೇಪೇಟೆ ತಲುಪಿ ಸಂಪಿಗೆ ಸಿದ್ದೇಶ್ವರ ದೇವಾಲಯದ ಬಳಿ ಸರಿದು ನಿಂತ ಬಳಿಕ, ಪಾನಕದ ಬಂಡಿಗಳ ಓಟಕ್ಕೆ ಅನುವು ಮಾಡಿಕೊಡಲಾಯಿತು.

ಅಲಂಕೃತ ಬಂಡಿಗಳನ್ನು ಸಿಂಗರಿಸಿದ ಜೋಡಿಎತ್ತುಗಳು ಶರವೇಗದಲ್ಲಿ ಎಳೆಯುತ್ತ ಹಳೇಪೇಟೆ ಮುಖ್ಯರಸ್ತೆಯಲ್ಲಿ ದೂಳೆಬ್ಬಿಸುತ್ತ ಸಾಗಿದವು. ಅಲ್ಲಿ ಅಡ್ಡಕಟ್ಟೆಗಳನ್ನು ಸ್ಥಾಪಿಸಿ ಭಕ್ತರು, ವೀಕ್ಷಕರ ನಿಯಂತ್ರಣಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಎತ್ತಿನ ಬಂಡಿಗಳಿಗೆ ಅಡ್ಡವಾಗುತ್ತಿದ್ದ ಯುವಕರನ್ನು ನಿಯಂತ್ರಸಿಲು ಪೊಲೀಸರು ಹರ
ಸಾಹಸ ಪಡಬೇಕಾಯಿತು. ಹಲವು ಬಂಡಿಗಳು ಚಾಲಕರ ನಿಯಂತ್ರಣ ತಪ್ಪಿ ಜನರ ಮೇಲೆ ನುಗ್ಗುವ ಪರಿಸ್ಥಿತಿ ನಿರ್ಮಾಣವಾದರೂ ಲೆಕ್ಕಿಸದೆ ಯುವಕರು ಶಿಳ್ಳೆ, ಕೇಕೆ ಹಾಕುತ್ತಾ ಬಂಡಿ ಓಟಕ್ಕೆ ಪ್ರೋತ್ಸಾಹ ನೀಡುತ್ತಿದ್ದರು.

65ಕ್ಕೂ ಹೆಚ್ಚು ಬಂಡಿಗಳು ಓಟದಲ್ಲಿ ಪಾಲ್ಗೊಂಡು, ಮಹಾನವಮಿ ಬಯಲಿನಲ್ಲಿರುವ ಅಂತರಘಟ್ಟಮ್ಮ ದೇವಾಲಯದ ಬಳಿ ನೆರೆದವರಿಗೆ ಪಾನಕ ವಿತರಿಸಿ ಮನೆಗಳಿಗೆ ತೆರಳಿದರು.
ಪಟ್ಟಣದ ಪ್ರತಿ ಮನೆಗಳಲ್ಲಿಯೂ ‘ಅಮ್ಮನಹಬ್ಬ’ದ ಸಡಗರ ಮೇಳೈಸಿ ಸಸ್ಯಾಹಾರಿಗಳು ಹೋಳಿಗೆ ಮಾಡಿ ಅರ್ಪಿಸಿದರೆ, ಮಾಂಸಾಹಾರ ಪದ್ಧತಿಯ ಮನೆಗಳಲ್ಲಿ ಕುರಿ-ಕೋಳಿಗಳ ಬಲಿ ನಡೆಯಿತು.

ರಾಜ್ಯದ ವಿವಿಧೆಡೆಗಳಲ್ಲಿ ನೆಲೆಸಿರುವ ಭಕ್ತರು ರಥೋತ್ಸವಕ್ಕೆ ಬಂದಿದ್ದರು. ಬುಧವಾರ ಅಮ್ಮನವರ ರಾಜಬೀದಿ ಉತ್ಸವದ ಬಳಿಕ ಅಮ್ಮನ ಹಬ್ಬಕ್ಕೆ ತೆರೆ ಬೀಳಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು